ಸಾರಾಂಶ
ನಗರದ ಪ್ರಮುಖ ಯಶವಂತಪುರ-ಚನ್ನಸಂದ್ರ ಜೋಡಿಹಳಿ ಯೋಜನೆ (21.7 ಕಿ.ಮೀ.) ಹಾಗೂ ಬೈಯ್ಯಪ್ಪನಹಳ್ಳಿ- ಹೊಸೂರು ಜೋಡಿ ಮಾರ್ಗ (48 ಕಿ.ಮೀ.) ಕಾಮಗಾರಿಗಳು ಕುಂಟುತ್ತಾ ಸಾಗಿವೆ.
ಮಯೂರ್ ಹೆಗಡೆ
ಬೆಂಗಳೂರು : ನಗರದ ಪ್ರಮುಖ ಯಶವಂತಪುರ-ಚನ್ನಸಂದ್ರ ಜೋಡಿಹಳಿ ಯೋಜನೆ (21.7 ಕಿ.ಮೀ.) ಹಾಗೂ ಬೈಯ್ಯಪ್ಪನಹಳ್ಳಿ- ಹೊಸೂರು ಜೋಡಿ ಮಾರ್ಗ (48 ಕಿ.ಮೀ.) ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಉಪನಗರ ರೈಲು ಅನುಷ್ಠಾನ ಸ್ಥಗಿತದಿಂದ ಟೀಕೆಗೊಳಗಾಗಿರುವ ಕೆ-ರೈಡ್ ಸಂಸ್ಥೆಯೆ ಇವೆರಡೂ ಯೋಜನೆ ನಿರ್ವಹಿಸುತ್ತಿದ್ದು, ಕಾಮಗಾರಿ ವಿಳಂಬಕ್ಕೆ ರೈಲ್ವೆ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವೆರಡೂ ಯೋಜನೆಗಳು ಕಳೆದ ವರ್ಷಾಂತ್ಯಕ್ಕೆ ಮುಗಿಯಬೇಕಿತ್ತು. ಪ್ರಯಾಣಿಕ, ಸರಕು ಸಾಗಣೆ ದೃಷ್ಟಿಯಿಂದ ಈ ಜೋಡಿ ಹಳಿ ಕಾಮಗಾರಿಗಳು ಮಹತ್ವ ಪಡೆದಿವೆ. ಆದರೆ, ಈವರೆಗೆ ಕೆಲಸ ಪ್ರಗತಿಯಲ್ಲೇ ಇದೆ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದಾರೆ.
₹ 683.57 ಕೋಟಿ ಮೊತ್ತದ ಯಶವಂತಪುರ-ಚನ್ನಸಂದ್ರ ಜೋಡಿಹಳಿ ಯೋಜನೆ ಕಾಮಗಾರಿ 2020ರ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಿದೆ. ಸದ್ಯ ಯಶವಂತಪುರದಿಂದ ಹೆಬ್ಬಾಳದ ನಡುವಿನ ವಿಭಾಗದ (10.3 ಕಿ.ಮೀ.) ಕಾಮಗಾರಿಗಳು ನಡೆಯುತ್ತಿವೆ. ಈ ಪೈಕಿ ಬೈಯ್ಯಪ್ಪನಹಳ್ಳಿಯಿಂದ ಚನ್ನಸಂದ್ರಕ್ಕೆ (2.7 ಕಿ.ಮೀ.) ಕಾಮಗಾರಿಯನ್ನು ನೈಋತ್ಯ ರೈಲ್ವೆ ನಿರ್ಮಾಣ ಇಲಾಖೆಯು ನಿರ್ವಹಿಸುತ್ತಿದೆ. ಇಲ್ಲಿಯವರೆಗೆ ಶೇ. 52 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಉಪನಗರ ರೈಲು ಯೋಜನೆಯ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ (ಮಲ್ಲಿಗೆ ಕಾರಿಡಾರ್) ಮಾರ್ಗಕ್ಕೆ ಸಮಾನಾಂತರವಾಗಿ ಈ ಜೋಡಿ ಮಾರ್ಗದ ಕಾಮಗಾರಿ ನಡೆದಿದೆ.
ಸದ್ಯ ನಗರದಲ್ಲಿರುವ ಪ್ರಮುಖ ಒಂದೇ ಹಳಿ ಮಾರ್ಗ ಇದು ಎನ್ನಿಸಿಕೊಂಡಿದೆ. ಬಾಣಸವಾಡಿ, ಹೆಬ್ಬಾಳದ ಮೂಲಕ ತುಮಕೂರು ಕಡೆಗೆ ಹೋಗಬೇಕಾದ ರೈಲುಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕಾಗುತ್ತದೆ. ತುಮಕೂರಿನ ಜನ ಕೇಳುತ್ತಿರುವ ಮೆಮು ರೈಲು ಸರಾಗವಾಗಿ ಓಡಾಡಲು ಈ ಜೋಡಿಹಳಿ ಅಗತ್ಯ. ಜತೆಗೆ ಎಸ್‌ಎಂವಿಟಿ ರೈಲ್ವೆ ನಿಲ್ದಾಣದಿಂದ ಮುಂದಕ್ಕೆ ಹೋಗುವ ರೈಲುಗಳು ಕೂಡ ಈ ಮಾರ್ಗ ಅವಲಂಬಿಸಿವೆ. ಪ್ರಯಾಣಿಕ ಮಾತ್ರವಲ್ಲದೆ ಸರಕು ಸಾಗಣೆ ದೃಷ್ಟಿಯಿಂದಲೂ ಈ ಮಾರ್ಗ ಪ್ರಮುಖ. ಆದರೆ, ಕಾಮಗಾರಿ ವಿಳಂಬದಿಂದ ಕ್ರಾಸಿಂಗ್‌ನಲ್ಲಿ ರೈಲು ನಿಲುಗಡೆ, ವಿಳಂಬ ಆಗುತ್ತಿದೆ ಎಂದು ರೈಲ್ವೆ ಹೋರಾಟಗಾರರು ಬೇಸರ ವ್ಯಕ್ತಪಡಿಸುತ್ತಾರೆ.
ಶೇ.83 ರಷ್ಟು ಕೆಲಸ ಪೂರ್ಣ:
2018-19ರಲ್ಲೇ ಬೈಯ್ಯಪ್ಪನಹಳ್ಳಿ- ಹೊಸೂರು ಜೋಡಿ ಮಾರ್ಗದ ಯೋಜನೆಯನ್ನು ರೈಲ್ವೆ ಮಂಡಳಿ ಮಂಜೂರು ಮಾಡಿತ್ತು. ₹1148 ಕೋಟಿ ಮೊತ್ತದ ಯೋಜನೆ ಇದು. ಕಾರ್ಮೆಲ್‌ರಾಮ್‌ನಿಂದ ಹೀಲಲಿಗೆ (10.3 ಕಿ.ಮೀ.) ಕಾಮಗಾರಿಯನ್ನು 2022-23 ಆರ್ಥಿಕ ವರ್ಷದಲ್ಲಿ ಕಾರ್ಯಾರಂಭ ಮಾಡಲಾಗಿತ್ತು. ಬೈಯಪ್ಪನಹಳ್ಳಿ ‘ಎ’ ಕ್ಯಾಬಿನ್‌ನಿಂದ ಕಾರ್ಮೆಲ್‌ರಾಮ್ (13 ಕಿ.ಮೀ.), ಆನೇಕಲ್ ರಸ್ತೆಯಿಂದ ಹೊಸೂರು (14.7 ಕಿ.ಮೀ.) ಮತ್ತು ಹೀಲಲಿಗೆಯಿಂದ ಆನೇಕಲ್ ರಸ್ತೆ (10.3 ಕಿ.ಮೀ.) ನಡುವಿನ ವಿಭಾಗದ ಕಾಮಗಾರಿ ನಡೆಯುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಈವರೆಗೆ ಶೇ.83 ರಷ್ಟು ಕೆಲಸ ಪೂರ್ಣಗೊಂಡಿದೆ.
ಸೇಲಂ ಮೂಲಕ ಬೆಂಗಳೂರು ಕಂಟೋನ್ಮೆಂಟ್‌ಗೆ ಹಾಗೂ ಅಲ್ಲಿಂದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬರುವ ರೈಲುಗಳು ಈ ಮಾರ್ಗದ ಮೂಲಕ ಸಂಚರಿಸಬೇಕು. ಆದರೆ, ಕಳೆದ ಡಿಸೆಂಬರ್‌ನಿಂದ ಕಾಮಗಾರಿ ಕುಂಠಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಆರ್ಥಿಕ ವರ್ಷದಿಂದ ಈವರೆಗೆಗೆ ಯಾವುದೇ ಡಬ್ಲಿಂಗ್ ಕಾಮಗಾರಿ ಮುಗಿದಿಲ್ಲ. ಯಶವಂತಪುರ-ಚನ್ನಸಂದ್ರ ಜೋಡಿಹಳಿ ಕಾಮಗಾರಿ ವಿಳಂಬವಾಗಿರುವುದು ಬೇಸರದ ವಿಚಾರ. ಕೆ-ರೈಡ್ ಸಂಸ್ಥೆ ಹಾಗೂ ನೈಋತ್ಯ ರೈಲ್ವೆ ಒಬ್ಬರ ಮೇಲೊಬ್ಬರು ಆರೋಪ ಮಾಡುವುದು ಬಿಟ್ಟು ಸಮನ್ವಯದಿಂದ ಡಬ್ಲಿಂಗ್ ಕಾಮಗಾರಿಯನ್ನು ಬೇಗ ಮುಗಿಸಬೇಕು.
- ಕೆ.ಎನ್.ಕೃಷ್ಣಪ್ರಸಾದ್, ರೈಲ್ವೆ ಸಾರಿಗೆ ತಜ್ಞರು