ಬಿಆರ್‌ಟಿಎಸ್‌: ಟ್ರಾಫಿಕ್‌ ಕಿರಿಕಿರಿ ತಪ್ಪಿಸಲು ಹೊಸ ಪ್ರಯತ್ನ!

| Published : Oct 05 2024, 01:40 AM IST / Updated: Oct 05 2024, 01:41 AM IST

ಬಿಆರ್‌ಟಿಎಸ್‌: ಟ್ರಾಫಿಕ್‌ ಕಿರಿಕಿರಿ ತಪ್ಪಿಸಲು ಹೊಸ ಪ್ರಯತ್ನ!
Share this Article
  • FB
  • TW
  • Linkdin
  • Email

ಸಾರಾಂಶ

ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಬರೋಬ್ಬರಿ 32 ಸಿಗ್ನಲ್‌ಗಳು ಬರುತ್ತವೆ. ಎಲ್ಲೆಡೆ ಮೊದಲು ಬಿಆರ್‌ಟಿಎಸ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆದರೆ ಇದೀಗ ಮಿಶ್ರಪಥದಲ್ಲಿ ಯು ಟರ್ನ್‌ ತೆಗೆದುಕೊಳ್ಳಲು, ಎಡಕ್ಕೆ ತಿರುಗುವ ಸಮಯವನ್ನು ಹೆಚ್ಚಿಗೆ ಮಾಡಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರದ ನಡುವೆ ತ್ವರಿತಗತಿಯ ಸಾರಿಗೆ ವ್ಯವಸ್ಥೆ ಬಿಆರ್‌ಟಿಎಸ್‌ನಿಂದ ಆಗುತ್ತಿದ್ದ ಟ್ರಾಫಿಕ್‌ ಕಿರಿಕಿರಿ ತಪ್ಪಿಸಲು ಇದೀಗ ಮಿಶ್ರಪಥಕ್ಕಿರುವ ಟ್ರಾಫಿಕ್‌ ಸಿಗ್ನಲ್‌ ಸಮಯ ಕಡಿತಗೊಳಿಸಿದೆ. ಈ ಮೂಲಕ ಹೊಸ ಮಾರ್ಗ ಕಂಡುಕೊಂಡಂತಾಗಿದೆ.

2018ರಲ್ಲಿ ಪ್ರಾರಂಭವಾಗಿರುವ ಬಿಆರ್‌ಟಿಎಸ್‌ನಿಂದ ಟ್ರಾಫಿಕ್‌ ಕಿರಿಕಿರಿಯಿಂದ ಆರೇ ವರ್ಷದಲ್ಲೇ ಬೇಡವಾಗಿತ್ತು. ಮಿಶ್ರಪಥದಲ್ಲಿ ವಿಪರೀತ ಟ್ರಾಫಿಕ್‌ ಜಾಮ್‌ ಆಗಿರುತ್ತಿತ್ತು. ಇದು ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಮಾಡುತ್ತಿತ್ತು. ಇದರಿಂದ ಎಷ್ಟು ಸಮಯ ನಿಲ್ಲುವುದು ಎಂದುಕೊಂಡು ಟ್ರಾಫಿಕ್‌ ಸಿಗ್ನಲ್‌ ಜಂಪ್‌ ಮಾಡುವ ಪ್ರಕರಣಗಳು ಹೆಚ್ಚಿದ್ದವು. ಜತೆಗೆ ಅಪಘಾತಗಳು ಸಹ ಹೆಚ್ಚಾಗುತ್ತಿದ್ದವು.

ಹೀಗಾಗಿ ಈ ಬಿಆರ್‌ಟಿಎಸ್‌ ವ್ಯವಸ್ಥೆಯನ್ನೇ ತೆಗೆದುಬಿಡಿ ಎಂಬ ಕೂಗು ಸಹ ಕೇಳಿ ಬರಲಾರಂಭಿಸಿತು. ಇದಕ್ಕಾಗಿ ಧಾರವಾಡದಲ್ಲಿ ಪಾದಯಾತ್ರೆ ನಡೆಸಿದರೆ, ಹುಬ್ಬಳ್ಳಿಯಲ್ಲಿ ಹತ್ತಾರು ಸಂಘಟನೆಗಳು ಪ್ರತಿಭಟನೆ ನಡೆಸಿದ್ದುಂಟು.

ಎಲ್‌ಆರ್‌ಟಿ:

ಈ ನಡುವೆ ಬಿಆರ್‌ಟಿಎಸ್‌ ಬದಲು ಎಲ್‌ಆರ್‌ಟಿ (ಲೈಟ್‌ ರೈಲ್‌ ಟ್ರಾನ್ಸಿಟ್‌)ನ್ನು ಜಾರಿಗೊಳಿಸಲು ಚಿಂತನೆ ಕೂಡ ನಡೆಯಿತು. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಖಾಸಗಿಯಾಗಿ ಸಮೀಕ್ಷೆಯನ್ನೂ ನಡೆಸಿದರು. ಎಲ್ಆರ್‌ಟಿ ಕುರಿತಂತೆ ಈಗಾಗಲೇ ಒಂದು ಬಾರಿ ಸಭೆಯನ್ನೂ ಸಚಿವರು ನಡೆಸಿದ್ದುಂಟು.

ಇವೆಲ್ಲವುಗಳ ನಡುವೆಯೇ ಬಿಆರ್‌ಟಿಎಸ್‌ ಸಂಸ್ಥೆಯೇ ಟ್ರಾಫಿಕ್‌ ಜಾಮ್‌ ಸೇರಿದಂತೆ ವಿವಿಧ ಲೋಪದೋಷ ಪತ್ತೆ ಹಚ್ಚಲು ಸಮೀಕ್ಷೆಯನ್ನೂ ನಡೆಸಿದೆ. ಆ ಸಮೀಕ್ಷೆಯಂತೆ ಇದೀಗ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿನ ಸಮಯ ಕಡಿತಗೊಳಿಸಿದೆ. ಈ ಮೂಲಕ ಮಿಶ್ರಪಥದಲ್ಲಿನ ಟ್ರಾಫಿಕ್‌ ಜಾಮ್‌ ಆಗುತ್ತಿರುವುದನ್ನು ತಪ್ಪಿಸಲು ಮೊದಲ ಹೆಜ್ಜೆ ಇಟ್ಟಿದೆ.

ಎಷ್ಟಿತ್ತು ಎಷ್ಟು ಕಡಿತ:

ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಬರೋಬ್ಬರಿ 32 ಸಿಗ್ನಲ್‌ಗಳು ಬರುತ್ತವೆ. ಎಲ್ಲೆಡೆ ಮೊದಲು ಬಿಆರ್‌ಟಿಎಸ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆದರೆ ಇದೀಗ ಮಿಶ್ರಪಥದಲ್ಲಿ ಯು ಟರ್ನ್‌ ತೆಗೆದುಕೊಳ್ಳಲು, ಎಡಕ್ಕೆ ತಿರುಗುವ ಸಮಯವನ್ನು ಹೆಚ್ಚಿಗೆ ಮಾಡಿದೆ. ಉದಾಹರಣೆಗೆ ಒಂದು ಟ್ರಾಫಿಕ್‌ ಸೈಕಲ್‌ (ಅದು ಜಂಕ್ಷನ್‌ ಮೇಲೆ ಆಧಾರ) 120 ಸೆಕೆಂಡ್‌ ಇದೆ ಎಂದು ಭಾವಿಸಿದರೆ ಬಿಆರ್‌ಟಿಎಸ್‌ ಕಾರಿಡಾರ್‌ ಹಾಗೂ ಮಿಶ್ರಪಥದಲ್ಲಿನ ನೇರವಾಗಿ ಚಲಿಸುವ ವಾಹನಗಳಿಗೆ ಏಕಕಾಲಕ್ಕೆ ಗ್ರಿನ್‌ ಸಿಗ್ನಲ್‌ ಬಂದು ಬಿಡುತ್ತಿತ್ತು. ಜತೆಗೆ 30-40 ಸೆಕೆಂಡ್‌ವರೆಗೂ ಇರುತ್ತಿತ್ತು. ಆದರೆ ಇದೀಗ ಹಾಗೆ ಮಾಡುತ್ತಿಲ್ಲ. ಜತೆಗೆ ಯೂ ಟರ್ನ್‌ ತೆಗೆದುಕೊಳ್ಳುವವರು 80ರಿಂದ 90 ಸೆಕೆಂಡ್‌ ಕಾಯುವ ಸ್ಥಿತಿ ಎದುರಾಗುತ್ತಿತ್ತು. ಇದರಿಂದಾಗಿ ಮಿಶ್ರಪಥದಲ್ಲಿ ಟ್ರಾಫಿಕ್‌ ಕಿರಿಕಿರಿಯಾಗುತ್ತಿತ್ತು.

ಆದರೆ ಈಗ ಟ್ರಾಫಿಕ್‌ ಸೈಕಲ್‌ನಲ್ಲಿ ಎರಡು ಸಲ ಯು ಟರ್ನ್‌ ತೆಗೆದುಕೊಳ್ಳುವ ಅಥವಾ ಎಡಕ್ಕೆ, ಬಲಕ್ಕೆ ತಿರುಗುವ ವಾಹನಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ನೇರವಾಗಿ ಗ್ರೀನ್‌ ಸಿಗ್ನಲ್‌ ಸಿಕ್ಕಬಳಿಕ 10 ಸೆಕೆಂಡ್‌ನಲ್ಲಿ ಯುಟರ್ನ್‌ ತೆಗೆದುಕೊಳ್ಳುವ ವಾಹನಗಳಿಗೂ ಗ್ರೀನ್‌ ಸಿಗ್ನಲ್‌ ಸಿಗುತ್ತಿದೆ. ಇದರಿಂದ ಒಂದು ಸೈಕಲ್‌ 20-25 ಸೆಕೆಂಡ್‌ ಕಾಯುವ ಅವಧಿ ಮಿಶ್ರಪಥದಲ್ಲಿನ ವಾಹನಗಳಿಗೆ ತಪ್ಪಿದಂತಾಗಿದೆ. ಜತೆಗೆ 20-25 ಸೆಕೆಂಡ್‌ ಬಿಆರ್‌ಟಿಎಸ್‌ ಬಸ್‌ಗಳಿಗೆ ಕಾಯುವ ಅವಧಿ ಹೆಚ್ಚಾಗಿದೆ.

ಜತೆಗೆ ಸಮೀಪದಲ್ಲೇ ಇರುವ ಬಸ್‌ ನಿಲ್ದಾಣಗಳಲ್ಲಿನ ಸಿಗ್ನಲ್‌ಗಳನ್ನು ಏಕಕಾಲಕ್ಕೆ ಬಿಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಉದಾಹರಣೆ ಬಾಗಲಕೋಟೆ ಪೆಟ್ರೋಲ್‌ ಬಂಕ್‌ ಹಾಗೂ ಎನ್‌ಟಿಟಿಎಫ್‌ನಲ್ಲಿ ಸಿಗ್ನಲ್‌ಗಳನ್ನು ಏಕಕಾಲಕ್ಕೆ ಬಿಡಲಾಗುತ್ತಿದೆ. ಈ ಪ್ರಯೋಗವನ್ನು ಕಳೆದ 10-15 ದಿನಗಳಿಂದ ಮಾಡಲಾಗುತ್ತಿದೆ.

ಇದು ಸಿಟಿ ಲಿಮಿಟ್‌ ಅಂದರೆ ಹುಬ್ಬಳ್ಳಿ ಹೊಸೂರನಿಂದ ಶ್ರೀನಗರವರೆಗೆ ಹಾಗೂ ಗಾಂಧಿನಗರದಿಂದ ಜುಬಲಿ ಸರ್ಕಲ್‌ ಮುನ್ನ ಬರುವ ಬಸ್‌ ನಿಲ್ದಾಣದವರೆಗೂ ಮಾಡಲಾಗಿದೆ. ಈ ಎಲ್ಲ ಕ್ರಮಗಳಿಂದ ಟ್ರಾಫಿಕ್‌ ಜಾಮ್‌ ಸ್ವಲ್ಪ ತಪ್ಪುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಪ್ರಯೋಗಾತ್ಮಕವಾಗಿ ಮಾಡಲಾಗುತ್ತಿದೆ. ಇನ್ನಷ್ಟು ಸುಧಾರಣೆ ಮಾಡಲಾಗುವುದು. ಆಗ ಮತ್ತಷ್ಟು ಟ್ರಾಫಿಕ್‌ ಜಾಮ್‌ ಕಡಿಮೆಯಾಗಲಿದೆ ಎಂಬ ವಿಶ್ವಾಸ ಬಿಆರ್‌ಟಿಎಸ್‌ನದ್ದು.

ಒಟ್ಟಿನಲ್ಲಿ ಬಿಆರ್‌ಟಿಎಸ್‌ ಬೇಡವೇ ಬೇಡ ಎಂಬ ಕೂಗನ್ನು ತಗ್ಗಿಸುವ ನಿಟ್ಟಿನಲ್ಲಿ ಬಿಆರ್‌ಟಿಎಸ್‌ ಸಂಸ್ಥೆ ಹೊಸ ಪ್ರಯತ್ನ ಮಾಡುತ್ತಿರುವುದಂತೂ ಸತ್ಯ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ.