ಸಾರಾಂಶ
ಚಿತ್ರದುರ್ಗ: ಬುದ್ಧನೆಂದರೆ ಜಾಗ್ರತನಾದವನು, ಪರಿಸದ ಬಗ್ಗೆ ಅರಿವು ಮತ್ತು ವಿವೇಕ ತುಂಬಿದ ಪ್ರಜ್ಞೆಯುಳ್ಳವನು. ನೈಸರ್ಗಿಕ ಸತ್ಯದ ಪ್ರತಿಪಾದಕ ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಶಿವಾನಂದ್ ಕೆಳಗಿನಮನೆ ಅಭಿಪ್ರಾಯಪಟ್ಟರು.
ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರ ಧ್ಯಾನ ಕೇಂದ್ರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಕಂಡಂತಹ ಬುದ್ಧ ಹಾಗೂ ಧರ್ಮ ದರ್ಶನ ಮತ್ತು ವಿಪಶ್ಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಬುದ್ಧನು ಸನ್ನಡತೆ ಸಚ್ಚಾರಿತ್ರಿಕೆಯ ಸದ್ಗುಣ, ಪವಿತ್ರ ವ್ಯಕ್ತಿತ್ವ, ಶುದ್ಧವಾದ ನಡೆ-ನುಡಿ, ಅಂತರಂಗ-ಬಹಿರಂಗಗಳನ್ನು ತನ್ನ ಧರ್ಮದ ತಳಪಾಯವೆಂದು ತಿಳಿದು ಆಚರಿಸಿದವನು. ಹಸಿವು ಮಹಾರೋಗ ಹಾಗೂ ದಾರಿದ್ರತೆಯೇ ಮಹಾ ದುಃಖವೆಂದು ಹೇಳಿದ್ದರೆಂದರು.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ವಸ್ತು ಹೇಗಿದೆಯೋ ಹಾಗೆಯೇ ಅಂತರ ದೃಷ್ಟಿಯಿಂದ ಅರಿತು, ಸತ್ಯಸಾಕ್ಷಾತ್ಕಾರದ ಅನುಭವ ಕಂಡುಕೊಳ್ಳಲು ನೆರವಾಗುವ ವಿದ್ಯೆಯೇ ವಿಪಶ್ಯನ. ಮನಸ್ಸನ್ನು ಪರಿಶುದ್ಧಗೊಳಿಸುವುದು ಇದರ ಮುಖ್ಯ ಗುರಿ. ನಮ್ಮನ್ನು ವ್ಯಾಕುಲಗೊಳಿಸುವ ಮನಸ್ಸಿನ ತಳಮಳ ಮತ್ತು ವಿಕಾರಗಳನ್ನು ನಿವಾರಿಸುತ್ತದೆ ಎಂದರು.
ನಿಮ್ಮ ಒಳಗಡೆಯ ಸತ್ಯತೆಯನ್ನು ನೀವು ಯಾವಾಗ ಗಮನಿಸುವುದಿಲ್ಲವೋ, ಆಗ ನಿಮ್ಮ ದುಃಖಕ್ಕೆ ಹೊರಗಣ ತೋರಿಕೆಯ ಕಾರಣ ಕೊಡುವಿರಿ ಮತ್ತು ಅದನ್ನು ಸರಿಪಡಿಸಲು ಪ್ರಯತ್ನಿಸುವಿರಿ. ನಾನು ಸುಧಾರಣೆಯಾಗಬೇಕಾಗಿಲ್ಲ. ನಾನು ಸರಿಯಾಗಿ ಇದ್ದೇನೆ. ನನ್ನಲ್ಲಿ ಸುಧಾರಣೆಯಾಗುವುದು ಯಾವುದು ಇಲ್ಲ ಎನ್ನುತ್ತೇವೆ. ನಾವೇ ನಮ್ಮ ದುಃಖಕ್ಕೆ ಕಾರಣವೆಂದು ನಮ್ಮೊಳಗೆ ನೋಡುವುದೇ ಇಲ್ಲ. ದುಃಖದ ಮೂಲ ಸಮಸ್ಯೆ ನಮ್ಮೊಳಗೆ ಇದೆಯೇ ಹೊರತು, ಹೊರಗಡೆಯಿಲ್ಲ ಎಂದರು.ಬುದ್ಧ ಮತ್ತು ಆತನ ಧರ್ಮ ಕೃತಿಯನ್ನು ಇಂದೂಧರ ಗೌತಮ್ ಓದಿ ವಿಶ್ಲೇಸಿದರು. ಧರ್ಮ ಧ್ಯಾನ ಕಾರ್ಯಕ್ರಮವನ್ನು ಪ್ರೊಫೆಸರ್ ಕರಿಬಸಪ್ಪ, ಭೀಮನಕೆರೆ ತಿಪ್ಪೇಸ್ವಾಮಿ ನಡೆಸಿಕೊಟ್ಟರು. ಸ್ಕೌಟ್ಸ್ ಅಂಡ್ ಗೈಡ್ಸ್‌ನ ನಿವೃತ್ತ ಪ್ರಾಂಶುಪಾಲ ಮಂಜಣ್ಣ ಜ್ಞಾನದ ಪ್ರಾಮುಖ್ಯತೆ ಹಾಗೂ ಅಜ್ಞಾನದಿಂದಾಗುವ ಅವಘಡಗಳ ಕುರಿತು ಕವನ ಗಾಯನ ಮಾಡಿದರು. ಕೋಟೆನಾಡು ಬುದ್ಧ ವಿಹಾರದ ಕಾರ್ಯಾಧ್ಯಕ್ಷ ಬಿ.ಪಿ.ಪ್ರೇಮ್‌ನಾಥ್ ಅಧ್ಯಕ್ಷತೆವಹಿಸಿದ್ದರು. ಬೆಸ್ಕಾಂ ತಿಪ್ಪೇಸ್ವಾಮಿ, ಗುಡ್ಡದ ರಂಗವನಹಳ್ಳಿಯ ದುರ್ಗೇಶಪ್ಪ, ಕರಿಬಸಪ್ಪ, ಮಠದ ಕುರುಬರಹಟ್ಟಿಯ ತಿಪ್ಪಮ್ಮ, ಶಾಂತಮ್ಮ, ತಿಪ್ಪಮ್ಮ, ಗಿರಿಜಾ ನಾಗಭೂಷಣ್, ಬನ್ನಿಕೋಡ ರಮೇಶ್ ಇದ್ದರು.