ಸಾರಾಂಶ
ಜಯಮೇರಿ, ನಾಗಸುಂದ್ರಮ್ಮಗೆ ಅಧಿಕಾರಕ್ಕೆ ತಂತ್ರ । ಕಾಂಗ್ರೆಸ್ ಅಧಿಕಾರ ಹಿಡಿಯದಂತೆ ಮುಖಭಂಗ ಮಾಡಲು ಬಿಜೆಪಿಯಿಂದ ವ್ಯೂಹ
ಎನ್.ನಾಗೇಂದ್ರಸ್ವಾಮಿಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ನಗರಸಭೆಯಲ್ಲಿ 13ಸ್ಥಾನಹೊಂದಿರುವ ಬಿಜೆಪಿ ಅಧಿಕಾರ ಹಿಡಿದು, ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮುಖಭಂಗ ಮಾಡಲು ರಣವ್ಯೂಹ ರೂಪಿಸಿದ್ದು ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 13 ಸ್ಥಾನಗಳಿಸಿರುವ ಬಿಜೆಪಿ ಪಾರ್ಟಿ ಬಿಎಸ್ಪಿಯ ಜಯಮೇರಿ ಸೇರಿದಂತೆ ಪಕ್ಷೇತರರಿಬ್ಬರನ್ನು ಸೆಳೆದು ಶತಾಯಗತಾಯ ಅಧಿಕಾರ ಹಿಡಿಯಲು ಬಿಜೆಪಿ ತಂತ್ರಗಾರಿಕೆ ಪ್ರಾರಂಭಿಸಿದೆ.14 ತಿಂಗಳ ಅವಧಿಯನ್ನು ಇಬ್ಬರಿಗೆ ಅಧಿಕಾರ ಹಂಚಿಕೆ ಸೂತ್ರ ಮುಂದಿಟ್ಟು ತಂತ್ರ ಆರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ 13ಸದಸ್ಯ ಬಲದ ಬಿಜೆಪಿಯಲ್ಲೂ ಸಹ 4 ಮಂದಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದಕ್ಕೆ ಪಕ್ಷದ ವರಿಷ್ಟರು ಈ ಹಿಂದೆ ನಮ್ಮನ್ನು ಕಡೆಗಣಿಸಿದ್ದು ಕಾರಣ ಎಂದು ಮುನಿಸಿಕೊಂಡ ಸದಸ್ಯರ ಆರೋಪವಾಗಿದೆ. ಈ ಪೈಕಿ ಮೂರು ಮಂದಿಯಂತೂ ಕಾಂಗ್ರೆಸ್ ಸಖ್ಯದಲ್ಲಿದ್ದಾರೆ.
ಮತ್ತೊಬ್ಬರು ಲೋಕಸಭೆ ಚುನಾವಣೆ ವೇಳೆ ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ಬಂದಿರುವುದು ಸಹ ಚರ್ಚೆಗೆ ಗ್ರಾಸವಾಗುತ್ತಿದೆ. ಇದನ್ನೆಲ್ಲ ಮನಗಂಡಿರುವ ಮೂರು ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರೊಬ್ಬರ (ಮುಖಂಡರ) ಜತೆ ಚರ್ಚಿಸಿದ್ದಾರೆ ಎನ್ನಲಾಗಿದೆ.ಇನ್ನು ನಾಲ್ಕು ಮಂದಿ ಮುನಿಸಿಕೊಂಡು ಪಕ್ಷದಿಂದ ದೂರ ಉಳಿದವರಿಗೆ ಬಿಜೆಪಿ ಪಕ್ಷ ಸಹ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದು ಇನ್ನೆರಡು ದಿನದಲ್ಲಿ ಪಕ್ಷದ ಉಸ್ತುವಾರಿ ಹಾಗೂ ರಾಜ್ಯ ಉಪಾಧ್ಯಕ್ಷರ ಸಮ್ಮುಖದಲ್ಲಿ ಸಭೆ ನಡೆಸುವ ಸಾಧ್ಯತೆ ಇದೆ.
31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 12, ಪಕ್ಷೇತರರು 4, ಬಿಎಸ್ಪಿ 2, ಬಿಜೆಪಿ 13 ಸ್ಥಾನಗಳಿಸಿದ್ದಾರೆ. ಈಗಾಗಲೇ ನಾಲ್ಕು ಮಂದಿ ಪಕ್ಷೇತರರು, 2ಬಿಎಸ್ಪಿ, 12ಕಾಂಗ್ರೆಸ್ ಮತ್ತು ಶಾಸಕ, ಸಂಸದರ ಮತ ಎಲ್ಲವೂ ಅಂದುಕೊಂಡಂತೆ ನಡೆದರೆ ಕಾಂಗ್ರೆಸ್ ಪಾಳಯದ ಬಲ ಹೆಚ್ಚಾಗಿ ಅಧಿಕಾರ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಆದರೆ 3 ಮಂದಿ (ರೇಖಾ ರಮೇಶ್, ಭಾಗ್ಯ ಸೋಮು ಮತ್ತು ಪುಷ್ಪಲತಾ ಶಾಂತರಾಜು) ಅವರು ತಮಗೆ ಅಧ್ಯಕ್ಷ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದು ಕಾಂಗ್ರೆಸ್ ಪಕ್ಷದ ವರಿಷ್ಠರಿಗೂ ಸಹ ತಲೆನೋವಾಗಿದೆ.ಅದೇ ರೀತಿಯಲ್ಲಿ ಮಾಜಿ ಅದ್ಯಕ್ಷ ಭೀಮನಗರ ರಮೇಶ್ ಅವರು ನನ್ನ ಪತ್ನಿ ರೇಖಾ ರಮೇಶ್ ಅವರಿಗೆ ಅಧಿಕಾರ (ಅದ್ಯಕ್ಷ ಸ್ಥಾನ) ನೀಡಬೇಕು ಎಂಬ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಮತ್ತೊಬ್ಬ ಪ್ರಭಲ ಆಕಾಂಕ್ಷಿ ಮುಡಿಗುಂಡ ಶಾಂತರಾಜು ಅವರ ಪತ್ನಿ ಪುಷ್ಪಲತಾ ಅವರು ಸಹ ಅಧ್ಯಕ್ಷ ಗಾದಿಗೆ ಈಗಾಗಲೇ ತಂತ್ರಗಾರಿಕೆ ಹೆಣೆದಿದ್ದಾರೆ. ಕಾಂಗ್ರೆಸ್ ಪಾಳಯದ ಸದಸ್ಯರಲ್ಲೆ ಅಧ್ಯಕ್ಷರ ಆಯ್ಕೆಗೆ ಭಿನ್ನ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ರೇಖಾ ಅವರಿಗೆ ನಮ್ಮ ಬೆಂಬಲವಿಲ್ಲ ಎಂದು ಪಕ್ಷೇತರ ಸದಸ್ಯರೊಬ್ಬರು ಹೇಳಿಕೊಂಡಿದ್ದಾರೆ ಎಂಬ ಮಾತು ಚರ್ಚೆಯಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿನ ಭಿನ್ನ ಭಿನ್ನ ಅಭಿಪ್ರಾಯಗಳನ್ನು ತಾವು ಬಂಡವಾಳ ಮಾಡಿಕೊಂಡು ಅಧಿಕಾರ ಹಿಡಿಯಲು ಬಿಜೆಪಿ ಇತ್ತ ತಂತ್ರಗಾರಿಕೆ ಆರಂಭಿಸಿದೆ ಎನ್ನಲಾಗಿದೆ. ಏತನ್ಯದ್ಯೆ ಬಿಎಸ್ಪಿಯ ಜಯಮರಿ ನನಗೆ ಮೊದಲ ಅವಧಿಯಲ್ಲಿ ವರಿಷ್ಠರು ಅಧ್ಯಕ್ಷ ಗಾದಿ ನೀಡಿದರೆ ನಾನು ಬಿಜೆಪಿಗೆ ಬೆಂಬಲ ನೀಡಲು ಸಿದ್ದ ಎಂದು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್, ಮಾಜಿ ಶಾಸಕ ಎಸ್ ಬಾಲರಾಜು, ಮೂರು ಜಿಲ್ಲೆಗಳಿಗೆ ಉಸ್ತುವಾರಿಯಾಗಿರುವ ಡಾ. ಸತ್ಯನಾರಾಯಣ ಸೇರಿದಂತೆ ಹಲವರು ಒಗ್ಗೂಡಿ ಈ ಬಾರಿ ಕಾಂಗ್ರೆಸ್ ದೂರವಿಟ್ಟು ಬಿಜೆಪಿ ತನ್ನ ವಶಕ್ಕೆ ನಗರಸಭೆ ಪಡೆಯಲು ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಬಿಜೆಪಿ ನಗರಸಭೆಯ ಅಧಿಕಾರ ಹಿಡಿಯಲು ಸಿದ್ದರಿದ್ದೆವೆ, ಅದಕ್ಕಾಗಿ ನಾಳಿದ್ದು ಪಕ್ಷದ ಉಸ್ತುವಾರಿ ಹಾಗೂ ಮುಖಂಡರು, ಸದಸ್ಯರ ಸಭೆ ಕರೆದಿದ್ದು ಸಭೆಯಲ್ಲಿ ಎಲ್ಲವೂ ಚರ್ಚೆಯಾಗಲಿದೆಎನ್.ಮಹೇಶ್. ಬಿಜೆಪಿ ರಾಜ್ಯ ಉಪಾಧ್ಯಕ್ಷ.