ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಇಲ್ಲಿನ ನಗರಸಭೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಮೈತ್ರಿಕೂಟಕ್ಕೆ ಬಹುಮತವಿದ್ದು, ಪಕ್ಷದ ಶಾಸಕರು ಮತ್ತು ಸಂಸದರಿದ್ದೂ, ಕಾಂಗ್ರೆಸ್ ಸದಸ್ಯರೇ ಕೈಕೊಟ್ಟಿದ್ದರಿಂದ ಭದ್ರಕೋಟೆಯಲ್ಲಿ ಕಾಂಗ್ರೆಸ್‌ಗೆ ಗರ್ವಭಂಗವಾಗಿದೆ.ನಾಲ್ವರು ಕಾಂಗ್ರೆಸ್ ಸದಸ್ಯರೇ ಕೈಕೊಟ್ಟಿದ್ದರಿಂದ ಬಿಜೆಪಿಯ ಸುರೇಶ್ ಅಧ್ಯಕ್ಷರಾಗಿ, ಮಮತಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ೧೫ ಮತಗಳು ಬಂದರೆ ಕಾಂಗ್ರೆಸ್ ಎಸ್‌ಡಿಪಿಐ ಮೈತ್ರಿಕೂಟಕ್ಕೆ ೧೪ ಮತಗಳು ದೊರೆತವು. ಕಾಂಗ್ರೆಸ್ ಶಾಸಕರು, ಸಂಸದರು ಆಗಮಿಸಿ ಮತ ಚಲಾಯಿಸಿದರೂ ಕಾಂಗ್ರೆಸ್‌ಗೆ ಬಹುಮತ ದೊರಕದೆ ಮುಖಭಂಗ ಅನುಭವಿಸಿದೆ. ಮೂವರು ಕಾಂಗ್ರೆಸ್ ಸದಸ್ಯರಾದ ಆರ್.ಪಿ. ನಂಜುಂಡಸ್ವಾಮಿ, ನೀಲಮ್ಮ, ಭಾಗ್ಯಮ್ಮ ಸಭೆಗೆ ಹಾಜರಾಗಲಿಲ್ಲ. ಕಾಂಗ್ರೆಸ್ ಸದಸ್ಯೆ ಚಂದ್ರಕಲಾ ಬಿಜೆಪಿ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.ಚಾಮರಾಜನಗರ ನಗರಸಭೆಯಲ್ಲಿ ಒಟ್ಟು ೩೧ ಸ್ಥಾನಗಳಿವೆ. ಇದರಲ್ಲಿ ಬಿಎಸ್‌ಪಿ ಸದಸ್ಯ ಪ್ರಕಾಶ್ ಅವರು ಸತತವಾಗಿ ಕೌನ್ಸಿಲ್ ಸಭೆಗೆ ಗೈರು ಹಾಜರಾದ್ದರಿಂದ ಅವರ ಸದಸ್ಯತ್ವ ಅನರ್ಹಗೊಂಡಿದೆ. ಹೀಗಾಗಿ ೩೦ ಸದಸ್ಯ ಬಲಕ್ಕೆ ೧೭ ಮತಗಳು ಅಧಿಕಾರ ಹಿಡಿಯಲು ನಿರ್ಣಾಯಕವಾಗಿದ್ದವು. ಕಾಂಗ್ರೆಸ್ ೮, ಎಸ್‌ಡಿಪಿಐ ೬, ಪಕ್ಷೇತರ ೧, ಶಾಸಕ, ಸಂಸದರ ಮತಗಳು ಸೇರಿ ೧೭ ಮತಗಳು ಕಾಂಗ್ರೆಸ್ ಪಾಲಿಗಿದ್ದವು. ಆದರೆ ಭಾರತೀಯ ಜನತಾ ಪಕ್ಷ ಆಪರೇಷನ್ ಕಮಲ ನಡೆಸಿ, ಮೂವರು ಕಾಂಗ್ರೆಸ್ ಸದಸ್ಯರು ಸಭೆಗೆ ಹಾಜರಾಗದಂತೆ ಮಾಡುವಲ್ಲಿ ಯಶಸ್ವಿಯಾಯಿತು.
ಬಿಜೆಪಿಗೆ ೧೪ ಮತಗಳು:ಕಾಂಗ್ರೆಸ್ ಸದಸ್ಯೆ ಚಂದ್ರಕಲಾ ಬಿಜೆಪಿ ಪರವೇ ಮತ ಚಲಾಯಿಸಿದರು. ಹೀಗಾಗಿ ಬಿಜೆಪಿಗೆ ೧೫ ಮತಗಳು ದೊರೆತವು. ಬಿಜೆಪಿಯ ಸದಸ್ಯ ಮಹದೇವಯ್ಯ ಕಾಂಗ್ರೆಸ್ ಪರ ಮತ ಹಾಕಿದರು. ಆ ಮತವೂ ಬಿಜೆಪಿಗೆ ಬಂದಿದ್ದರೆ ೧೬ ಮತಗಳಾಗುತ್ತಿತ್ತು. ಕಾಂಗ್ರೆಸ್ ಎಸ್‌ಡಿಪಿಐ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ನಿಂದ ಶಾಸಕ ಸಂಸದ ಸೇರಿ ೭ ಮತಗಳು, ಎಸ್ ಡಿಪಿಐ ೬, ಬಿಜೆಪಿಯ ಮಹದೇವಯ್ಯ ಅವರ ೧ ಮತ ಸೇರಿ ೧೪ ಮತಗಳು ಬಂದವು.ಇದರಿಂದಾಗಿ ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದರೂ, ಜಿಲ್ಲಾ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿದೆ. ಇಲ್ಲಿ ಕಾಂಗ್ರೆಸ್‌ಗೆ ಸ್ವಪಕ್ಷದ ಸದಸ್ಯರೇ ’ಕೈ’ ಕೊಟ್ಟಿದ್ದಾರೆ.!ಈ ಹಿಂದೆ ಅಧ್ಯಕ್ಷರಾಗಿದ್ದ ಆಶಾ ನಟರಾಜು, ಉಪಾಧ್ಯಕ್ಷರಾಗಿದ್ದ ಸುಧಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ೩೧ನೇ ವಾರ್ಡ್ ಸದಸ್ಯ ಆರ್.ಎಂ.ರಾಜಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಡಿಪಿಐ ಪಕ್ಷದ ೧೨ನೇ ವಾರ್ಡ್ ಸದಸ್ಯ ಅಬ್ರಾರ್ ಅಹಮ್ಮದ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ೨೮ನೇ ವಾರ್ಡ್‌ನ ಸದಸ್ಯ ಸುರೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ೨೨ನೇ ವಾರ್ಡ್ ಸದಸ್ಯೆ ಎಚ್.ಎಸ್. ಮಮತ ನಾಮಪತ್ರ ಸಲ್ಲಿಸಿದ್ದರು.ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರಾದ ಆರ್.ಪಿ. ನಂಜುಂಡಸ್ವಾಮಿ, ನೀಲಮ್ಮ ಹಾಗೂ ಭಾಗ್ಯಮ್ಮ ಗೈರಾಗಿದ್ದರು. ಉಳಿದಂತೆ ೩೦ ವಾರ್ಡಿನ ಬಿಜೆಪಿಯ ಮಹದೇವಯ್ಯ ಕಾಂಗ್ರೆಸ್‌ನತ್ತ ಮುಖ ಮಾಡಿದ್ದು ಕಾಂಗ್ರೆಸ್‌ನ ೧೬ನೇ ವಾರ್ಡಿನ ಚಂದ್ರಕಲಾ ಬಿಜೆಪಿ ಪರ ನಿಂತರು.ಕೆಲ ದಿನಗಳ ಹಿಂದೆ- ಪಕ್ಷೇತರ ಸದಸ್ಯ ಬಸವಣ್ಣ ಕೂಡ ಕಾಂಗ್ರೆಸ್ ಸೇರ್ಪಡೆಯಾಗಿದ್ದ. ಬಿಎಸ್ಪಿ ಸದಸ್ಯ ಪ್ರಕಾಶ್ ಅನರ್ಹರಾಗಿದ್ದರು. ಸಂಸದ ಸುನೀಲ್ ಬೋಸ್, ಶಾಸಕ ಸಿ. ಪುಟ್ಟರಂಗಶೆಟ್ಟಿ ಮತ ಸೇರಿದಂತೆ ಕಾಂಗ್ರೆಸ್‌ಗೆ ೧೪ ಮಂದಿ ಕೈ ಎತ್ತಿದರು. ಉಳಿದಂತೆ ಬಿಜೆಪಿಗೆ ೧೫ ಮಂದಿ ಕೈ ಎತ್ತುವ ಮೂಲಕ ಬಿಜೆಪಿಯ ಸುರೇಶ್ ಅಧ್ಯಕ್ಷರಾದರೇ ಮಮತ ಉಪಾಧ್ಯಕ್ಷರಾಗಿ ಆಯ್ಕೆಯಾದ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಮಹೇಶ್ ಅವರು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು. ಜಿಲ್ಲೆಯ ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ ಹಾಗೂ ಯಳಂದೂರು ಪಪಂ ಅನ್ನು ತನ್ನ ವಶಕ್ಕೆ ಪಡೆದು ಬೀಗಿದ್ದ ಕಾಂಗ್ರೆಸ್‌ಗೆ ಚಾ.ನಗರ ನಗರಸಭೆ ಕೈ ತಪ್ಪಿದೆ. ಇದರಿಂದ ಎರಡನೇ ಅವಧಿಗೆ ಬಿಜೆಪಿ ಆಡಳಿತ ಮುಂದುವರಿಸಿದೆ. ಅಧ್ಯಕ್ಷರಾಗಿ ಆಯ್ಕೆಯಾದ ಸುರೇಶ್ ಮಾತನಾಡಿ, ಎಲ್ಲರ ಸಹಕಾರ ಪಡೆದು ನಿಂತ ನೀರಾಗಿರುವ ನಗರಸಭೆ ಆಡಳಿತಕ್ಕೆ ಚುರುಕು ಮುಟ್ಟಿಸಿ, ಸ್ವಚ್ಛ ಆಡಳಿತದ ಜೊತೆಗೆ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದರು.
ನೂತನ ಅಧ್ಯಕ್ಷ ಉಪಾಧ್ಯಕರನ್ನು ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ ಅಶ್ವಥ್‌ನಾರಾಯಣ್, ಚಿಲ್ಲಾಧ್ಯಕ್ಷ ಸಿ.ಎಸ್. ನಿರಂಜನಕುಮಾರ್, ಮುಖಂಡರಾದ ಎಂ. ರಾಮಚಂದ್ರ, ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ, ಡಾ.ಎ.ಆರ್.ಬಾಬು, ಆರ್.ಸುಂದರ್, ನಿಜಗುಣರಾಜು, ನಾರಾಯಣಪ್ರಸಾದ್, ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಬಾಲಸುಬ್ರಹ್ಮಣ್ಯಂ, ಸೇರಿದಂತೆ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು, ಭಾಗವಹಿಸಿ, ಸಿಹಿ ಹಂಚಿ, ಅಭಿನಂದಿಸಿದರು. ಕೈಗೆ ಶಾಕ್ ಕೊಟ್ಟ ಸದಸ್ಯರ ಉಚ್ಚಾಟನೆ ಕ್ರಮನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಪಕ್ಷಕ್ಕೆ ಕೈಕೊಟ್ಟ ಮೂವರು ಸದಸ್ಯರ ಉಚ್ಛಾಟನೆ ಜೊತೆಗೆ ವಿಪ್ ಉಲ್ಲಂಘಿಸಿರುವುದರಿಂದ ಅವರ ಸದಸ್ಯತ್ವ ಅನರ್ಹಕ್ಕೆ ಕ್ರಮ ಕೈಗೊಳ್ಳುವುದಾಗಿ ಸಂಸದ ಸುನೀಲ್ ಬೋಸ್ ಸುದ್ದಿಗಾರರಿಗೆ ತಿಳಿಸಿದರು.ಜಿಲ್ಲಾ ಕೇಂದ್ರ ಚಾಮರಾಜನಗರ ನಗರಸಭೆ ಆಡಳಿತ ಹಿಡಿಯಬೇಕೆಂದು ಪ್ರಯತ್ನಪಟ್ಟೆವು. ಆದರೆ ನಮ್ಮ ಸದಸ್ಯರೇ ಗೈರಾಗುವ ಮೂಲಕ ಕೈಕೊಟ್ಟರು. ಅಧಿಕಾರ ಯಾರೇ ಹಿಡಿದಿರಲಿ, ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಬಿಜೆಪಿಯವರ ಕುತಂತ್ರದಿಂದ ನಮಗೆ ಸೋಲಾಯಿತು, ನಿನ್ನೆಯವರೆಗೂ ನಮ್ಮ ಪರವಾಗಿಯೇ ಇತ್ತು, ಆರ್. ಪಿ. ನಂಜುಂಡಸ್ವಾಮಿ ಬಿಟ್ಟು, ಇನ್ನು ಮೂವರು ಅಮಾಯಕರು, ಈಗ ಅವರರನ್ನು ಪಕ್ಷದಿಂದ ಉಚ್ಚಾಟಿಸುವ ಜೊತೆಗೆ, ಸದಸ್ಯತ್ವವನ್ನು ಅನರ್ಹಗೊಳಿಸಲಾಗುವುದು ಎಂದರು.
ಅಧ್ಯಕ್ಷರಾಗಿ ರಾಮಸಮುದ್ರ ಸುರೇಶ,ಉಪಾಧ್ಯಕ್ಷರಾಗಿ ಮಮತ ಆಯ್ಕೆ
ಬಿಜೆಪಿಯ ರಾಮಸಮುದ್ರ ಸುರೇಶ್ ಹಾಗೂ ಮಮತಾ ೧೫ ಮತಗಳನ್ನು ಪಡೆದು ಅಧ್ಯಕ್ಷ-ಉಪಾಧ್ಯಕ್ಷರಾದರೆ, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಆರ್.ಎಂ. ರಾಜಪ್ಪ, ಎಸ್‌ಡಿಪಿಐ ಅಭ್ಯರ್ಥಿ ಅಬ್ರಾರ್ ಅಹಮದ್ ತಲಾ ೧೪ ಮತ ಪಡೆದು ಪರಾಜಿತರಾದರು. ಮೂವರು ಕಾಂಗ್ರೆಸ್ ಸದಸ್ಯರಾದ ಆರ್.ಪಿ. ನಂಜುಂಡಸ್ವಾಮಿ, ನೀಲಮ್ಮ, ಭಾಗ್ಯಮ್ಮ ಸಭೆಗೆ ಗೈರಾಗಿದ್ದು, ಮತ್ತೋರ್ವ ಕಾಂಗ್ರೆಸ್ ಸದಸ್ಯೆ ಚಂದ್ರಕಲಾ ಸಭೆಗೆ ಆಗಮಿಸಿ, ಬಿಜೆಪಿ ಪರವಾಗಿ ಕೈ ಎತ್ತಿದರು. ಬಿಜೆಪಿ ಸದಸ್ಯ ಮಹದೇವಯ್ಯ ಕಾಂಗ್ರೆಸ್ ಪರವಾಗಿ ಕೈಎತ್ತಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಮುಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಕಾರ್ಯದಶಿಗಳಾದ ನಟರಾಜು, ಶಿವು ವಿರಾಟ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಜಯಸುಂದರ್, ಜಿಲ್ಲಾಧ್ಯಕ್ಷ ಚಂದ್ರಶೇಖರ್, ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡಹಳ್ಳಿ ಮೂರ್ತಿ ಇದ್ದರು.