ಕನ್ನಡ ಪುಸ್ತಕ ಕೊಂಡು ಓದಿ; ಕನ್ನಡ ಬೆಳೆಸಿ: ಎಸ್‌.ಎಲ್‌. ಭೈರಪ್ಪ

| Published : Sep 18 2024, 01:46 AM IST

ಕನ್ನಡ ಪುಸ್ತಕ ಕೊಂಡು ಓದಿ; ಕನ್ನಡ ಬೆಳೆಸಿ: ಎಸ್‌.ಎಲ್‌. ಭೈರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಬಹುತೇಕ ವಲಯಗಳ ಮಾರುಕಟ್ಟೆ ಮೇಲೆ ಹಿಡಿತ ಹೊಂದಿರುವ ಕೆಲವರು ಮುದ್ರಣ ಕಾಗದ ಮೇಲೆಯೂ ಪ್ರಭುತ್ವ ಸಾಧಿಸಿದ್ದಾರೆ. ಇವರು ಕೃತಕ ಅಭಾವ ಸೃಷ್ಟಿಸಿ ಮೂರು ತಿಂಗಳ ಬಳಿಕ ಉತ್ಪನ್ನದ ದುಬಾರಿ ಬೆಲೆಗೆ ಮಾರಾಟ ಮಾಡುವ ಪ್ರವೃತ್ತಿ ಹೊಂದಿದ್ದಾರೆ ಎಂದು ಎಸ್‌.ಎಲ್‌. ಭೈರಪ್ಪ ಹೇಳಿದರು.

ಹುಬ್ಬಳ್ಳಿ:

ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳವಣಿಗೆಗೆ ಕನ್ನಡಿಗರೂ ಮುಂದಾಗಬೇಕೆಂದು ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಸಲಹೆ ಮಾಡಿದರು.ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಭವನದಲ್ಲಿ ಸಾಹಿತ್ಯ ಪ್ರಕಾಶನ, ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಅವರ 26ನೇ ಪುಣ್ಯ ತಿಥಿ ಸಮಾರಂಭ‘, ಪುಸ್ತಕಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾವು ಓದದಿದ್ದರೆ ಕನ್ನಡ ಬೆಳೆಯುವುದಿಲ್ಲ. ಓದುಗರು ಸಂಖ್ಯೆ ಹೆಚ್ಚಿದಂತೆ ಪುಸ್ತಕ ಪ್ರೀತಿ, ಭಾಷೆ, ಸಂಸ್ಕೃತಿ ಪ್ರಗತಿ ಹೊಂದುತ್ತದೆ. ಇದರ ಜತೆಗೆ ಪ್ರಕಾಶಕರು ಬೆಳೆಯುತ್ತಾರೆ ಎಂದರು.ದೇಶದ ಬಹುತೇಕ ವಲಯಗಳ ಮಾರುಕಟ್ಟೆ ಮೇಲೆ ಹಿಡಿತ ಹೊಂದಿರುವ ಕೆಲವರು ಮುದ್ರಣ ಕಾಗದ ಮೇಲೆಯೂ ಪ್ರಭುತ್ವ ಸಾಧಿಸಿದ್ದಾರೆ. ಇವರು ಕೃತಕ ಅಭಾವ ಸೃಷ್ಟಿಸಿ ಮೂರು ತಿಂಗಳ ಬಳಿಕ ಉತ್ಪನ್ನದ ದುಬಾರಿ ಬೆಲೆಗೆ ಮಾರಾಟ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ಇದರ ಪರಿಣಾಮ ಪುಸ್ತಕಗಳ ಬೆಲೆಯೂ ಹೆಚ್ಚುತ್ತಿದೆ ಎಂದು ಇದೇ ವೇಳೆ ಕಳವಳ ವ್ಯಕ್ತಪಡಿಸಿದರು.ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಸಾಕಷ್ಟು ಕನ್ನಡ ಲೇಖಕರಿದ್ದರು. ಕನ್ನಡ ಸಾಹಿತ್ಯವೂ ಬೆಳೆಯುತ್ತಿತ್ತು. ಆದರೆ, ಅವರು ಬರೆದ ಪುಸ್ತಕಗಳನ್ನು ಪ್ರಕಾಶಕರ ಕೊರತೆ ವ್ಯಾಪಕವಾಗಿತ್ತು. ಕೆಲವರು ಕೇವಲ ಪಂಚಾಂಗಗಳನ್ನು ಮಾತ್ರ ಪ್ರಕಟಿಸುತ್ತಿದ್ದರು. ಇವರನ್ನು ಮನವೊಲಿಸಿದರೂ ಒಂದೆರಡು ಕನ್ನಡ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತಿದ್ದರು. ಅವು ಮಾರಾಟವಾದ ಮೇಲೆ ಮತ್ತೆ ಮುದ್ರಿಸುತ್ತಿರಲಿಲ್ಲ. ಹೀಗಾಗಿ ಲೇಖಕರು ಬರೆಯುವುದನ್ನೇ ನಿಲ್ಲಿಸಿದರು. ಈ ಹಂತದಲ್ಲಿ ಸಾಹಿತ್ಯ ಭಂಡಾರ ಹಾಗೂ ಇತರ ಪ್ರಕಾಶಕರು ಕಷ್ಟಪಟ್ಟು ಮುದ್ರಣ ಆರಂಭಿಸಿದರು. ಹಂತ ಹಂತವಾಗಿ ಸಾಹಿತ್ಯದ ಓದು ಹೆಚ್ಚುತ್ತ ಮುಂದುವರಿಯಿತು ಎಂದು ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಮಲ್ಲೇಶ್ವರಂ ಜಿ. ವೆಂಕಟೇಶ ಮಾತನಾಡಿ, ಸಾಹಿತ್ಯ ಪ್ರಕಾಶನವು ರಾಷ್ಟ್ರದ ವೈಚಾರಿಕ ಚಿಂತನೆಗಳು ಹಾಗೂ ಮರೆಮಾಚಿದ್ದ ಸತ್ಯವನ್ನು ನಿರ್ಭಿಡೆಯಾಗಿ ಪ್ರಕಟಿಸುವ ಮೂಲಕ ಪಿತೃ ಋಣದ ಜತೆ ರಾಷ್ಟ್ರದ ಋಣವನ್ನು ತೀರಿಸುತ್ತಾರೆ. ಇದುವರೆಗೆ ವಿಜೃಂಭಿಸ್ತುತ್ತಿದ್ದ ಅಸತ್ಯವನ್ನು ಹೊರಗೆಡವಿ ಮರೆಯಾಗಿದ್ದ ಸತ್ಯವನ್ನು ಹೇಳಲು ಎದೆಗಾರಿಕೆ ಬೇಕು. ಅದನ್ನು ಸಾಹಿತ್ಯ ಪ್ರಕಾಶನ ಮಾಡಿದೆ ಎಂದರು. ಲೇಖಕರ ಹಾಗೂ ಪ್ರಕಾಶರ ಬದುಕಿಸುವುದು ಓದುಗರು. ಪುಸ್ತಕ ಓದುವುದು ಜ್ಞಾನ ಸಂಪಾದನೆ ಆಗಿದೆ. ಪುಸ್ತಕ ಓದು ಮಾರ್ಗ ವಿಶೇಷವಾಗಿದೆ ಎಂದು ಹೇಳಿದರು. ಪರಿಸರ ಲೇಖಕ ಶಿವಾನಂದ ಕಳವೆ, ಶಾಲಾ ಶಿಕ್ಷಕರು ಪುಸ್ತಕಗಳು ಓದುವ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನ ಹಂಚಬೇಕು. ಮುಂದಿನ ತಲೆಮಾರಿಗೆ ಓದುವ ಹವ್ಯಾಸ ರೂಢಿಸಬೇಕು. ಶಿಕ್ಷಕರು ರಾಮಾಯಣ, ಮಹಾಭಾರತದ ಬಗ್ಗೆ ತಿಳಿವಳಿಕೆ ಹೊಂದಬೇಕಾದ ಅನಿವಾರ್ಯತೆ ಇದೆ. ಪ್ರತಿ ಸಸ್ಯ, ಗಿಡ, ಮರಗಳಲ್ಲೂ ರಾಮಾಯಣ, ಮಹಾಭಾರತ ಇದೆ ಎಂಬುದನ್ನು ಅಮೃತ ಬಳ್ಳಿ ಉದಾಹರಣೆಯೊಂದಿಗೆ ತಿಳಿಸಿದರು. ಸನ್ಮಾನ ಸ್ವೀಕರಿಸಿದ ಭಾರತ ದರ್ಶನ ಪ್ರಕಾಶನ ಸಂಸ್ಥೆ ಪ್ರಧಾನ ಸಂಪಾದಕ ಯೋಗನರಸಿಂಹ, ಲೇಖಕರ ಪರವಾಗಿ ಮಧುಕರ ಯಕ್ಕುಂಡಿ, ಎಸ್‌ಎಲ್‌ಎಂ ಪಾಟೀಲ ಮಾತನಾಡಿದರು. ಇದೇ ವೇಳೆ ಕುಮಾರವ್ಯಾಸನ ನುಡಿಮುತ್ತುಗಳು ಭಾಗ-2, ಕೃಷ್ಣಾರ್ಜುನರ ಸ್ನೇಹ ಕಲಹ ಹಾಗೂ ಇತರ ಲೇಖನಗಳು, ನಾನು ಭೀಷ್ಮ, ಮಹಾತ್ಮ ವಿದುರ, ಅಶ್ವತ್ಥಾಮ, ಶಿವಮಾರ ಸೈಗೊಟ್ಟ, ಹೊಯ್ಸಳ ವಿಷ್ಣುವರ್ಧನ, ಒಂದಿಷ್ಟು ಸ್ವಗತಗಳು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಕನ್ನಡ ಪ್ರಕಾಶಕರು ಪ್ರಾಮಾಣಿಕರು: ಭೈರಪ್ಪ

ಪರ್ವ ಕಾದಂಬರಿ ಬರೆಯುವ ದಿನಗಳನ್ನು ನೆನಪಿಸಿದ ಡಾ.ಭೈರಪ್ಪ, ಕಾದಂಬರಿ ಬರೆಯುವ ವೇಳೆ ನಿದ್ದೆಯೇ ಬರುತ್ತಿರಲಿಲ್ಲ. ಅನಾರೋಗ್ಯಕ್ಕೀಡಾಗಬೇಕಾಯಿತು. ಒಂದು ಚಾಪ್ಟರ್ ಬರೆದರೆ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಾಹಿತ್ಯ ಭಂಡಾರದ ಗೋವಿಂದರಾಯರು ಸೇರಿ ಹಲವರು ಸಲಹೆ ನೀಡಿದ್ದರು. ಇನ್ನು ಕೆಲವರು ಮನೋವೈದ್ಯರಿಂದ ಕೌನ್ಸೆಲಿಂಗ್‌ಗೆ ಒಳಗಾಗುವಂತೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಮನೋವೈದ್ಯರ ಬಳಿ ಹೋದಾಗ ಜನರು ಭೈರಪ್ಪ ಬಂದರೆಂದುಕೊಂಡು ಹೂ ಹಾರ ಹಾಕಿ ಸ್ವಾಗತಿಸಿದ್ದರು. ನಾನು ಡಾಕ್ಟರ್ ಬಳಿ ಬಂದಿರುವೆ, ಕಾರ್ಯಕ್ರಮಕ್ಕಲ್ಲ ಎಂದು ಜನರಿಗೆ ಮನವರಿಕೆ ಮಾಡಬೇಕಾಯಿತು ಎಂದು ಹಾಸ್ಯಚಟಾಕಿ ಹಾರಿಸಿದರು.

ಗೋವಿಂದರಾಯರು ನನ್ನ ಕುಟುಂಬಕ್ಕೆ ಒಂದು ವರ್ಷ ಆರ್ಥಿಕ ಸಹಾಯ ಮಾಡಿದ್ದರಿಂದ ಪರ್ವ ಕಾದಂಬರಿ ಸಂಪೂರ್ಣವಾಗಿ ಹೊರಬರುವಂತಾಯಿತು ಎಂದು ಸ್ಮರಿಸಿದರು.

ಭಾರತದಲ್ಲೇ ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಕಾಶಕರು ಅತ್ಯಂತ ಪ್ರಾಮಾಣಿಕರಾಗಿದ್ದಾರೆ. ಪರ್ವ ಕಾದಂಬರಿ ಕನ್ನಡ, ಮರಾಠಿ, ಗುಜರಾತಿ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ತುರ್ಜುಮೆ ಆಗಿವೆ. ಎಲ್ಲ ಭಾಷೆಯ ಪ್ರಕಾಶಕರು ಗೌರವಧನ ನೀಡುತ್ತಿದ್ದಾರೆ. ಹಿಂದಿ ಅನುವಾದಿತ ಪರ್ವ ಕಾದಂಬರಿ ಅತಿ ಹೆಚ್ಚು ಮಾರಾಟವಾಗುತ್ತಿದೆ. ನೇಪಾಳದಲ್ಲಿಯೂ ಬೇಡಿಕೆ ಇದೆ. ಆದರೆ, ಹಿಂದಿ ಪ್ರಕಾಶಕರು ಈವರೆಗೆ ಒಂದು ಕಾಸು ಕೂಡ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.