ಬ್ರಹ್ಮಶ್ರೀ ನಾರಾಯಣ ಗುರು ಸಾಮಾಜಿಕ ಪರಿವರ್ತನೆ ಹರಿಕಾರ-ರಾಘವೇಂದ್ರರಾವ್‌

| Published : Sep 08 2025, 01:01 AM IST

ಬ್ರಹ್ಮಶ್ರೀ ನಾರಾಯಣ ಗುರು ಸಾಮಾಜಿಕ ಪರಿವರ್ತನೆ ಹರಿಕಾರ-ರಾಘವೇಂದ್ರರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಮಾಜಿಕ ಪರಿವರ್ತನೆಯ ಹರಿಕಾರರು. ಟಿ.ವಿ. ಮೊಬೈಲ್ ಹಾಗೂ ಇಂಟರ್‌ನೆಟ್ ಇಲ್ಲದ ಕಾಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾಡಿದ ಸಾಧನೆ ಅಪಾರವಾದುದು ಎಂದು ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಹೇಳಿದರು.

ಶಿರಹಟ್ಟಿ: ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಮಾಜಿಕ ಪರಿವರ್ತನೆಯ ಹರಿಕಾರರು. ಟಿ.ವಿ. ಮೊಬೈಲ್ ಹಾಗೂ ಇಂಟರ್‌ನೆಟ್ ಇಲ್ಲದ ಕಾಲದಲ್ಲಿ ಅವರು ಮಾಡಿದ ಸಾಧನೆ ಅಪಾರವಾದುದು ಎಂದು ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಹೇಳಿದರು. ಭಾನುವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆಗೆ ಆಸ್ಪದ ನೀಡದೇ ಎಲ್ಲರೂ ಸಮಾನರು ಎಂಬ ಭಾವನೆ ಮೂಡಬೇಕು. ಇದನ್ನೇ ನಾರಾಯಣ ಗುರುಗಳು ಹೇಳಿದ್ದಾರೆ. ಸಮಾನತೆಯನ್ನು ಸಾರುವಂತಹ ಪರಿಸ್ಥಿತಿ ಅಂದಿನ ಕಾಲದಲ್ಲಿ ಇತ್ತು. ನಾರಾಯಣ ಗುರುಗಳು ಉನ್ನತವಾದ ಆದರ್ಶವನ್ನು ಕೇವಲ ಮಾತುಗಳಲ್ಲಿ ಮಾತ್ರ ಅಲ್ಲ ಅದನ್ನು ಹೇಗೆ ಆಚರಣೆ ಮಾಡಬೇಕು ಎಂಬುದನ್ನು ತೋರಿಸಿದ್ದಾರೆ ಎಂದರು. ಭಕ್ತಿ ಕ್ರಾಂತಿಗೆ ಹೆಸರಾದ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆ ನೆಲೆಸುವಂತೆ ಮಾಡಿದ್ದಾರೆ. ಸಮಾನತೆಯನ್ನು ಆ ಕಾಲದಲ್ಲಿ ಸಾಧಿಸುವುದು ಸುಲಭವಾಗಿದ್ದಿಲ್ಲ. ಜಗತ್ತಿನಲ್ಲಿ ಆಗದಂತಹ ಭಕ್ತಿಕ್ರಾಂತಿ ನಮ್ಮ ದೇಶದಲ್ಲಿ ಆಗಿದೆ. ಸಮಾನತೆ ಸಾರುವಂತಹ ಹಲವಾರು ಜನ ತಮ್ಮ ಪ್ರಾಣ ಬಿಡುವಂತಹ ಕಾಲವಿತ್ತು. ಇವತ್ತಿಗೂ ಸಹ ಅಲ್ಲಲ್ಲಿ ಅಸಮಾನತೆ, ಭೇದ- ಭಾವನೆ ಮೇಲು, ಕೀಳು ಅನ್ನುವ ಭಾವವನ್ನ ಹಾಗೂ ಕೆಲ ಸಮುದಾಯಗಳನ್ನು ದೂರ ಇಡುವ ವ್ಯವಸ್ಥೆಯನ್ನು ನೋಡಿದರೆ ಮನಸ್ಸಿಗೆ ನೋವೆನಿಸುತ್ತಿದೆ ಎಂದರು.ಅವರು ಬೋಧಿಸಿದ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗುರುಗಳು ಒಂದೇ ಜಾತಿಗೆ ಸೀಮಿತವಾದವರಲ್ಲ. ಇಡೀ ಜಗತ್ತಿನ ಗುರುಗಳು. ಶೋಷಿತರ, ದೀನ ದಲಿತರಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದರು. ಅವರು ತಮ್ಮ ಸಂದೇಶಗಳಲ್ಲಿ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂದು ಸಾರಿದ್ದರು. ಜಾತಿ ಪದ್ಧತಿ ನಿರ್ಮೂಲನೆ ಹೋರಾಟ ಮಾಡಿದವರಲ್ಲಿ ಪ್ರಮುಖರಾಗಿದ್ದರು ಎಂದರು. ನಾರಾಯಣಗುರುಗಳು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆಯುವ ಮೂಲಕ ಸಮಾಜದ ಸುಧಾರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜಾತಿ ನಿರ್ಮೂಲನೆಗೆ ಸಾಕಷ್ಟು ಹೋರಾಟ ಮಾಡಿದ್ದರು. ಸಮಾಜ ಸುಧಾರಣೆಗೆ ಹೋರಾಟ ಮಾಡಿದ್ದ ನಾರಾಯಣ ಗುರುಗಳ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಕರೆ ನೀಡಿದರು. ಹತ್ತೊಂಬತ್ತನೇ ಶತಮಾನದಲ್ಲೇ ನಾರಾಯಣ ಗುರುಗಳು ಸಮುದಾಯಗಳ ಒಗ್ಗಟ್ಟಿಗೆ ಶ್ರಮಿಸಿ ಸಮಾಜ ಸುಧಾರಣೆಗಾಗಿ ಸಮಾನ ಅವಕಾಶ ಸಿಗಬೇಕೆಂದು ಸಾರಿದ್ದರು. ಇಂತಹ ಮಹಾನ್ ವ್ಯಕ್ತಿ ಬಗ್ಗೆ ಹಲವು ಪುಸ್ತಕಗಳು ಪ್ರಕಟವಾಗಿವೆ. ಈ ಪುಸ್ತಕಗಳ ಅಧ್ಯಯನದ ಮೂಲಕ ನಾರಾಯಣ ಗುರುಗಳು ಅನುಸರಿಸಿದ ಸಮಾನತೆಯ ಮಂತ್ರ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಬೆಳೆಯುವಂತಾಗಬೇಕು ಎಂದು ಹೇಳಿದರು.ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಶಾಂತ ಕುಲಕರ್ಣಿ, ಕೃಷಿ ಇಲಾಖೆಯ ಲಮಾಣಿ, ನದಾಫ್ ಸೇರಿದಂತೆ ಅನೇಕರು ಇದ್ದರು.