ಸಾರಾಂಶ
ಶಿವಮೊಗ್ಗ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ ಎಂಬುದಕ್ಕೆ ಆಡಳಿತ ಪಕ್ಷದ ಶಾಸಕ ಬಿ.ಆರ್.ಪಾಟೀಲ್ ಆಡಿಯೋ ಸಾಕ್ಷಿಯಾಗಿದೆ ಎಂದು ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಯಾವ ಮಟ್ಟದಲ್ಲಿ ನಡೆಯುತ್ತಿದೆ ಎಂಬುದನ್ನು ಆಡಳಿತ ಪಕ್ಷದ ಶಾಸಕರೇ ರಾಜ್ಯದ ಜನತೆ ಮುಂದಿಟ್ಟಿದ್ದಾರೆ. ವಸತಿ ಇಲಾಖೆಯಲ್ಲಿ ಮನೆಗಳ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ. ಇಲಾಖೆಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಸಾರ್ವಜನಿಕರ ಮುಂದೆಯೇ ಹೇಳಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿಗಳು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ. ಇಲಾಖೆಯ ಸಚಿವರ ಬಗ್ಗೆಯೂ ಈ ಬಗ್ಗೆ ಕೇಳಿಲ್ಲ. ತಿಪ್ಪೇಸಾರುವ ಕೆಲಸ ನಡೆಯುತ್ತಿದೆ ಎಂದು ದೂರಿದರು.ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನು ಸಾಕುತ್ತಿದೆ ಎಂಬುದು ಈಗಾಗಲೇ ಗೊತ್ತಾಗಿದೆ. ಇಂತಹ ಭ್ರಷ್ಟಾಚಾರ ಕೂಡಲೇ ತನಿಖೆಯಾಗಬೇಕು. ವಸತಿ ಸಚಿವ ಜಮೀರ್ ಅಹ್ಮದ್ ತಮ್ಮ ಹುದ್ದೆಯಲ್ಲಿ ಮುಂದುವರಿದರೆ ತನಿಖೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ತುಷ್ಟೀಕರಣ ಸರಿಯಲ್ಲ:ಮುಸಲ್ಮಾನರ ತುಷ್ಠೀಕರಣ ಮಿತಿಮೀರಿ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಮುಂದಿನ ಅಧಿವೇಶನದಲ್ಲಿ ಬಿಜೆಪಿ ಹೋರಾಟದ ಸಂಕಲ್ಪ ಮಾಡಿದೆ. ರಾಜ್ಯ ಸರ್ಕಾರದ ಮುಸ್ಲಿಮರ ಓಲೈಕೆ ಮುಂದುವರಿಸುತ್ತಿದೆ. ಈಗಾಗಲೇ ಸಾಕಷ್ಟು ಅನುದಾನಗಳನ್ನು ಮೀಸಲಾತಿಯನ್ನು ನೀಡಿದ್ದರೂ, ಈಗ ಮತ್ತೊಮ್ಮೆ ವಸತಿ ಯೋಜನೆಗಳನ್ನು ಶೇ.15ರಷ್ಟು ಮೀಸಲಾತಿಯನ್ನು ಹೆಚ್ಚಿಸಿದೆ. ಇದೊಂದು ಘೋರ ಅಪರಾಧವಾಗಿದೆ ಎಂದರು.
ಬಿಜೆಪಿ ನಗರ ಅಧ್ಯಕ್ಷ ಮೋಹನ್‍ರೆಡ್ಡಿ ಮಾತನಾಡಿ, ಕೇಂದ್ರದ ನರೇಂದ್ರಮೋದಿಯವರ ಸರ್ಕಾರ ಬಂದು 11 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇದು ವಿಕಸಿತ ಭಾರತದ ಅಮೃತಕಾಲ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ಈಗಾಗಲೇ ಆಯೋಜಿಸಿದೆ. ಜೂ. 27ರಂದು ತುರ್ತುಪರಿಸ್ಥಿತಿಯ ಕರಾಳದಿನ ಎಂಬ ವಿಶೇಷ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಸಂಜೆ 5.30ಕ್ಕೆ ಹಮ್ಮಿಕೊಂಡಿದೆ ಎಂದರು.ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾಲೇಜು ಯುವಕರಿಗೆ ಮತ್ತು ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಆಸಕ್ತರು ಜೂ.25ರ ಸಂಜೆಯೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಜೂ.26ರಂದು ಬಿಜೆಪಿ ಕಚೇರಿಯಲ್ಲಿ ಸ್ಪರ್ಧೆ ಏರ್ಪಡಿಸಲಾಗುವುದು ಎಂದರು.
ಜೂ.27ರಂದು ನಡೆಯುವ ಕರಾಳ ದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಸುರೇಶ್‍ಕುಮಾರ್ ಪ್ರಮುಖ ಭಾಷಣ ಮಾಡುವರು. ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಬಿಜೆಪಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.ಪತ್ರಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ಕೆ.ಜಗದೀಶ್, ನಾಗರಾಜ್, ದೀನದಯಾಳ್, ಕೆ.ವಿ.ಅಣ್ಣಪ್ಪ, ಸುರೇಖ ಮುರಳೀಧರ್ ಸೇರಿದಂತೆ ಹಲವರಿದ್ದರು.