ಬಿದ್ದ ಮರ, ಕೊಂಬೆ ತೆರವಿಗೆ ಬೈಕ್‌ ತಂಡ

| Published : May 08 2024, 01:31 AM IST

ಸಾರಾಂಶ

ಮರ ಬಿದ್ದಾಗ ಸ್ಥಳ ತಲುಪಲು ತ್ವರಿತವಾಗಿ ಬೈಕ್‌ ತಂಡ ರಚನೆ ಮಾಡಲಾಗಿದ್ದು ವಲಯಕ್ಕೆ 1 ತಂಡದಂತೆ 8 ತಂಡ ರಚನೆಯಾಗಿದೆ. ಇದರಿಂದ ಟ್ರಾಫಿಕ್‌ ನಿವಾರಣೆಯೂ ಸುಲಭಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಳೆಯಿಂದಾಗಿ ಬಿದ್ದ ಮರ ಹಾಗೂ ಮರದ ಕೊಂಬೆಗಳನ್ನು ಶೀಘ್ರ ತೆರವುಗೊಳಿಸಲು ಬಿಬಿಎಂಪಿಯು ಬೈಕ್‌ ತಂಡಗಳನ್ನು ನಿಯೋಜಿಸಲು ಮುಂದಾಗಿದೆ.

ಮಳೆ-ಗಾಳಿಗೆ ಬಿದ್ದ ಮರ ಹಾಗೂ ಮರ ಕೊಂಬೆಯಿಂದ ಸಾಕಷ್ಟು ಸಂಚಾರ ದಟ್ಟಣೆ ಉಂಟಾಗಲಿದೆ. ಇಂತಹ ಸಂದರ್ಭದಲ್ಲಿ ದೊಡ್ಡ ವಾಹನಗಳು ಸ್ಥಳಕ್ಕೆ ತೆರಳಿ ಬಿದ್ದ ಮರ ಹಾಗೂ ಮರ ಕೊಂಬೆಗಳನ್ನು ತೆರವುಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಲು ಬಿಬಿಎಂಪಿಯು ಮರ ತೆರವುಗೊಳಿಸಲು ಬೈಕ್‌ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲು ಮುಂದಾಗಿದೆ.

ಬೈಕ್‌ನಲ್ಲಿ ಮರ ಕತ್ತರಿಸಲು ಬೇಕಾದ ಸಾಧನಗಳೊಂದಿಗೆ ಇಬ್ಬರು ವ್ಯಕ್ತಿಗಳು ಎಷ್ಟೇ ಸಂಚಾರ ದಟ್ಟಣೆ ಇದ್ದರೂ ಮರ ಬಿದ್ದ ಸ್ಥಳಕ್ಕೆ ತಲುಪಬಹುದು. ಸ್ವಲ್ಪ ಮಟ್ಟಿಗೆ ಸಂಚಾರ ದಟ್ಟಣೆಯನ್ನು ಶೀಘ್ರದಲ್ಲಿ ನಿವಾರಣೆ ಮಾಡಬಹುದು. ವಲಯಕ್ಕೆ ಒಂದು ಬೈಕ್‌ ತಂಡದಂತೆ ಎಂಟು ವಲಯಗಳಿಗೆ ನಿಯೋಜನೆ ಮಾಡಿಕೊಳ್ಳಲಾಗುವುದು. ಮರಗಳು ಹಾಗೂ ರೆಂಬೆ, ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು 28 ಖಾಯಂ ತಂಡಗಳ ಜತೆಗೆ ಹೆಚ್ಚುವರಿಯಾಗಿ 6 ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಂಗಳವಾರದ ಸಭೆಯಲ್ಲಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ತುಷಾರ್‌ ಗಿರಿನಾಥ್‌, ಆಯಾ ವಲಯ ವ್ಯಾಪ್ತಿಯ ಅಧಿಕಾರಿಗಳು ಮಳೆಗಾಲದ ವೇಳೆ ಎಲ್ಲಿಯೂ ಸಮಸ್ಯೆ ಆಗದಂತೆ ಕ್ರಮವಹಿಸಬೇಕು. ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಮಳೆ ನೀರಿನ ಸರಾಗ ಹರಿವಿಗೆ ಸಮಸ್ಯೆ ಆಗಲಿದೆಯೇ ಎಂಬುದನ್ನು ಪರಿಶೀಲಿಸಬೇಕು. ಏನಾದರು ಸಮಸ್ಯೆ ಇದ್ದಲ್ಲಿ ಮೆಟ್ರೋ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ಸಮಸ್ಯೆ ಪರಿಹರಿಸಬೇಕು ಎಂದು ತಿಳಿಸಿದರು.

ರಾಜಕಾಲುವೆ ಹಾಗೂ ರಸ್ತೆ ಬದಿ ಚರಂಡಿಗಳಲ್ಲಿ ಹೂಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮವಹಿಸಬೇಕು. ನಗರದಲ್ಲಿ ಭಾರಿ ಮಳೆಯಾಗುವ ಸಮಯದಲ್ಲಿ ರಸ್ತೆಗಳ ಮೇಲೆ ಹೆಚ್ಚು ನೀರು ನಿಂತು ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಮೇಲೆ ಬೀಳುವ ನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಶೋಲ್ಡರ್ ಡ್ರೈನ್‌ಗಳ ಬಳಿ ಸ್ವಚ್ಚತೆ ಕಾಪಾಡಲು ಸೂಚಿಸಿದರು.ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ। ಕೆ.ಹರೀಶ್ ಕುಮಾರ್, ವಿಪತ್ತು ನಿರ್ವಹಣೆಯ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್, ಎಲ್ಲ ವಲಯ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್...

ನಿಯಂತ್ರಣ ಕೊಠಡಿ ಸಕ್ರಿಯಗೊಳಿಸಿ

ಪಾಲಿಕೆ 8 ವಲಯಗಳು ಹಾಗೂ ಕೇಂದ್ರ ಕಚೇರಿ ಸೇರಿದಂತೆ 9 ಶಾಶ್ವತ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಮಳೆಗಾಲದ ವೇಳೆ ತಾತ್ಕಾಲಿಕವಾಗಿ 63 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿಕೊಂಡು, ಅಗತ್ಯವಿರುವ ಪಂಪ್‌ಸೆಟ್, ಸಲಕರಣೆಗಳು, ತಂಡಗಳನ್ನು ಸನ್ನದ್ಧವಾಗಿಟ್ಟು ಕೊಳ್ಳಬೇಕೆಂದು ತುಷಾರ್‌ ಸೂಚಿಸಿದರು.

ಸಮಸ್ಯೆ ಪರಿಹಾರಕ್ಕೆ ವಾಟ್ಸಪ್ ಗ್ರೂಪ್‌

ನಗರದಲ್ಲಿ ಮಳೆಗಾಲದ ವೇಳೆ ನಾಗರಿಕರ ಸಮಸ್ಯೆಗೆ ಕೂಡಲೆ ಸ್ಪಂದಿಸಲು ಪಾಲಿಕೆ, ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳನ್ನು ಒಳಗೊಂಡಂತೆ ಆಯಾ ವಲಯದ ಉಪ ವಿಭಾಗವಾರು ವ್ಯಾಟ್ಸಪ್ ಗ್ರೂಪ್‌ಗಳನ್ನು ರಚಿಸಿಕೊಂಡು, ಅದರ ಮೂಲಕ ಬಂದಂತರ ದೂರು, ಸಮಸ್ಯೆಗಳನ್ನು ಕೂಡಲೇ ಇತ್ಯರ್ಥಪಡಿಸಬೇಕೆಂದು ತುಷಾರ್‌ ಗಿರಿನಾಥ್‌ ಸೂಚನೆ ನೀಡಿದರು.