ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕಳೆದ ಅರವತ್ತು ವರ್ಷಗಳಿಂದ ನಗರದ ಶ್ರೀರಾಜರಾಜೇಶ್ವರಿ ನೃತ್ಯ ಕಲಾಮಂದಿರ, ಮಕ್ಕಳಿಗೆ ಪಂದಾನಲ್ಲೂರು ಶೈಲಿಯ ಭರತನಾಟ್ಯವನ್ನು ಕಲಿಸುವ ಮೂಲಕ ನಾಡಿನ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್ ಕುಮಾರ್ ತಿಳಿಸಿದ್ದಾರೆ.ನಗರದ ಬಟವಾಡಿಯ ಮಂಜುನಾಥ ನಗರದಲ್ಲಿರುವ ಗುರುಕುಲ ಗ್ರುಪ್ ಆಪ್ ಎಜ್ಯುಕೇಷನ್‌ನ ಕಲಾಮಂದಿರದಲ್ಲಿ ಕೆ.ಆರ್.ಬಡಾವಣೆಯ ಶ್ರೀರಾಜರಾಜೇಶ್ವರಿ ನೃತ್ಯ ಕಲಾಮಂದಿರದ ವತಿಯಿಂದ ಆಯೋಜಿಸಿದ್ದ ಶಿವತಾಂಡವಂ ವರ್ಡ್ ರೇಕಾರ್ಡ್ ಡ್ಯಾನ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭರತನಾಟ್ಯ ಕಲಿಯುವುದರಿಂದ ಮಕ್ಕಳಲ್ಲಿ ಏಕಾಗ್ರತೆ, ಗ್ರಹಣ ಶಕ್ತಿ ಹೆಚ್ಚಾಗಲಿದೆ.ಇದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೆಲಸ ಮಾಡುತ್ತದೆ.ಮಕ್ಕಳಲ್ಲಿ ಹೊಂದಾಣಿಕೆ ಮನೋಭಾವನೆಯನ್ನು ರೂಢಿಸುತ್ತದೆ ಎಂದರು.ಗುರುಕುಲ ಗ್ರೂಫ್ ಅಫ್ ಎಜುಕೇಷನ್‌ನ ಕಾರ್ಯದರ್ಶಿ ರಶ್ಮಿ ಮಧುಜೈನ್ ಮಾತನಾಡಿ, ಇಂದು ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ,ವಿದೇಶಿ ಹಾಡುಗಳ ಜೊತೆಗೆ, ಪಾಶ್ಚತ್ಯ ನೃತ್ಯ ಪ್ರಕಾರಗಳನ್ನು ಮೈಗೂಡಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ನಮ್ಮ ಗುರುಕುಲ ಶಾಲೆಯ ಮಕ್ಕಳಿಗೆ ಭರತನಾಟ್ಯ ಸೇರಿದಂತೆ ದೇಶಿಯ ಕಲೆಗಳನ್ನು ಕಲಿಯಲು ಹೆಚ್ಚು ಪ್ರೋತ್ಸಾಹಿಸಲಾಗುತ್ತಿದೆ ಎಂದರು.ಬೇರೆ ಪ್ರಕಾರದ ನೃತ್ಯ ಕಲಿಸುವ ಮನವಿ ಬಂದಾಗ ತಿರಸ್ಕರಿಸಿ, ಭರತನಾಟ್ಯಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದೇವೆ.ಇದು ನಮ್ಮ ಸಂಸ್ಕೃತಿ,ಪರಂಪರೆಯನ್ನು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಕಲಿಸಿ, ಅವರನ್ನು ಸತ್ಪ್ರಜೆಗಳಾಗಿ ರೂಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಶ್ರೀರಾಜರಾಜೇಶ್ವರಿ ನೃತ್ಯ ಕಲಾಮಂದಿರದ ಸಹಯೋಗದಲ್ಲಿ ನಮ್ಮ ಮಕ್ಕಳು ಭರತನಾಟ್ಯ ಕಲಿತು, ಪ್ರದರ್ಶನ ನೀಡುತಿದ್ದಾರೆ ಎಂದರು.ಗುರುಕುಲ ಗ್ರೂಫ್ ಅಫ್ ಎಜುಕೇಷನ್‌ನ ಮಧು ಜೈನ್ ಮಾತನಾಡಿ,ಮಕ್ಕಳು ಭರತನಾಟ್ಯ ಕಲಿಯಲು ಆರಂಬಿಸಿದ ದಿನದಿಂದ ಮೊಬೈಲ್ ನೋಡುವುದನ್ನು ಬಿಟ್ಟಿದ್ದಾರೆ.ಇದು ನಮಗೆ ಎಲ್ಲಿಲ್ಲದ ಖುಷಿಯನ್ನು ನೀಡಿದೆ. ಮಕ್ಕಳಲ್ಲಿ ಅಮೂಲಾಗ್ರ ಬದಲಾವಣೆ ಇದರಿಂದ ಸಾಧ್ಯ ಎಂದರು.ವೇದಿಕೆಯಲ್ಲಿ ಪತ್ರಕರ್ತರಾದ ಜಯಣ್ಣ ಬೆಳಗೆರೆ, ಎಚ್.ಎನ್.ಮಲ್ಲೇಶ್, ನಾಟ್ಯ ಗುರುಗಳಾದ ಡಾ.ಸತ್ಯವತಿ, ಗಿರೀಶ್ ರಾಮನ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಏಕ ಕಾಲಕ್ಕೆ ಮಲೆಷಿಯಾ, ಥೈಲ್ಯಾಂಡ್ ಸೇರಿದಂತೆ ಒಟ್ಟು ೧೪ ಕಡೆಗಳಲ್ಲಿ ಸಾವಿರಾರು ನೃತ್ಯ ಪಟುಗಳು ಶಿವತಾಂಡವಂ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ವಿಶ್ವ ದಾಖಲೆಗೆ ಮುನ್ನುಡಿ ಬರೆದರು.