ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯಪಾಲರ ವಿರುದ್ಧ ಕಾಂಗ್ರೆಸಿಗರು ಅಸಂಬದ್ಧ ಹೇಳಿಕೆ ನೀಡುವುದನ್ನು ವಿರೋಧಿಸಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಗುರುವಾರ ಪ್ರತಿಭಟನೆ ನಡೆಯಿತು.ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಂವಿಧಾನದ ರಕ್ಷಕರು ಎನ್ನುವ ಕಾಂಗ್ರೆಸಿಗರು ದಲಿತ ರಾಜ್ಯಪಾಲರನ್ನು ಅವಹೇಳನ ಮಾಡುತ್ತಿದ್ದಾರೆ. ಬಸ್ಸಿಗೆ ಕಲ್ಲು ಹೊಡೆದಿದ್ದಾರೆ. ಪೊಲೀಸ್ ಇಲಾಖೆಗೆ ಧಮ್ ಇದ್ದರೆ ಗಲಭೆಗೆ ಪ್ರಚೋಚನೆ ನೀಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಐವನ್ ಡಿಸೋಜ ವಕೀಲಿಕೆ ಬುದ್ಧಿ ತೋರಿಸಿ ತನ್ನ ಮನೆಗೆ ತಾನೇ ಕಲ್ಲು ಹೊಡೆಸಿಕೊಂಡಿದ್ದಾರೆ. ನಾವು ಕಲ್ಲು ಹೊಡೆಯುವುದಾದರೆ ನಿಮ್ಮ ಮನೆಗೆ ಅಲ್ಲ, ನಿಮ್ಮ ತಲೆಗೆ ಹೊಡಿತಿದ್ವಿ ಎಂದ ಶಾಸಕ ಕಾಮತ್, ನಮಗೆ ಕಲ್ಲು ಹೊಡೆಯುವ ಸಾಮರ್ಥ್ಯ ಇದ್ದರೂ ಕಾನೂನಿಗೆ ಗೌರವ ಕೊಡುತ್ತೇವೆ ಎಂದು ಹೇಳಿದರು.ಶಾಸಕ ಭರತ್ ಶೆಟ್ಟಿ ಮಾತನಾಡಿ, ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ಅಂದಿನ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದಾಗ, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಈಗ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ತಕ್ಷಣ ಅವರು ರಾಜೀನಾಮೆ ನೀಡಬೇಕು ಎಂದರು.
ಮಂಗಳೂರಿನಲ್ಲಿ ಕಲ್ಲು ತೂರಾಟ, ಟೈರ್‌ಗೆ ಬೆಂಕಿ ಹಚ್ಚಿದ ಘಟನೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪ್ರಾಯೋಜಿತ. ಐವನ್ ಡಿಸೋಜ ತನ್ನ ಹುಡುಗರಿಂದಲೇ ಮನೆಗೆ ಕಲ್ಲು ಬಿಸಾಡಿರಬಹುದು. ನಮಗೂ ಕಲ್ಲು ಹೊಡೆಯಲು, ಟೈರ್‌ಗೆ ಬೆಂಕಿ ಹಚ್ಚಲು 5 ನಿಮಿಷ ಸಾಕು, ಆದರೆ ಆ ರೀತಿಯ ಅರಾಜಕತೆ ತರುವ ಅವಶ್ಯಕತೆ ನಮಗಿಲ್ಲ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿದರೆ ತನಿಖೆಯ ದಿಕ್ಕು ತಪ್ಪಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಕ್ಷಣ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.
ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸಿಗರು ಈಗ ರಾಜ್ಯಪಾಲರನ್ನು ದೂರುತ್ತಿದ್ದಾರೆ. ತನಿಖೆಗೆ ಅನುಮತಿ ನೀಡಿದರೂ ಸಿಎಂ ಕುರ್ಚಿಗೆ ಅಂಟಿ ಕುಳಿತಿದ್ದಾರೆ ಎಂದು ಟೀಕಿಸಿದರು.ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ರಾವ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿದರು. ಮೇಯರ್ ಸುಧೀರ್ ಶೆಟ್ಟಿ, ಉಪಮೇಯರ್ ಸುನೀತಾ, ಮಾಜಿ ಸಚಿವ ಎಸ್.ಅಂಗಾರ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಾಲಕೃಷ್ಣ ಭಟ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಮುಖಂಡರಾದ ರವಿಶಂಕರ ಮಿಜಾರು, ವಿಕಾಸ್ ಪುತ್ತೂರು, ರಮೇಶ್ ಕಂಡೆಟ್ಟು, ತಿಲಕ್‌ರಾಜ್ ಕೃಷ್ಣಾಪುರ, ನಂದನ್ ಮಲ್ಯ ಇದ್ದರು.
ಫೋಟೊ22ಬಿಜೆಪಿ