ಸಾರಾಂಶ
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ಶಕ್ತಿ ಪ್ರದರ್ಶನ, ಪುರಭವನದಲ್ಲಿ ಬಹಿರಂಗ ಸಭೆ ನಡೆಸಿದ ಬಳಿಕ ಕ್ಯಾ.ಬ್ರಿಜೇಶ್ ಚೌಟ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಗುರುವಾರ ಮಂಗಳೂರಿನಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ನಾಮಪತ್ರ ಸಲ್ಲಿಸಿದರು.ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ಶಕ್ತಿ ಪ್ರದರ್ಶನ, ಪುರಭವನದಲ್ಲಿ ಬಹಿರಂಗ ಸಭೆ ನಡೆಸಿದ ಬಳಿಕ ಕ್ಯಾ.ಬ್ರಿಜೇಶ್ ಚೌಟ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆ ಆರಂಭ ದಿನವೂ ನಾಮಪತ್ರ ಸಲ್ಲಿಸಿದ್ದು, ಒಟ್ಟು ನಾಲ್ಕು ಪ್ರತಿಗಳಲ್ಲಿ ಕ್ಯಾ.ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಸಿದಂತಾಗಿದೆ.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಾಥ್ ನೀಡಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಯಾ.ಬ್ರಿಜೇಶ್ ಚೌಟ, ನನ್ನ ಮೇಲೆ ಪ್ರೀತಿ, ವಿಶ್ವಾಸ, ಸಹಕಾರ ಹೀಗೆಯೇ ಮುಂದುವರಿಯಲಿ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲರ ಹಾರೈಕೆ ಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಆದ್ಯತೆ ಜತೆಗೆ ಜಿಲ್ಲೆಯನ್ನು ಹಿಂದುತ್ವದ ಭದ್ರಕೋಟೆಯಾಗಿ ಮಾರ್ಪಡಿಸಲಾಗುವುದು. ಮುಂದಿನ 20 ದಿನಗಳ ಕಾಲ ಎಲ್ಲರೂ ಬಿಜೆಪಿ ಬಗ್ಗೆಯೇ ಮಾತನಾಡುವ ಮೂಲಕ ಪೂರಕ ವಾತಾವರಣ ಸೃಷ್ಟಿಗೆ ಮುಂದಾಗಬೇಕು ಎಂದರು.