ಜು.3ರಂದು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳೆದುರು ಬಿಜೆಪಿ ಪ್ರತಿಭಟನೆ

| Published : Jul 01 2024, 01:57 AM IST / Updated: Jul 01 2024, 09:39 AM IST

Police
ಜು.3ರಂದು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳೆದುರು ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳೆದುರು ಬಿಜೆಪಿ ವತಿಯಿಂದ ಜು. 3ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ವಕ್ತಾರ ಬಿ.ಕೆ. ಅರುಣ್‌ಕುಮಾರ್‌ ಮಾಹಿತಿ ನೀಡಿದರು.

  ಮಡಿಕೇರಿ : ಬೆಲೆ ಏರಿಕೆ ವಿರುದ್ಧ ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶ ಕಳುಹಿಸಿರುವ ಕಾಂಗ್ರೆಸ್ ವ್ಯಕ್ತಿಯೊಬ್ಬರ ವಿರುದ್ಧ ದೂರು ನೀಡಿದರೂ ಪೊಲೀಸರು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಪೊಲೀಸರ ನಿರ್ಲಕ್ಷ್ಯವನ್ನು ಖಂಡಿಸಿ ಕೊಡಗು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳೆದುರು ಬಿಜೆಪಿ ವತಿಯಿಂದ ಜು.3ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ವಕ್ತಾರ ಬಿ.ಕೆ.ಅರುಣ್ ಕುಮಾರ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ತಮಗೆ ಬಂದ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಪೊಲೀಸರು ಅವರ ವಿರುದ್ಧ ಮೊಕದ್ದಮೆ ಹೂಡಿ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸಿಗರೊಬ್ಬರು ಬಿ.ಜೆ.ಪಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಗುರಿಮಾಡಿ ಹೀನಾಯವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಬಿಜೆಪಿ ನಾಯಕರು ಒಂದು ವಾರದ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಖುದ್ದು ದೂರು ನೀಡಿದ್ದರು ಇಲ್ಲಿಯವರೆಗೆ ಕಾನೂನು ಕ್ರಮ ಕೈಗೊಂಡಿಲ್ಲ. ಇದನ್ನು ಪ್ರಶ್ನಿಸಿ ಬುಧವಾರ ಬೆಳಗ್ಗೆ 10.30 ಗಂಟೆಗೆ ಕೊಡಗಿನ ಎಲ್ಲ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬಿ.ಕೆ.ಅರುಣ್‌ಕುಮಾರ್ ತಿಳಿಸಿದ್ದಾರೆ.