ಸಿದ್ದರಾಮಯ್ಯ ಸರ್ಕಾರ ನಿಷ್ಕ್ರೀಯಗೊಳಿಸಲು ಬಿಜೆಪಿ ಕುತಂತ್ರ

| Published : Aug 25 2024, 01:45 AM IST

ಸಾರಾಂಶ

ಬಿಜೆಪಿ ಪಕ್ಷದವರು ಸಹಿಸದೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣದ ಗೂಬೆ ಕೂರಿಸಿ ಸರ್ಕಾರವನ್ನು ನಿಷ್ಕ್ರೀಯಗೊಳಿಸುವ ಕುತಂತ್ರ ನಡೆಸಿದ್ದಾರೆ

ಕನ್ನಡಪ್ರಭ ವಾರ್ತೆ ಸಿಂಧನೂರು

ಸಿದ್ದರಾಮಯ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ಅನುಷ್ಠಾನಕ್ಕೆ ತಂದು ಜನಪರ ಆಡಳಿತ ನಡೆಸುತ್ತಿದ್ದಾರೆ. ಇದನ್ನು ಬಿಜೆಪಿ ಪಕ್ಷದವರು ಸಹಿಸದೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣದ ಗೂಬೆ ಕೂರಿಸಿ ಸರ್ಕಾರವನ್ನು ನಿಷ್ಕ್ರೀಯಗೊಳಿಸುವ ಕುತಂತ್ರ ನಡೆಸಿದ್ದಾರೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಆರೋಪಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದ ನಾಯಕರಿಗೆ ಮಾಡಲು ಏನು ಕೆಲಸ ಇಲ್ಲ. ಅದಕ್ಕೆ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ಬೆಂಬಲಿಗೆ ಸದಾ ಇರಲಿದೆ ಎಂದು ಹೇಳಿದರು.

ಈ ಹಿಂದಿನ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದು ಮತ್ತು ಹೊಸ ಕೆಲಸದ ಕುರಿತು ಮಾಹಿತಿ ಪಡೆಯಲಾಗುವುದು. ಅಭಿವೃದ್ಧಿ ಚುರುಕುಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಧಡೇಸೂಗೂರು ಹತ್ತಿರದ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಗುತ್ತಿಗೆದಾರನ ಬದಲಾವಣೆಗೆ ಪತ್ರವನ್ನು ಬರೆದಿದೆ. ಆದರೆ ಮರು ಟೆಂಡರ್ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಗುತ್ತಿಗೆದಾರನಿಗೆ ಕಾಲಮಿತಿಯಲ್ಲಿ ಕಾಮಗಾರಿ ಮಾಡಲು ಸೂಚನೆ ನೀಡಲಾಗಿದೆ. ಬೈಪಾಸ್ ಕಾಮಗಾರಿಗೆ ಸಂಬಂಧಿಸಿದಂತೆ ಏನು ಕೆಲಸಗಳು ಬಾಕಿ ಇವೆಯೋ ಅವುಗಳನ್ನು ತಿಳಿದುಕೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಖಾಜಿಮಲಿಕ್ ವಕೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಅನಿಲಕುಮಾರ ಸೇರಿ ಅನೇಕರು ಇದ್ದರು.