ಸಾರಾಂಶ
- ಎಐಕೆಕೆಎಂಎಸ್ ನೇತೃತ್ವದಲ್ಲಿ ರೈತರು, ಕೃಷಿ ಕಾರ್ಮಿಕರ ಪ್ರತಿಭಟನೆಯಲ್ಲಿ ಸರ್ಕಾರಗಳಿಗೆ ಆಗ್ರಹ । ಮನವಿ ಅರ್ಪಣೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜ್ಯದ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು, ರೈತರ ಮೇಲೆ ಅನವಶ್ಯಕವಾಗಿ ದಾಖಲಿಸಿದ ಕೇಸ್‌ಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನಗರದಲ್ಲಿ ಮಂಗಳವಾರ ಎಐಕೆಕೆಎಂಎಸ್ ನೇತೃತ್ವದಲ್ಲಿ ರೈತರು, ಕೃಷಿ ಕಾರ್ಮಿಕರು ಪ್ರತಿಭಟಿಸಿದರು.
ನಗರದ ಶ್ರೀ ಜಯದೇವ ವೃತ್ತದಿಂದ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು ಕೇಂದ್ರ, ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿದರು. ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.ಸಂಘಟನೆ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಮಾತನಾಡಿ, ರಾಜ್ಯಾದ್ಯಂತ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ರೈತರ ಮೇಲೆ ಅನವಶ್ಯಕವಾಗಿ ದಾಖಲಿಸಿರುವ ಎಲ್ಲ ಕೇಸ್‌ಗಳನ್ನು ಹಿಂಪಡೆಯಬೇಕು. ಅರಣ್ಯ ಇಲಾಖೆಯಿಂದ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ರಾಜ್ಯದಲ್ಲಿ ಜಾರಿಗೆ ತಂದ ಕರಾಳ ಕೃಷಿ ಕಾನೂನುಗಳಾದ ವಿದ್ಯುತ್ ಮಸೂದೆ, ಎಪಿಎಂಸಿ ಮಸೂದೆ, ಭೂ ಸುಧಾರಣೆ ಕಾಯ್ದೆಗಳನ್ನು ತಕ್ಷಣ ರದ್ದುಪಡಿಸಬೇಕು ಎಂದರು.
ಅವಶ್ಯಕ ವಸ್ತುಗಳ ಸಂಪೂರ್ಣ ಸರ್ಕಾರಿ ವ್ಯಾಪಾರವನ್ನು ಜಾರಿಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು. ಸಿ2 ಪ್ಲಸ್ 50 ಪರ್ಸೆಂಟೇಜ್ ಸೂತ್ರದಡಿ ನಿಗದಿಯಾದ ಬೆಲೆಗೆ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಖಚಿತಪಡಿಸಬೇಕು. ಕೃಷಿ ಕಾರ್ಮಿಕರಿಗೆ ವರ್ಷಪೂರ್ತಿ ಉದ್ಯೋಗ ಮತ್ತು ಸಮರ್ಪಕ ವೇತನ ನೀಡಬೇಕು. ವಿದ್ಯುತ್ ಕಾಯ್ದೆ 2023 ಅನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ರೈತರ ಪಂಪ್ ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಆಗ್ರಹಿಸಿದರು.ಮಳೆಯಿಂದ ಆಗಿರುವ ಬೆಳೆ ಹಾನಿಗೆ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು. ಬೆಳೆ ನಷ್ಟವಾದ ಬಗ್ಗೆ ಜಿಲ್ಲೆಯ ಎಲ್ಲ ರೈತರಿಗೆ ಪರಿಹಾರ ದೊರಕಿಸಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿ, ರಾಷ್ಟ್ರವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದೇವೆ ಎಂದು ಮಧು ತೊಗಲೇರಿ ತಿಳಿಸಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಪೋರೇಟ್ ಪರ ನೀತಿಗಳನ್ನು ವಿರೋಧಿಸಿ, ರೈತವಿರೋಧಿ ನೀತಿಗಳನ್ನು ಖಂಡಿಸಿ, ದೇಶವ್ಯಾಪಿ ರೈತ ಚಳವಳಿ ಬೆಳೆಸಲು ಎಐಕೆಕೆಎಂಎಸ್ ಹೋರಾಟ ನಡೆಸಿದೆ. ದೇಶಾದ್ಯಂತ ರೈತರು, ಕೃಷಿ ಕಾರ್ಮಿಕರು ಅತ್ಯಂತ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಸಾಲ ಹೊರೆಗೆ ಬೇಸತ್ತು ಸಾವಿರಾರು ರೈತರು ಸಾವಿಗೆ ಶರಣಾಗುತ್ತಿದ್ದಾರೆ. ಪ್ರತಿನಿತ್ಯ ಬೀಜ, ಗೊಬ್ಬರ, ಔಷಧಿ, ಕೀಟನಾಶಕಗಳ ಕೃಷಿ ಒಳ ಸುರಿಗಳ ಬೆಲೆ ಗಗಮನಮುಖಿ ಆಗುತ್ತಿವೆ. ಹೀಗಾದರೆ ರೈತ, ಕೃಷಿ ಕಾರ್ಮಿಕರು ಬಾಳುವುದು, ಕೃಷಿ ಕ್ಷೇತ್ರ ಉಳಿಯುವುದಾದರೂ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಎಐಕೆಕೆಎಂಎಸ್ ಜಿಲ್ಲಾ ಮುಖಂಡರಾದ ಸತೀಶ ಕೈದಾಳೆ, ಬಸವರಾಜಪ್ಪ ನೀರ್ಥಡಿ, ಭೀಮಣ್ಣ ಮಾಯಕೊಂಡ, ನಾಗರಾಜ ರಾಜಗೊಂಡನಹಳ್ಳಿ, ಲೋಕೇಶ, ಮಂಜುನಾಥ ರೆಡ್ಡಿ, ಸತೀಶ, ರಾಜು, ಬೀರಲಿಂಗಪ್ಪ ಇತರರು ಪ್ರತಿಭಟನೆಯಲ್ಲಿದ್ದರು.
- - -* ಬೇಡಿಕೆಗಳೇನೇನು? - ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು
- 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ ಕನಿಷ್ಠ ₹10 ಸಾವಿರ ಪಿಂಚಣಿ ನೀಡಬೇಕು- ಜಿಲ್ಲೆಯಲ್ಲಿ ಯೋಗ್ಯ ಬೆಂಬಲ ಬೆಲೆ ಘೋಷಿಸಿ, ಮೆಕ್ಕೆಜೋಳ, ಬತ್ತ ಖರೀದಿ ಕೇಂದ್ರಗಳ ಸ್ಥಾಪಿಸಬೇಕು
- ರೈತರಿಗೆ ದಾಸ್ತಾನು ಮಾಡಿಕೊಳ್ಳಲು ಜಿಲ್ಲೆಯಲ್ಲಿ ಪ್ರಥಮ ಆದ್ಯತೆ ಮೇರೆಗೆ ಸಂಸ್ಕರಣಾ ಘಟಕ ಸ್ಥಾಪಿಸಬೇಕು- ತೆಂಗು ಬೆಳೆಗಾರರಿಗೆ ಅನ್ಯಾಯ ಆಗದಂತೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು
- ತೆಂಗು ಸಂಸ್ಕರಣೆ ಮತ್ತು ನಿರ್ವಹಣೆಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು- - - -19ಕೆಡಿವಿಜಿ: