ಭಾಸ್ಕರರಾವ್‌ ಆದರ್ಶ, ಪಾರದರ್ಶಕ ವ್ಯಕ್ತಿತ್ವದ ಪತ್ರಕರ್ತ: ಹರಿಪ್ರಕಾಶ

| Published : Apr 05 2024, 01:07 AM IST

ಭಾಸ್ಕರರಾವ್‌ ಆದರ್ಶ, ಪಾರದರ್ಶಕ ವ್ಯಕ್ತಿತ್ವದ ಪತ್ರಕರ್ತ: ಹರಿಪ್ರಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಭಾಸ್ಕರರಾವ್ ಅವರು ಸಾವಿನ ಮನೆ ಕದ ತಟ್ಟುವ ಸಂದರ್ಭದಲ್ಲಿಯೂ ಬಹಳಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರು ಎಂದು ಪತ್ರಕರ್ತ ಹರಿಪ್ರಕಾಶ ಕೋಣೆಮನೆ ತಿಳಿಸಿದರು.

ಯಲ್ಲಾಪುರ: ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರರಾವ್ ನಿಧನಕ್ಕೆ ಯಲ್ಲಾಪುರದ ಪತ್ರಕರ್ತರು ಮತ್ತು ಗಣ್ಯರು ಗುರುವಾರ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಿದರು.

ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಎಂ.ಕೆ. ಭಾಸ್ಕರರಾವ್ ಅವರು ವೃತ್ತಿಯ ಬಗ್ಗೆ ಬಹಳಷ್ಟು ಪ್ರೀತಿ ಬೆಳೆಸಿಕೊಂಡಿದ್ದರು. ನಿವೃತ್ತಿಯ ನಂತರ ೨೦ ವರ್ಷದವರೆಗೆ ಎಲ್ಲ ಕ್ರಿಯಾಶೀಲ ಪತ್ರಕರ್ತರಗಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರು. ಕರ್ನಾಟಕದ ರಾಜಕಾರಣ, ಇಲ್ಲಿಯ ಸಂಸ್ಕೃತಿ ಪರಿಸರದ ಬಗ್ಗೆ ನಿರಂತರವಾಗಿ ಅರಿತುಕೊಳ್ಳುತ್ತಿದ್ದರು. ಸಾವಿನ ಮನೆ ಕದ ತಟ್ಟುವ ಸಂದರ್ಭದಲ್ಲಿಯೂ ಅವರು ಬಹಳಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರು. ಹೊಸ ತಲೆಮಾರಿನ ಪತ್ರಕರ್ತರು ಭಾಷೆ ಹಾಗೂ ವಿಷಯ ಅಧ್ಯಯನ ಹೊಂದಿರಬೇಕೆಂದು ಬಯಸುತ್ತಿದ್ದ ಅವರು, ಯುವ ಪತ್ರಕರ್ತರೊಂದಿಗೆ ಬಹಳಷ್ಟು ಹೊಂದಿಕೊಳ್ಳುತ್ತಿದ್ದರು. ವೃತ್ತಿಯಲ್ಲಿ ಪಾರದರ್ಶಕತೆಯನ್ನು ಉಳಿಸಿಕೊಂಡಿದ್ದ ಭಾಸ್ಕರರಾವ್ ಪತ್ರಕರ್ತರಿಗೆ ಆದರ್ಶ ವ್ಯಕ್ತಿ, ಅವರ ಆದರ್ಶಗಳನ್ನು ನಾವು ಪಾಲಿಸಿದರೆ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದರು.ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಮಾತನಾಡಿ, ಎಂ.ಕೆ. ಭಾಸ್ಕರರಾವ್ ನಾನು ಮೆಚ್ಚಿರುವ ಉತ್ತಮ ಪತ್ರಕರ್ತರಾಗಿದ್ದರು. ಪ್ರಜಾವಾಣಿಯಲ್ಲಿ ಕೆಲಸ ಮಾಡುವಾಗ ಅವರನ್ನು ಬಹಳಷ್ಟು ಹತ್ತಿರದಿಂದ ಕಂಡಿದ್ದೇನೆ. ಹಿರಿಯ, ಕಿರಿಯ ಪತ್ರಕರ್ತರೊಂದಿಗೆ ಅವರು ಬೆರೆಯುತ್ತಿದ್ದರು. ಬಹಳಷ್ಟು ವಿಷಯದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು ಎಂದ ಅವರು, ನಾವು ಒಳ್ಳೆಯ ಪತ್ರಕರ್ತರು ಓರ್ವ ಮಾನವತಾವಾದಿಯನ್ನು ಕಳೆದುಕೊಂಡಿದ್ದೇವೆ ಎಂದರು.ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಎಂ.ಕೆ. ಭಾಸ್ಕರರಾವ್ ಅವರು, ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು ಹಾಗೂ ರಾಮಕೃಷ್ಣ ಹೆಗಡೆ ಹೀಗೆ ಬಹಳಷ್ಟು ದೊಡ್ಡವರ ಉದಾಹರಣೆಗಳನ್ನು ತೆಗೆದುಕೊಂಡು ರಾಜಕೀಯ ವಿಶ್ಲೇಷಣೆ ಮಾಡುತ್ತಿದ್ದರು. ಹಿಂದಿನ ಅನೇಕ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಮಾತಿನಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದರು. ಅಲ್ಲದೇ, ಎಲ್ಲ ರಾಜಕೀಯ ಪಕ್ಷಗಳ ಮೆರಿಟ್ ಹಾಗೂ ಡಿಮೆರಿಟ್ ನೇರವಾಗಿ ತಿಳಿಸುತ್ತಿದ್ದರು. ಪತ್ರಕರ್ತರಿಗೆ ಬಹಳಷ್ಟು ಋಣಾತ್ಮಕ ಅಂಶಗಳಿರುತ್ತವೆ. ಆದರೆ ಭಾಸ್ಕರರಾವ್ ಅವರಲ್ಲಿ ಯಾವುದೇ ಋಣಾತ್ಮಕ ಅಂಶಗಳು ಇರಲಿಲ್ಲ ಎಂದರು.ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಪತ್ರಕರ್ತರಾದ ಶಂಕರ ಭಟ್ಟ ತಾರೀಮಕ್ಕಿ, ನಾಗರಾಜ ಮದ್ಗುಣಿ, ಕೆ.ಎಸ್. ಭಟ್ಟ ಆನಗೋಡ, ಪ್ರಭಾ ಜಯರಾಜ, ಜಿ.ಎನ್. ಭಟ್ಟ ತಟ್ಟಿಗದ್ದೆ, ಕೇಬಲ್ ನಾಗೇಶ, ಜಯರಾಜ ಗೋವಿ, ಸಿ.ಆರ್. ಶ್ರೀಪತಿ ನುಡಿ ನಮನ ಸಲ್ಲಿಸಿದರು. ಪತ್ರಕರ್ತರಾದ ಜಗದೀಶ ನಾಯಕ, ವಿ.ಜಿ. ಗಾಂವ್ಕರ, ಶ್ರೀಧರ ಅಣಲಗಾರ ಇತರರು ಇದ್ದರು.