ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡಲು ಆಯೋಜಿಸಲಾಗಿದ್ದ 27ನೇ ಬೆಂಗಳೂರು ಟೆಕ್ ಶೃಂಗ ಸೂಪರ್‌ ಹಿಟ್‌

| Published : Nov 22 2024, 01:16 AM IST / Updated: Nov 22 2024, 07:23 AM IST

ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡಲು ಆಯೋಜಿಸಲಾಗಿದ್ದ 27ನೇ ಬೆಂಗಳೂರು ಟೆಕ್ ಶೃಂಗ ಸೂಪರ್‌ ಹಿಟ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡಲು ಆಯೋಜಿಸಲಾಗಿದ್ದ 27ನೇ ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಗುರುವಾರ ಅದ್ಧೂರಿ ತೆರೆ ಬಿದ್ದಿದೆ.

 ಬೆಂಗಳೂರು : ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡಲು ಆಯೋಜಿಸಲಾಗಿದ್ದ 27ನೇ ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ ಗುರುವಾರ ಅದ್ಧೂರಿ ತೆರೆ ಬಿದ್ದಿದೆ. ಮೂರು ದಿನಗಳ ಟೆಕ್‌ ಸಮ್ಮಿಟ್‌ನಲ್ಲಿ 50ಕ್ಕೂ ಹೆಚ್ಚಿನ ದೇಶದ ಪ್ರತಿನಿಧಿಗಳು, 50 ಸಾವಿರಕ್ಕೂ ಹೆಚ್ಚಿನ ತಂತ್ರಜ್ಞಾನ ಆಸಕ್ತರು ಭಾಗವಹಿಸಿದ್ದರು. 

ಜತೆಗೆ ರಾಜ್ಯದ ಆರ್ಥಿಕತೆ ಅಭಿವೃದ್ಧಿ ಸೇರಿ ಮತ್ತಿತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ ದೇಶದ ಮೊದಲ ಬಾಹ್ಯಾಕಾಶ ತಂತ್ರಜ್ಞಾನ ಕರಡು ನೀತಿ, ಗ್ಲೋಬಲ್‌ ಕೆಪೆಬಿಲಿಟಿ ಸೆಂಟರ್‌ (ಜಿಸಿಸಿ) ನೀತಿಗಳನ್ನು ಪ್ರಕಟಿಸುವ ಮೂಲಕ ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ ಸೇರಿ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೆ ಟೆಕ್‌ ಸಮ್ಮಿಟ್‌ನಲ್ಲಿ ಹೆಜ್ಜೆ ಇಡಲಾಯಿತು.

51 ದೇಶಗಳ ಪ್ರತಿನಿಧಿಗಳು ಭಾಗಿ:

3 ದಿನಗಳ ತಂತ್ರಜ್ಞಾನ ಶೃಂಗದಲ್ಲಿ 51 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅದರಲ್ಲೂ 20 ದೇಶಗಳ ಸಚಿವರು, ಉನ್ನತ ಮಟ್ಟದ ಅಧಿಕಾರಿಗಳು, ಉದ್ಯಮಿಗಳು ಸಮ್ಮಿಟ್‌ನಲ್ಲಿ ಪಾಲ್ಗೊಂಡಿದ್ದರು. ಐಟಿ-ಬಿಟಿ, ನವೋದ್ಯಮ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸಲು, ಮಾಹಿತಿ ವಿನಿಮಯ ಮಾಡಿಕೊಳ್ಳುವ ಉದ್ದೇಶದೊಂದಿಗೆ 521 ಜಾಗತಿಕ ಸ್ಪೀಕರ್‌ಗಳು ಭಾಗವಹಿಸಿದ್ದರು.

ತಂತ್ರಜ್ಞಾನ ಶೃಂಗದಲ್ಲಿ ಪಾಲ್ಗೊಳ್ಳಲು ಸಮ್ಮೇಳನ ಪ್ರತಿನಿಧಿಯಾಗಿ ಪಾಲ್ಗೊಳ್ಳಲು 5,210 ಮಂದಿ ನೊಂದಾಯಿಸಿಕೊಂಡಿದ್ದರು. ಒಟ್ಟಾರೆ 15,465 ಮಂದಿ ನೊಂದಾಯಿತ ಪ್ರತಿನಿಧಿಗಳು, 683 ಮಳಿಗೆದಾರರು, 21 ಸಾವಿರಕ್ಕೂ ಹೆಚ್ಚಿನ ನೊಂದಾಯಿತ ವ್ಯಾಪಾರ ಸಂದರ್ಶಕರು ಸೇರಿ 37 ಸಾವಿರಕ್ಕೂ ಹೆಚ್ಚಿನ ಮಂದಿ ಶೃಂಗದಲ್ಲಿ ಭಾಗವಹಿಸಿದ್ದರು. ಉಳಿದಂತೆ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿ 50 ಸಾವಿರಕ್ಕೂ ಹೆಚ್ಚಿನ ಮಂದಿ ಟೆಕ್‌ ಶೃಂಗದಲ್ಲಿ ಪಾಲ್ಗೊಂಡಿದ್ದರು.

ಟೆಕ್‌ ಶೃಂಗದಲ್ಲಿ ಒಟ್ಟು 84 ವಿಷಯಗಳ ಕುರಿತಂತೆ ಚರ್ಚೆಗಳು ನಡೆದವು. ಅವುಗಳಲ್ಲಿ 540 ವಿಷಯ ತಜ್ಞರು ಪಾಲ್ಗೊಂಡು ತಮ್ಮ ವಿಚಾರ ಮಂಡಿಸಿದರು. ನವೋದ್ಯಮಗಳಿಗೆ ಉತ್ತೇಜನ ನೀಡುವ ಸಲುವಾಗಿ 50 ಹೊಸ ಉತ್ಪನ್ನಗಳನ್ನು ಸಮ್ಮಿಟ್‌ನಲ್ಲಿ ಲೋಕಾರ್ಪಣೆ ಮಾಡಲಾಯಿತು.

2 ನೀತಿ, ಕೌಶಲ್ಯಾಭಿವೃದ್ಧಿಗೆ ಒಂದು ಒಪ್ಪಂದ:

ಟೆಕ್‌ ಸಮ್ಮಿಟ್‌ನಲ್ಲಿ ರಾಜ್ಯದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಮುಂದಿನ 5 ವರ್ಷದಲ್ಲಿ ₹300 ಕೋಟಿ ಡಾಲರ್‌ ಹೂಡಿಕೆ ಆಕರ್ಷಿಸುವ ಬಾಹ್ಯಾಕಾಶ ತಂತ್ರಜ್ಞಾನ ಕರಡು ನೀತಿ ಹಾಗೂ ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ 500 ಗ್ಲೋಬಲ್‌ ಕೆಪೆಬಿಲಿಟಿ ಕೇಂದ್ರಗಳನ್ನು ಸ್ಥಾಪಿಸುವುದು, 3.5 ಲಕ್ಷ ಉದ್ಯೋಗ ಸೃಷ್ಟಿ ಮತ್ತು ₹5 ಸಾವಿರ ಕೋಟಿ ಡಾಲರ್‌ ಬಂಡವಾಳ ಆಕರ್ಷಿಸುವ ದೇಶದ ಮೊದಲ ಜಿಸಿಸಿ ನೀತಿಯನ್ನು ಸಮ್ಮಿಟ್‌ನಲ್ಲಿ ಪ್ರಕಟಿಸಲಾಯಿತು. ಅದರೊಂದಿಗೆ 1 ಲಕ್ಷ ವಿದ್ಯಾರ್ಥಿಗಳಿಗೆ ಐಟಿ, ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಕೌಶಲ್ಯಾಭಿವೃದ್ಧಿಗಾಗಿ ಪ್ರಮುಖ 5 ಸಂಸ್ಥೆಗಳೊಂದಿಗೆ ನಿಪುಣ ಕರ್ನಾಟಕ ಅಡಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.

206 ನವೋದ್ಯಮಗಳಿಗೆ ಹೂಡಿಕೆ ಒಪ್ಪಂದ:

ನವೋದ್ಯಮಗಳಿಗೆ ಉತ್ತೇಜನ ನೀಡುವ ಸಲುವಾಗಿ ಟೆಕ್‌ ಸಮ್ಮಿಟ್‌ನಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಪ್ರತ್ಯೇಕ ವೇದಿಕೆಯನ್ನು ಒದಗಿಸಲಾಗಿತ್ತು. ಅದರಂತೆ 206 ನವೋದ್ಯಮಗಳಿಗೆ ಹೂಡಿಕೆದಾರರು ದೊರೆತಿದ್ದಾರೆ. ಜತೆಗೆ ಹೊಸ ನವೋದ್ಯಮಿಗಳಿಗೆ ಪರಿಣಿತರಿಂದ ಸಲಹೆ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಮೆಂಟರ್‌ ಮೆಂಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

4 ಸಾವಿರ ಆನ್‌ಲೈನ್‌, 605 ಆಫ್‌ಲೈನ್‌ ಬಿ2ಬಿ:

3 ದಿನಗಳ ಸಮ್ಮಿಟ್‌ನಲ್ಲಿನ 605 ಆಫ್‌ಲೈನ್‌ ಬ್ಯುಸಿನೆಸ್‌ 2 ಬ್ಯುಸಿನೆಸ್‌ ಸಭೆಗಳು ನಡೆದವು. ಹಾಗೆಯೇ, 4,700ಕ್ಕೂ ಹೆಚ್ಚಿನ ಆನ್‌ಲೈನ್‌ ಬಿ2ಬಿ ಸಭೆ ನಡೆದವು. 27 ವರ್ಷಗಳ ಟೆಕ್‌ ಸಮ್ಮಿಟ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಬಿ2ಬಿ ಸಭೆಗಳು ನಡೆದಿದ್ದು ಇದೇ ಮೊದಲಾಗಿದೆ.

2023-24ರಲ್ಲಿ 4.11 ಲಕ್ಷ ಕೋಟಿ ಐಟಿ ರಫ್ತು:

ಟೆಕ್‌ ಸಮ್ಮಿಟ್‌ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ 2023-24ನೇ ಸಾಲಿನಲ್ಲಿ ರಾಜ್ಯದ ಐಟಿ ಸಂಸ್ಥೆಗಳು ₹4.11 ಲಕ್ಷ ಕೋಟಿ ಐಟಿ ಸೇವೆಯನ್ನು ರಫ್ತು ಮಾಡಿವೆ. ಅದರಲ್ಲಿ ಬೆಂಗಳೂರು ನಗರ ಹೊರತುಪಡಿಸಿ ಹುಬ್ಬಳ್ಳಿ, ಮೈಸೂರು, ಮಂಗಳೂರು ಸೇರಿ ಮತ್ತಿತರ ನಗರಗಳಿಂದಲೇ ₹10 ಸಾವಿರ ಕೋಟಿವರೆಗೆ ಐಟಿ ಸೇವೆ ರಫ್ತಾಗಿದೆ.

ಮುಂದಿನ ವರ್ಷ ಸ್ಟಾರ್ಟ್‌ಅಪ್ ಪ್ರಶಸ್ತಿ: ನವೋದ್ಯಮಗಳಿಗೆ ಉತ್ತೇಜನ ನೀಡುವ ಸಲುವಾಗಿ ಎಲೆಕ್ಟ್ರಾನಿಕ್ಸ್‌, ಐಟಿ-ಬಿಟಿ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಸ್ಟಾರ್ಟ್‌ಅಪ್‌ಗಳಿಗೆ 2025ರ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಭಾರತ ಸ್ಟಾರ್ಟ್ಅಪ್‌ ಪ್ರಶಸ್ತಿ ನೀಡುವುದಾಗಿ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಘೋಷಿಸಿದ್ದಾರೆ. ಪರಿಣಿತ ತಜ್ಞರು, ಉದ್ಯಮಿಗಳು, ಹೂಡಿಕೆದಾರರನ್ನೊಳಗೊಂಡ ಆಯ್ಕೆಗಾರರ ಸಮಿತಿ ರಚಿಸಿ ಅತ್ಯುತ್ತಮ ಸ್ಟಾರ್ಟ್‌ಅಪ್‌ಗಳಿಗೆ ಪ್ರಶಸ್ತಿ ನೀಡುವುದಾಗಿ ತಿಳಿಸಿದ್ದಾರೆ. 

ಹಸಿರು ಬಿಟಿಎಸ್‌:

ಟೆಕ್‌ ಸಮ್ಮಿಟ್‌ನ್ನು ಸಂಪೂರ್ಣ ಪರಿಸರ ಸ್ನೇಹಿಯನ್ನಾಗಿ ಆಯೋಜಿಸಲಾಗಿತ್ತು. ಪ್ಲಾಸ್ಟಿಕ್‌ ಬಳಕೆಯನ್ನು ಬಹುತೇಕ ನಿಷೇಧಿಸಲಾಗಿತ್ತು. ಸಮ್ಮಿಟ್‌ನಲ್ಲಿ ಉತ್ಪತ್ತಿಯಾದ ತ್ಯಾಜ್ಯದಲ್ಲಿ ಶೇ. 98ರಷ್ಟನ್ನು ಸಂಸ್ಕರಿಸಲಾಗಿದೆ. ಇಂಗಾಲದ ಪ್ರಮಾಣ ಕಡಿಮೆ ಮಾಡಲು ಶೇ. 24 ಎಲೆಕ್ಟ್ರಾನಿಕ್‌ ವಾಹನಗಳನ್ನು ಬಳಸಲಾಯಿತು.

ಎಲಿವೇಟ್ ಕಾರ್ಯಕ್ರಮದ ಫಲಾನುಭವಿಯಿಂದ ಹೂಡಿಕೆಗೆ ಉತ್ತೇಜನ

ಐಟಿ-ಬಿಟಿ ಇಲಾಖೆಯ ಎಲಿವೇಟ್‌ ಕಾರ್ಯಕ್ರಮದ ಫಲಾನುಭವಿಯೊಬ್ಬರು ಸ್ಟಾರ್ಟ್‌ಅಪ್‌ ಆರಂಭಿಸಿ ನಂತರ ಬೆಲ್ಜಿಯಂನಲ್ಲಿ ತಮ್ಮ ಸಂಸ್ಥೆ ನೋಂದಣಿ ಮಾಡಿಕೊಂಡು ಅಲ್ಲಿನ ಮಾರುಕಟ್ಟೆಯಲ್ಲಿ ಬಯೋಟೆಕ್‌ ಬ್ಯೂಟಿ ಉತ್ಪನ್ನ ವ್ಯಾಪಾರ ನಡೆಸುತ್ತಿದ್ದರು. ಅವರು ಬೆಲ್ಜಿಯಂನ ಉದ್ಯಮಿಗಳ ಪ್ರತಿನಿಧಿಗಳನ್ನು ಬೆಂಗಳೂರು ಟೆಕ್‌ ಸಮ್ಮಿಟ್‌ಗೆ ಕರೆತಂದಿದ್ದು ವಿಶೇಷವಾಗಿತ್ತು.

ಸಮಾರೋಪದಲ್ಲಿ ಪಾಲುದಾರರಿಗೆ ಸನ್ಮಾನ:

ಬೆಂಗಳೂರು ಟೆಕ್‌ ಸಮ್ಮಿಟ್‌ನ ಸಮಾರೋಪ ಕಾರ್ಯಕ್ರಮದಲ್ಲಿ ಪಾಲುದಾರ ಸಂಸ್ಥೆಗಳು, ಪ್ರಮುಖ ಪ್ರದರ್ಶಕರನ್ನು ಐಟಿ-ಬಿಟಿ ಇಲಾಖೆಯಿಂದ ಸನ್ಮಾನಿಸಲಾಯಿತು. ಈ ವೇಳೆ ಸಚಿವರಾದ ಪ್ರಿಯಾಂಕ್‌ ಖರ್ಗೆ, ಡಾ. ಶರಣ ಪ್ರಕಾಶ್‌ ಪಾಟೀಲ್‌, ಈಶ್ವರ್‌ ಖಂಡ್ರೆ, ಕಿಯೋನಿಕ್ಸ್ ಅಧ್ಯಕ್ಷ ಶರತ್‌ ಬಚ್ಚೇಗೌಡ ಸೇರಿದಂತೆ ಹಲವು ಪಾಲ್ಗೊಂಡಿದ್ದರು.

ಟೆಕ್‌ ಸಮ್ಮಿಟ್‌ನಲ್ಲಾದ ಪ್ರಮುಖ ಬೆಳವಣಿಗೆಗಳು

* ಜರ್ಮನಿ ಜತೆಗೆ ಸುಸ್ಥಿರತೆ, ಉತ್ಪಾದಕತೆ ಕುರಿತಂತೆ ರಾಜ್ಯ ಸರ್ಕಾರ ಒಪ್ಪಂದ

* ಇನ್ನೋವೇಶನ್‌ ಕ್ಷೇತ್ರದ ಅಭಿವೃದ್ಧಿಗಾಗಿ ಫಿನ್‌ಲ್ಯಾಂಡ್‌ನೊಂದಿಗೆ ಒಡಂಬಡಿಕೆ

* ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‌ನೊಂದಿಗೆ ಒಪ್ಪಂದ

* ಫ್ರಾನ್ಸ್‌ ಟೆಕ್‌ ಸಮ್ಮಿಟ್‌ನ್ನು ಬೆಂಗಳೂರು ಟೆಕ್‌ ಸಮ್ಮಿಟ್‌ನ ಸಿಸ್ಟರ್‌ ಟೆಕ್‌ ಸಮ್ಮಿಟ್ ಎಂದು ಪರಗಣಿಸುವ ಕುರಿತು ಮಾತುಕತೆ

* ಶಾರ್ಜಾ ರಿಸರ್ಚ್‌ ಇನ್ನೋವೇಶನ್‌ ಪಾರ್ಕ್‌ ಸ್ಥಾಪನೆ ಕುರಿತು ಚರ್ಚೆ

* ಇನ್ಕ್ಯೂಬೇಷನ್‌ ಸೆಂಟರ್‌ ಸ್ಥಾಪನೆ ಕುರಿತು ಸ್ವೀಡನ್‌ ಉದ್ಯಮಿಗಳೊಂದಿಗೆ ಚರ್ಚೆ

* ಕೃತಕ ಬುದ್ಧಿಮತ್ತೆ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಕುರಿತು ಅಮೆರಿಕಾ ಪ್ರತಿನಿಧಿಗಳೊಂದಿಗೆ ಮಾತುಕತೆ ಮತ್ತು ಶೀಘ್ರ ಒಡಂಬಡಿಕೆಗೆ ನಿರ್ಧಾರ

*ಯುರೋಪಿಯನ್‌ ಕ್ಲಸ್ಟರ್‌ನಲ್ಲಿ ಭಾರತದ 1,500 ಸ್ಟಾರ್ಟ್‌ಅಪ್‌, ಎಂಎಸ್‌ಎಂಇ, ಎಸ್‌ಎಂಇಗಳ ನೋಂದಣಿಗೆ ಒಪ್ಪಂದ

* ಜಪಾನ್‌ನ ಮಾರುಕಟ್ಟೆಯಲ್ಲಿ ಡೀಪ್‌ ಟೆಕ್‌, ಎಲೆಕ್ಟ್ರಾನಿಕ್ಸ್‌ ಕ್ಷೇತ್ರಕ್ಕೆ ಸಂಬಂಧಿಸಿದ ರಾಜ್ಯದ 15 ಸ್ಟಾರ್ಟ್‌ಅಪ್‌ಗಳ ನೋಂದಣಿಗೆ ಅನುಮತಿ

* ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಎಕ್ಸಲೆನ್ಸಿ ಕೇಂದ್ರ ಸ್ಥಾಪನೆಗೆ ಬೆಂಗಳೂರು ಐಐಟಿ ಅಲುಮ್ನಿ ಕೇಂದ್ರದ ಜತೆಗೆ ಒಡಂಬಡಿಕೆ

ಪ್ರಮುಖಾಂಶ

* 51 ದೇಶಗಳ ಪ್ರತಿನಿಧಿಗಳು ಭಾಗಿ

* 521 ವಿಷಯ ತಜ್ಞರಿಂದ ವಿಚಾರ ವಿನಿಮಯ

* ಟೆಕ್‌ ಸಮ್ಮಿಟ್‌ನಲ್ಲಿ 683 ಪ್ರದರ್ಶಕರು

* ಎಕ್ಸ್‌ಪೋಗೆ 50 ಸಾವಿರಕ್ಕೂ ಹೆಚ್ಚಿನ ಮಂದಿ ಭೇಟಿ

* ಸಾಮಾಜಿಕ ಜಾಲತಾಣಗಳಲ್ಲಿ 35 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ

27ನೇ ಬೆಂಗಳೂರು ತಂತ್ರಜ್ಞಾನ ಶೃಂಗ ಅಭೂತಪೂರ್ವ ಯಶಸ್ಸು ಗಳಿಸಿದೆ. 51 ದೇಶಗಳ ಪ್ರತಿನಿಧಿಗಳು ಭಾಗವಹಿಸಿ ಐಟಿ ಕ್ಷೇತ್ರದ ಅಭಿವೃದ್ಧಿ ಕುರಿತು ವಾಗ್ದಾನ ನೀಡಿದ್ದಾರೆ. ಜತೆಗೆ ನವೋದ್ಯಮಗಳಿಗೆ ಹೊಸ ವೇದಿಕೆ, ಹೂಡಿಕೆ ಒದಗಿಸುವಲ್ಲಿ ಟೆಕ್‌ ಸಮ್ಮಿಟ್‌ ಯಶಸ್ವಿಯಾಗಿದೆ. ಬಾಹ್ಯಕಾಶ ತಂತ್ರಜ್ಞಾನ ನೀತಿ, ಜಿಸಿಸಿ ನೀತಿಗಳು ರಾಜ್ಯದ ಆರ್ಥಿಕತೆ ವೃದ್ಧಿಗೆ ಸಹಕಾರಿಯಾಗಲಿದೆ ಹಾಗೂ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿಗೆ ಪೂರಕವಾದ ಹಲವು ಬೆಳವಣಿಗೆಗಳು ಟೆಕ್‌ ಸಮ್ಮಿಟ್‌ನಲ್ಲಿ ನಡೆದಿವೆ.

ಪ್ರಿಯಾಂಕ್‌ ಖರ್ಗೆ, ಐಟಿ-ಬಿಟಿ ಸಚಿವ