ಸಾರಾಂಶ
ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕನ್ನಡ ಒಕ್ಕೂಟದಿಂದ ‘ರಾಜಭವನಕ್ಕೆ ಮುತ್ತಿಗೆ’ ಹೋರಾಟ ನಡೆಯಿತು
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕನ್ನಡ ಒಕ್ಕೂಟದಿಂದ ‘ರಾಜಭವನಕ್ಕೆ ಮುತ್ತಿಗೆ’ ಹೋರಾಟ ನಡೆಯಿತು. ಹಿರಿಯ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಕೇಂದ್ರದ ರಬ್ಬರ್ ಸ್ಟ್ಯಾಂಪ್ ರೀತಿ ವರ್ತಿಸುವುದನ್ನು ರಾಜ್ಯಪಾಲರು ಬಿಡಬೇಕು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ರಾಜ್ಯದಲ್ಲಿ ಸ್ಥಿರ ಸರ್ಕಾರ ಆಡಳಿತ ನಡೆಸಲು ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯಪಾಲರ ನಡೆ ಖಂಡಿಸಿ ಆ.28ರಂದು ಕರಾಳ ದಿನಾಚರಣೆ ಮಾಡುವುದಾಗಿ ಹೇಳಿದರು.
ವಾಟಾಳ್ ನಾಗರಾಜ್ ಮಾತನಾಡಿ, ರಾಜ್ಯಪಾಲರು ಮುಖ್ಯಮಂತ್ರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿಂದೆ ಜೆಡಿಎಸ್ ಬಿಜೆಪಿ ಪಿತೂರಿ ಇದೆ. ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ನಾಯಕತ್ವದ ಸರ್ಕಾರ ತೆಗೆಯಬೇಕು ಎಂಬ ಉದ್ದೇಶದಿಂದ ಷಡ್ಯಂತ್ರ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಅನುಮತಿ ಕೇವಲ ಒಂದು ನೆಪವಾಗಿದೆ. ಸರ್ಕಾರ ಅಸ್ಥಿರಗೊಳಿಸುವುದೇ ಇದರ ಉದ್ದೇಶವಾಗಿದೆ. ಸಿದ್ದರಾಮಯ್ಯ ಅವರಂಥ ವರ್ಚಸ್ಸಿನ ನಾಯಕ ಕಾಂಗ್ರೆಸ್ ಸೇರಿ ಬಿಜೆಪಿ, ಜೆಡಿಎಸ್‌ನಲ್ಲೂ ಯಾರೂ ಇಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಮಧ್ಯಂತರ ಚುನಾವಣೆ ನಡೆಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂಬ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.ರಾಜ್‌ಕುಮಾರ್ ಅಭಿಮಾನಿ ಸಂಘದ ಸಾ.ರಾ.ಗೋವಿಂದು, ಕರವೇ ಮುಖಂಡ ಶಿವರಾಮೇಗೌಡ, ಕನ್ನಡ ಜಾಗೃತಿ ಸಂಘದ ಮಂಜುನಾಥ ದೇವು, ವಾಟಾಳ್ ಪಕ್ಷ ಮುನ್ನಾವರ, ಪಾರ್ಥಸಾರಥಿ, ಗಿರೀಶ್‌ಗೌಡ ಮುಂತಾದವರಿದ್ದರು.