ಕನ್ನಡ ನಾಡಿಗೆ ಬಂದವರು ಕನ್ನಡ ಕಲಿಯಬೇಕು: ಬಿಳಿಮಲೆ

| Published : Aug 23 2024, 01:11 AM IST

ಸಾರಾಂಶ

ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರು ನಮ್ಮ ನೆಲದ ಭಾಷೆ, ಸಂಸ್ಕೃತಿ ಕಲಿತು ಗೌರವ ಕೊಡುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರು ನಮ್ಮ ನೆಲದ ಭಾಷೆ, ಸಂಸ್ಕೃತಿ ಕಲಿತು ಗೌರವ ಕೊಡುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಗುರುವಾರ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ ಪದವಿ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ‘ಶಾಸ್ತ್ರೀಯ ಕನ್ನಡ ಸ್ಥಾನಮಾನ ಮತ್ತು ಕನ್ನಡ ಜಾಗೃತಿ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದವರು ಕನ್ನಡ ಕಲಿತುಕೊಳ್ಳಲೇಬೇಕು. ಇಲ್ಲಿನ ಅನ್ನ, ನೀರು, ಜೀವ, ಜೀವನ ಕಂಡುಕೊಂಡವರು ಮೊದಲು ಕನ್ನಡ ಕಲಿಯಿರಿ, ಓದಿರಿ, ಬರೆಯಿರಿ. ನಮ್ಮ ಸಂಸ್ಕೃತಿಯನ್ನು ಅಳವಡಿಕೊಂಡು ರಾಜ್ಯದ ಅಭಿವೃದ್ಧಿಯಲ್ಲಿ ಕೈಜೋಡಿಸಿರಿ ಎಂದು ಸಲಹೆ ನೀಡಿದರು.

ಮಹಾಭಾರತ, ರಾಮಾಯಣ, ಭಾಗವತ ಕಥೆಗಳು ದೇಶದ ನೂರಾರು ಭಾಷೆಗಳಿಗೆ ಅನುವಾದಗೊಂಡಿವೆ. ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹೊಸ ಪ್ರಯೋಗಗಳಾಗಿ, ಲಕ್ಷಾಂತರ ಅಧ್ಯಾಯಗಳನ್ನು ಸೃಷ್ಟಿಸಿಕೊಂಡು ಹರಳುಗಟ್ಟಿವೆ. ಅಂತೆಯೇ ಕನ್ನಡವನ್ನು ತಮ್ಮದೆಂದಾಗ ಮಾತ್ರ ಕನ್ನಡ ಬೆಳೆದು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಕನ್ನಡ ಕಾರ್ಯ , ಹೋರಾಟ ಕೇವಲ ಒಬ್ಬಿಬ್ಬರಿಂದ ಸಾಧ್ಯವಿಲ್ಲ.‌ ಪ್ರತಿಯೊಬ್ಬರೂ ಟೊಂಕಕಟ್ಟಿ ನಿಲ್ಲಬೇಕು. ಆಗ ಮಾತ್ರ ಕನ್ನಡ ಅಭಿವೃದ್ಧಿ ಸಾಧ್ಯ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್‌, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿದ್ಯಾಶಿವಣ್ಣವರ್, ಬಿಬಿಜಿಎಸ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ), ಪ್ರಾಧಿಕಾರದ ಸಹ ಸದಸ್ಯರಾದ ಟಿ.ತಿಮ್ಮೇಶ್ , ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ ಜಿ.ಕೆ.ಮಂಜುನಾಥ್, ಭಾಷಾ ತಜ್ಞ ಡಾ. ಆರ್.ವಿ.ಎಸ್.ಸುಂದರಂ , ಎಸ್ಐಸಿಎಂ ಕನ್ನಡ ಪ್ರಾಧ್ಯಾಪಕಿ ಡಾ.ಎಸ್.ಪೂರ್ಣಿಮಾ, ಪ್ರೊ. ಲಕ್ಷ್ಮೀನಾರಾಯಣ ಇದ್ದರು.