ಮಗಳ ಮರಣ ಪತ್ರ ನೀಡಲು ಲಂಚ : ವ್ಯವಸ್ಥೆ ಮೇಲೆ ನಿವೃತ್ತ ಅಧಿಕಾರಿ ಕಿಡಿ

| N/A | Published : Oct 31 2025, 04:45 AM IST / Updated: Oct 31 2025, 07:15 AM IST

Bengaluru Bribe
ಮಗಳ ಮರಣ ಪತ್ರ ನೀಡಲು ಲಂಚ : ವ್ಯವಸ್ಥೆ ಮೇಲೆ ನಿವೃತ್ತ ಅಧಿಕಾರಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಅನಾರೋಗ್ಯ ಹಿನ್ನೆಲೆಯಲ್ಲಿ ಮೃತಪಟ್ಟ ತಮ್ಮ ಮಗಳ ಮೃತದೇಹ ಸಾಗಿಸಲು ಹಾಗೂ ಮರಣ ಪತ್ರ ನೀಡಲು ಜಿಬಿಎ ಹಾಗೂ ಪೊಲೀಸರು ಲಂಚ ಪಡೆದರು ಎಂದು ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ (ಬಿಪಿಸಿಎಲ್‌) ನಿವೃತ್ತ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಓ) ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು :  ಅನಾರೋಗ್ಯ ಹಿನ್ನೆಲೆಯಲ್ಲಿ ಮೃತಪಟ್ಟ ತಮ್ಮ ಮಗಳ ಮೃತದೇಹ ಸಾಗಿಸಲು ಹಾಗೂ ಮರಣ ಪತ್ರ ನೀಡಲು ಜಿಬಿಎ ಹಾಗೂ ಪೊಲೀಸರು ಲಂಚ ಪಡೆದರು ಎಂದು ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ (ಬಿಪಿಸಿಎಲ್‌) ನಿವೃತ್ತ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಓ) ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ತಮ್ಮ ನೋವನ್ನು ತೊಡಿಕೊಂಡು ಶಿವಕುಮಾರ್ ಹಾಕಿರುವ ಪೋಸ್ಟ್ ವೈರಲ್ ಆಗಿದ್ದು, ಪೊಲೀಸರು ಹಾಗೂ ಜಿಬಿಎ ವಿರುದ್ಧ ಜನರು ಕಟುವಾಗಿ ಟೀಕಿಸಿದ್ದಾರೆ.

ದುರಂತ ರಾಜ್ಯ:

ಇತ್ತೀಚಿಗೆ ಅನಾರೋಗ್ಯದಿಂದ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ 34 ವರ್ಷದ ತಮ್ಮ ಏಕೈಕ ಮಗಳು ಮೃತಪಟ್ಟಿದ್ದಳು. ಆಗ ಆಸ್ಪತ್ರೆಯಿಂದ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್ ವಾಹನ, ಎಫ್‌ಐಆರ್ ದಾಖಲಿಸಲು ಪೊಲೀಸರು, ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಹಾಗೂ ಮರಣ ಪ್ರಮಾಣ ನೀಡಲು ಬಿಬಿಎಂಪಿ ಅಧಿಕಾರಿಗಳು ಹೀಗೆ ಪ್ರತಿ ಹಂತದಲ್ಲಿ ಲಂಚ ಕೊಡಬೇಕಾಯಿತು. ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ನಿರ್ದಯತೆ ತೋರಿದ. ಮಗಳ ಕಳೆದುಕೊಂಡ ದುಃಖತಪ್ತ ಓರ್ವ ತಂದೆಯ ನೋವು ಆತನಿಗೆ ಅರ್ಥವಾಗಲಿಲ್ಲ. ಸಹಾನುಭೂತಿ ಸಹ ಇರಲಿಲ್ಲ. ನಾನು ಸ್ಪಲ್ಪ ಮಟ್ಟಿಗೆ ಸ್ಥಿತಿವಂತ. ಹಾಗಾಗಿ ಹಣ ನೀಡಿದೆ. ಆದರೆ ಓರ್ವ ಬಡಪಾಯಿಗೆ ಹೀಗಾದರೆ ಆತ ಹೇಗೆ ಎದುರಿಸುತ್ತಾನೆ. ಇದು ದುರಂತ ರಾಜ್ಯ ಎಂದು ಶಿವಕುಮಾರ್ ಪೋಸ್ಟ್ ಹಾಕಿದ್ದಾರೆ.

ಲಂಚದ ವಿವರ:

ಆಂಬ್ಯುಲೆನ್ಸ್ ಚಾಲಕನಿಗೆ ₹7000, ಎಫ್‌ಐಆರ್ ದಾಖಲಿಸಲು ₹5000, ಮರಣೋತ್ತರ ಪರೀಕ್ಷೆಗೆ ₹5000 ಹಾಗೂ ಮರಣ ಪತ್ರಕ್ಕೆ ₹5000 ಹೀಗೆ ಸುಮಾರು ₹30 ಸಾವಿರ ಲಂಚವನ್ನು ಶಿವಕುಮಾರ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆಂಬ್ಯುಲೆನ್ಸ್ ಬಾಡಿಗೆಗೆ ನಿಗದಿತ ದರಕ್ಕೆ ಹೆಚ್ಚು ವಸೂಲಿ ಮಾಡಲಾಗಿದೆ. ಇನ್ನು ಪೊಲೀಸರು ಹಾಗೂ ಅಧಿಕಾರಿಗಳಿಗೆ ತ್ವರಿತ ಕೆಲಸಕ್ಕೆ ಹಣ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪಿಎಸ್‌ಐ, ಕಾನ್‌ಸ್ಟೇಬಲ್ ತಲೆದಂಡ 

ಬೆಂಗಳೂರು: ಬಿಪಿಸಿಎಲ್‌ ನಿವೃತ್ತ ಅಧಿಕಾರಿ ಶಿವಕುಮಾರ್ ಅವರ ಪುತ್ರಿ ಅಕಾಲಿಕ ಮರಣ ಸಂಬಂಧ ಎಫ್‌ಐಆರ್ ದಾಖಲಿಸಲು ಲಂಚ ಪಡೆದ ಆರೋಪದ ಮೇರೆಗೆ ಬೆಳ್ಳಂದೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸೇರಿ ಇಬ್ಬರು ಪೊಲೀಸರ ತಲೆದಂಡವಾಗಿದೆ. ಪಿಎಸ್ಐ ಸಂತೋಷ್ ಹಾಗೂ ಕಾನ್‌ಸ್ಟೇಬಲ್ ಗೋರಖ್‌ನಾಥ್ ಅಮಾನತುಗೊಂಡಿದ್ದಾರೆ. ಲಂಚಾತಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶಿವಕುಮಾರ್ ಪೋಸ್ಟ್ ಹಾಕಿದ್ದನ್ನು ಗಂಭೀರವಾಗಿ ಪರಿಗಣಿಸಿದ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಪರಶುರಾಮ್ ಅವರು, ಈ ಇಬ್ಬರನ್ನು ಅಮಾನತುಗೊಳಿಸಿದ್ದಾರೆ. ಅಧಿಕಾರಿ ಮಗಳು ಅಕ್ಷಯಾ ಬ್ರ್ರೈನ್ ಹ್ಯಾಮರೇಜ್ ಕಾರಣದಿಂದ ಮೃತಪಟ್ಟಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸಲು ಶಿವಕುಮಾರ್ ಬಳಿ ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

Read more Articles on