ಭತ್ತದ ಹುಲ್ಲಿಗೆ ಬೆಂಕಿ ಹಚ್ಚುವುದರಿಂದ ಮಣ್ಣಿನ ಫಲವತ್ತೆತೆ ನಾಶ

| Published : Dec 22 2024, 01:31 AM IST

ಭತ್ತದ ಹುಲ್ಲಿಗೆ ಬೆಂಕಿ ಹಚ್ಚುವುದರಿಂದ ಮಣ್ಣಿನ ಫಲವತ್ತೆತೆ ನಾಶ
Share this Article
  • FB
  • TW
  • Linkdin
  • Email

ಸಾರಾಂಶ

ಕಟಾವು ನಂತರ ರೈತರು ಸಮೂಹ ಸನ್ನಿಗೊಳಗಾದಂತೆ ಭತ್ತದ ಹುಲ್ಲನ್ನು ಸುಡುತ್ತಿದ್ದು, ಇದು ಭೂಮಿಯ ಫಲವತ್ತತೆಯನ್ನು ಹಾಳುಮಾಡುತ್ತದೆ.

ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಾರುತಿ ಅವರಿಂದ ರೈತರಿಗೆ ತಿಳಿವಳಿಕೆಕನ್ನಡಪ್ರಭ ವಾರ್ತೆ ಕಾರಟಗಿ

ಕಟಾವು ನಂತರ ರೈತರು ಸಮೂಹ ಸನ್ನಿಗೊಳಗಾದಂತೆ ಭತ್ತದ ಹುಲ್ಲನ್ನು ಸುಡುತ್ತಿದ್ದು, ಇದು ಭೂಮಿಯ ಫಲವತ್ತತೆಯನ್ನು ಹಾಳುಮಾಡುತ್ತದೆ. ಇದರಿಂದ ರೈತರು ಎಚ್ಚರಗೊಳ್ಳಬೇಕೆಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಾರುತಿ ಹೇಳಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಣ್ಣನ್ನು ಮುಂದಿನ ಪೀಳಿಗೆಗೆ ಉಳಿಸುವುದು ಎಲ್ಲರ ಆದ್ಯ ಕರ್ತವ್ಯ. ಹೀಗಾಗಿ, ಭತ್ತದ ಹುಲ್ಲನ್ನು ಸುಡಬೇಡಿ ಎಂದು ರೈತರಿಗೆ ತಿಳಿ ಹೇಳಿದರು.

ಈಗ ಅಖಂಡ ಗಂಗಾವತಿ ತಾಲೂಕಿನಲ್ಲಿ ಭತ್ತ ಕಟಾವು ಹಂಗಾಮು. ಕಟಾವು-ರಾಸಿ ನಂತರ ರೈತರು ಅವೈಜ್ಞಾನಿಕವಾಗಿ ಉಳಿದ ಭತ್ತದ ಹುಲ್ಲಿಗೆ ಬೆಂಕಿ ಹಚ್ಚುತಿರುವುದರಿಂದ ಹುಲ್ಲಿನ ಬದಲಾಗಿ ಮಣ್ಣಿನಲ್ಲಿನ ಫಲವತ್ತತೆ ಸುಟ್ಟು ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಬಾಂಧವರು ಯಾವುದೇ ಪರಿಸ್ಥಿತಿಯಲ್ಲಿಯೂ ಒಣ ಹುಲ್ಲನ್ನು ಹೊಲದಲ್ಲಿ ಸುಡಬಾರದು. ಬದಲಾಗಿ ಭತ್ತದ ಕಟಾವು ಬಳಿಕ ಹುಲ್ಲನ್ನು ಜಮೀನಿನಲ್ಲಿಯೇ ಬಿಟ್ಟು ನೀರು ಹರಿಸುವುದರಿಂದ ಸಾವಯವ ಪ್ರಮಾಣ ಹೆಚ್ಚಾಗುತ್ತದೆ. ಎರೆಹುಳುವಿನ ಸಂತಾನೋತ್ಪತ್ತಿ ವೃದ್ಧಿಸಲು ಅನುಕೂಲವಾಗುತ್ತದೆ. ಜೊತೆಗೆ ರೈತರು ಇತರೆ ಬೆಳೆಗಳಾದ ಮೆಕ್ಕೆಜೋಳ, ಜೋಳ, ಸಜ್ಜೆ, ಶೇಂಗಾ, ತೊಗರಿ ಹಾಗೂ ಸೂರ್ಯಕಾಂತಿ ಬೆಳೆಗಳ ತ್ಯಾಜ್ಯವನ್ನು ಸುಡಬಾರದೆಂದು ಮನವಿ ಮಾಡಿದರು.

ವರದಿಯ ಪ್ರಕಾರ ಒಂದು ಟನ್ ಬೆಳೆ ಸುಡುವುದರಿಂದ ೫.೫ ಕಿ.ಗ್ರಾಂ ಸಾರಜನಕ, ೨.೩ ಕಿ.ಗ್ರಾಂ ರಂಜಕ, ೨೫ ಕಿ.ಗ್ರಾಂ ಪೊಟ್ಯಾಷಿಯಂ ಮತ್ತು ೧ ಕಿ.ಗ್ರಾಂ ಸಲ್ಫರ್‌ನಂತಹ ಪೋಷಕಾಂಶಗಳು ನಷ್ಟವಾಗುತ್ತವೆ. ಅದರ ಜೊತೆಗೆ ಭತ್ತದ ಒಣ ಹುಲ್ಲಿನಿಂದ ಉರಿಯುವ ಶಾಖವು ೧ ಸೆಂ.ಮೀ ಮಣ್ಣಿನಲ್ಲಿ ತೂರಿಕೊಳ್ಳುತ್ತದೆ. ತಾಪಮಾನವು ೩೩.೮ಲಿ ರಿಂದ ೪೨.೨ಲಿ ಸೆ. ಗೆ ಏರುತ್ತದೆ. ಇದರಿಂದ ಫಲವತ್ತಾದ ಮಣ್ಣಿಗೆ ನಿರ್ಣಾಯಕವಾದ ಬ್ಯಾಕ್ಟಿರಿಯಾ ಮತ್ತು ಶಿಲೀಂಧ್ರಗಳ ಸಂಖ್ಯೆ ಕಡಿಮೆಯಾಗುತ್ತದೆ.

ತುಂಗಾಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಪ್ರಮುಖ ಬೆಳೆ. ಬಹುತೇಕ ರೈತರು ಬೆಳೆ ಕಟಾವಿನ ಬಳಿಕ ಹುಲ್ಲಿನ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಸುಡುತ್ತಿದ್ದಾರೆ. ಭತ್ತದ ಹುಲ್ಲು ಮೇವಾಗಿ ಬಳಕೆಯಾಗುತ್ತಿದೆ. ಹೊಸ ಬೆಳೆ ಹಾಕುವ ತವಕದಲ್ಲಿ ಬೇಗನೆ ಭೂಮಿಯನ್ನು ಹದಗೊಳಿಸುವ ಉದ್ದೇಶ ಹಾಗೂ ಕೂಲಿಕಾರ್ಮಿಕರ ಕೊರತೆ ಮತ್ತಿತ್ತರ ಕಾರಣಗಳಿಂದಾಗಿ ಭತ್ತ ಕೊಯ್ಲಿಗೆ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಭತ್ತದ ತಳಭಾಗವನ್ನು ಅರ್ಧದಿಂದ ಒಂದು ಅಡಿಯವರೆಗೂ ಬಿಟ್ಟುಕೊಯ್ಲು ಮಾಡಲಾಗುತ್ತಿದೆ. ಉಳಿದ ಭಾಗಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದಾಗಿ ಬರಗಾಲದ ಸಮಯದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಲಿದೆ. ಮಣ್ಣಿನ ಮೇಲಿನ ಪದರದಲ್ಲಿರುವ ಸೂಕ್ಷ್ಮಾಣು ಜೀವಿಗಳ ಮೇಲೆ ಪರಿಣಾಮ ಬೀರಲಿದ್ದು, ಪರಿಸರ ಮಾಲಿನ್ಯ ಉಂಟಾಗಲಿದೆ. ರೈತ ಸ್ನೇಹಿ ಕೀಟಗಳ ನಷ್ಟದಿಂದ ಶತ್ರು ಕೀಟಗಳ ಸಂಖ್ಯೆ ಹೆಚ್ಚಾಗುವುದರಿಂದ ಬೆಳೆಗಳು ರೋಗಕ್ಕೆ ತುತ್ತಾಗುತ್ತವೆ ಎಂದು ಎಚ್ಚರಿಸಿದರು.