ಸಾರಾಂಶ
ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತಕ್ಕೆ ಕಾರಣ ಆಗುತ್ತಿರುವ ಸ್ವಾರ್ಥಿ ಮುಖಂಡರ ವಿರುದ್ಧ ಶೀಘ್ರವೇ ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರ ಬಳಿ ನಿಯೋಗ ತೆರಳಿ, ಆಗುತ್ತಿರುವ ಬೆಳವಣಿಗೆಗಳಿಗೆ ಕಡಿವಾಣ ಹಾಕಿ, ಪಕ್ಷದ ಬಲವರ್ಧನೆಗೆ ಒತ್ತು ನೀಡುವಂತೆ ಮನವಿ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.
ದಾವಣಗೆರೆ : ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತಕ್ಕೆ ಕಾರಣ ಆಗುತ್ತಿರುವ ಸ್ವಾರ್ಥಿ ಮುಖಂಡರ ವಿರುದ್ಧ ಶೀಘ್ರವೇ ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕರ ಬಳಿ ನಿಯೋಗ ತೆರಳಿ, ಆಗುತ್ತಿರುವ ಬೆಳವಣಿಗೆಗಳಿಗೆ ಕಡಿವಾಣ ಹಾಕಿ, ಪಕ್ಷದ ಬಲವರ್ಧನೆಗೆ ಒತ್ತು ನೀಡುವಂತೆ ಮನವಿ ಮಾಡಲು ಪಕ್ಷದ ನಿಷ್ಟಾವಂತ ಕಾರ್ಯಕರ್ತರು, ಅಭಿಮಾನಿಗಳು ನಗರದಲ್ಲಿ ಭಾನುವಾರ ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ನಗರದ ಖಾಸಗಿ ಸಭಾಂಗಣವೊಂದರಲ್ಲಿ ಭಾನುವಾರ ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರು, ಮಾಜಿ ಮೇಯರ್, ಪಾಲಿಕೆ ಮಾಜಿ ಸದಸ್ಯರು, ಮಾಜಿ ಪದಾಧಿಕಾರಿಗಳು, ಯುವ ಕಾರ್ಯಕರ್ತರು, ಅಭಿಮಾನಿಗಳು ಸಭೆ ನಡೆಸಿದರು. ದಾವಣಗೆರೆ ಬಿಜೆಪಿಯಲ್ಲಿ ದಿನದಿನಕ್ಕೂ ಹೊಗೆಯಾಡುತ್ತಿರುವ ಭಿನ್ನಮತಕ್ಕೆ ಅಂತ್ಯ ಹಾಡಿ, ಪಕ್ಷವನ್ನು ಮತ್ತೆ ಹಳೇ ಲಯಕ್ಕೆ ತರುವಂತೆ ರಾಜ್ಯ, ರಾಷ್ಟ್ರೀಯ ನಾಯಕರ ಬಳಿ ನಿಯೋಗ ಹೋಗಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಬಹುತೇಕ ಹಿರಿಯ ಮುಖಂಡರು, ಜಿಲ್ಲೆಯ ಭಿನ್ನಮತಕ್ಕೆ ಕೆಲ ಸ್ವಾರ್ಥಿ ಮುಖಂಡರೇ ಕಾರಣವಾಗಿದ್ದಾರೆ. ಮಧ್ಯ ಕರ್ನಾಟಕದಲ್ಲಿ ನೆರೆಹೊರೆಯ ಜಿಲ್ಲೆಗಳಿಗಿಂತ ಬಲಿಷ್ಠವಾಗಿದ್ದ ಬಿಜೆಪಿಯಲ್ಲಿ ಬಿರುಕು ಉಂಟಾಗಲು ಇಂತಹ ಸ್ವಾರ್ಥಿ ಮುಖಂಡರು, ಕೆಲವು ಅವಕಾಶವಾದಿಗಳು ಕಾರಣವಾಗುತ್ತಿದ್ದಾರೆ. ಪಕ್ಷದಲ್ಲಿನ ಗುಂಪುಗಾರಿಕೆಯಿಂದ ನಾವಷ್ಟೇ ಅಲ್ಲ, ನಮ್ಮಂತಹ ಲಕ್ಷಾಂತರ ಕಾರ್ಯಕರ್ತರೂ ರೋಸಿಹೋಗಿದ್ದಾರೆ ಎಂದರು.
ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ ಮಾಡುತ್ತಿರುವ ಪ್ರಮುಖರಲ್ಲಿ ಕಳೆದ 10ರಿಂದ 25 ವರ್ಷ ಕಾಲ ಅಧಿಕಾರ ಅನುಭವಿಸಿದವರೇ ಆಗಿದ್ದಾರೆ. ತಮ್ಮ ವೈಯಕ್ತಿಕ ಜೀವನ, ದುಡಿಮೆಯನ್ನು ಬದಿಗಿರಿಸಿ, ಕುಟುಂಬವನ್ನೂ ಲೆಕ್ಕಿಸದೇ ಪಕ್ಷದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ, ಹೋರಾಟ ಮಾಡಿದ, ಪಕ್ಷಕ್ಕೆ ಬಲ ತಂದ ಅಸಂಖ್ಯಾತರ ಕಾರ್ಯಕರ್ತರ ಬಗ್ಗೆ ಗಮನಹರಿಸದೇ, ಕೇವಲ ತಮ್ಮ ಸ್ವಾರ್ಥಕ್ಕೋಸ್ಕರ ಪಕ್ಷದ ಹಿತವನ್ನೇ ಬಲಿ ಕೊಡಲು ಹೊರಟಿದ್ದಾರೆ ಎಂದು ದೂರಿದರು.
ಮತದಾರರು ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನದಿಂದ ಬಿಜೆಪಿ ಪರವಾಗಿದ್ದಾರೆ. ಈಚೆಗೆ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರವನ್ನು ಬಿಜೆಪಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಸೋತರೂ ಅತಿ ಹೆಚ್ಚು ಮತ ಗಳಿಸಿದ್ದು ದಾವಣಗೆರೆ ಉತ್ತರ ಕ್ಷೇತ್ರದಲ್ಲಿ. ಸುಮಾರು 25 ಸಾವಿರ ಮತಗಳ ಮುನ್ನಡೆ ಕೊಟ್ಟ ಕ್ಷೇತ್ರ ಉತ್ತರ. ಪಕ್ಷದಲ್ಲಿ ಗುಂಪುಗಾರಿಕೆ ಮಾಡುತ್ತಿರುವವರು ಮತದಾರರಿಗೆ ಜಿಗುಪ್ಸೆ ಆಗುವಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ಮುಖಂಡರು ಆಕ್ಷೇಪಿಸಿದರು.
ಜಿಲ್ಲೆಯ ಇಬ್ಬರು ಹಿರಿಯ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಿ, ಮತ್ತೆ ಮತ್ತೆ ಆ ಇಬ್ಬರ ಮಧ್ಯೆ ವೈಮನಸ್ಸು ಹೆಚ್ಚಿಸುವ, ಇಬ್ಬರ ಮಧ್ಯೆ ತಂದಿಡುವ ಕೆಲಸ ಮಾಡಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕೆಲವರು ನಿರಂತರ ಮಾಧ್ಯಮಗಳಲ್ಲಿ ಹೇಳಿಕೆ ಕೊಡುವುದು, ತಾವಿದ್ದರಷ್ಟೇ ಮಾತ್ರ ಪಕ್ಷ, ಇಲ್ಲದಿದ್ದರೆ ಪಕ್ಷವೇ ಇಲ್ಲವೆಂಬಂತೆ ವರ್ತಿಸುತ್ತಿರುವದು ಎಷ್ಟರಮಟ್ಟಿಗೆ ಸರಿ? ಕಾರ್ಯಕರ್ತರು ಇಲ್ಲದೇ ಇಂತಹ ನಾಯಕರಿದ್ದಾರಾ? ಪದೇಪದೇ ನಮ್ಮ ಪಕ್ಷಕ್ಕೆ ಹಾನಿ ಆಗುವಂತಹ ಕೆಲಸ ಮಾಡುತ್ತಿರುವುದರ ಹಿಂದಿನ ಮರ್ಮವಾದರೂ ಏನು ಎಂದು ಅವರು ಪ್ರಶ್ನಿಸಿದರು.
ಅತಿವೃಷ್ಟಿಯಿಂದಾಗಿ ಅಪಾರ ಬೆಳೆ ಹಾನಿಯಾಗಿದೆ. ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರ ಮಾತ್ರ ಅಭಿವೃದ್ಧಿ ಕಾರ್ಯ ಮರೆತಿದೆ. ಜನವಿರೋಧಿ, ರೈತವಿರೋಧಿ ಆಡಳಿತ ನೀಡುತ್ತಿದೆ. ಅಭಿವೃದ್ಧಿ ಶೂನ್ಯವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು, ನೀವೆಲ್ಲರೂ ನಮ್ಮ ಪಕ್ಷದಡಿ ಹೋರಾಟ ಮಾಡೋಣ. ಮುಂದಿನ ದಿನಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ, ಜಿಲ್ಲಾ ಕೇಂದ್ರದ ಎಲ್ಲ 45 ವಾರ್ಡ್‌ಗಳಲ್ಲಿ, ತಾಲೂಕು, ಜಿಲ್ಲಾದ್ಯಂತ ನಾವೆಲ್ಲಾ ನಿಷ್ಟಾವಂತ ಕಾರ್ಯಕರ್ತರು ಪಕ್ಷ ಸಂಘಟನೆ ಮಾಡೋಣ ಎಂಬುದಾಗಿ ಎಲ್ಲರೂ ಒಮ್ಮತದ ತೀರ್ಮಾನ ಕೈಗೊಂಡರು.
ಮಾಜಿ ಉಪ ಮೇಯರ್ ಪಿ.ಎಸ್. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್‌ಗಳಾದ ಕೆ.ಆರ್. ವಸಂತಕುಮಾರ, ಎಚ್.ಎನ್. ಗುರುನಾಥ, ಪಾಲಿಕೆ ಮಾಜಿ ಸದಸ್ಯರಾದ ಎಚ್.ಎನ್. ಶಿವಕುಮಾರ, ಸಂಕೋಳ್ ಚಂದ್ರಶೇಖರ, ಜಿ.ಸುರೇಶ ಆವರಗೆರೆ, ಶಿವನಹಳ್ಳಿ ರಮೇಶ, ದೂಡಾ ಮಾಜಿ ಅಧ್ಯಕ್ಷ ಎ.ವೈ. ಪ್ರಕಾಶ, ಹನುಮಂತ ರಾವ್ ಸುರ್ವೆ, ಕೊಂಡಜ್ಜಿ ಜಯಪ್ರಕಾಶ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್.ಜಿ. ಗಣೇಶಪ್ಪ, ದೊಗ್ಗಳ್ಳಿ ವೀರೇಶ, ಶಿವರಾಜ ಪಾಟೀಲ, ಬಿ.ಜಿ.ಸಿದ್ದೇಶ, ಬೇತೂರು ಬಸವರಾಜ, ರಘು, ಆದಿನಾಥ, ಸಿದ್ದರಾಮಯ್ಯ, ಅಮರೇಶ ಇತರರು ಇದ್ದರು.
ರಾಜ್ಯದಲ್ಲಿ ಸ್ವಪಕ್ಷವಲ್ಲ, ಆಡಳಿತ ಪಕ್ಷ ವಿರುದ್ಧ ಧ್ವನಿ ಎತ್ತಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿಯೆಂಬುದೇ ಮರೀಚಿಕೆಯಾಗಿದೆ. ಅಧಿಕಾರಕ್ಕೇರಲು ಗ್ಯಾರಂಟಿ ಯೋಜನೆಗಳ ಘೋಷಿಸಿ, ಈಗ ಅದಕ್ಕೆ ಹಣ ಹೊಂದಿಸಲು ಹಾಲಿನ ದರ, ಬಸ್ಸು, ವಿದ್ಯುತ್, ತೈಲ, ಅಬಕಾರಿ ದರ ಏರಿಕೆ, ಮನೆ ಕಂದಾಯ, ನೀರಿನ ಕರ ಏರಿಕೆ, ದೃಢೀಕೃತ ನಕಲು ಪ್ರತಿಗಳ ದರ ಏರಿಕೆ, ಪ್ರಮಾಣಪತ್ರಕ್ಕೆ ಬೇಕಾದ ಛಾಪಾ ಕಾಗದದ ದರ ಏರಿಕೆ, ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ದರ ಏರಿಕೆ ಹೀಗೆ ಎಲ್ಲದರ ದರ ಏರಿಸುತ್ತಿದ್ದಾರೆ ಎಂದು ಮುಖಂಡರು ಸಭೆಯಲ್ಲಿ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ಒಂದಿಲ್ಲೊಂದು ರೀತಿ ಆರ್ಥಿಕ ಹಿಂಸೆ ನೀಡುತ್ತಿದೆ. ಇಂಥದ್ದರ ಬಗ್ಗೆ ಮಾತನಾಡುವ ಬದಲು ಪಕ್ಷಕ್ಕೆ ಹಾನಿ ಆಗುವಂತಹ ಕೆಲಸ ಕೆಲವರು ಮಾಡುತ್ತಿದ್ದಾರೆ ಎಂದು ಬಿಜೆಪಿ ನಿಷ್ಟಾವಂತರು ಆರೋಪಿಸಿದರು.
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))