ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
‘ಹಣ, ಆಸ್ತಿ, ಅಂತಸ್ತುಗಳ ನಡುವೆ ಮನುಷ್ಯನಿಗೆ ಬೇಕಾದ್ದು ಮಾನವೀಯತೆ ಮಾತ್ರ. ಇದನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಎಲ್ಲೇ ಅಪಘಾತ ನಡೆಯಲಿ, ಕೂಡಲೇ ಧಾವಿಸಿ ಗಾಯಾಳುವ ಉಪಚರಿಸಿ ಜೀವ ಉಳಿಸುವ ಮಾನವ ಧರ್ಮ ಎಲ್ಲರಲ್ಲೂ ಮೂಡಿಬರಬೇಕು.’ಇದು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜಸೇವಕ, ಆಪದ್ಭಾಂಧವ ಚಾರ್ಮಾಡಿ ಹಸನಬ್ಬ ಅವರ ವಿನೀತ ಮಾತು.
ಮಂಗಳೂರು ಪ್ರೆಸ್‌ಕ್ಲಬ್ ಬುಧವಾರ ಏರ್ಪಡಿಸಿದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಹಸನಬ್ಬ ಚಾರ್ಮಾಡಿ ತನ್ನ ಸಮಾಜಸೇವೆಯ ನೋಟವನ್ನು ತೆರೆದಿಟ್ಟರು.ಅಪಘಾತ ಸಂಭವಿಸಿದಾಗ ಮೊದಲು ಗಾಯಾಳುವನ್ನು ಉಪಚರಿಸಬೇಕು, ಅದು ಬಿಟ್ಟು ಅಪಘಾತದ ಫೋಟೋ ತೆಗೆದುಕೊಳ್ಳುತ್ತಾ ಅಪಘಾತಕ್ಕೆ ಕಾರಣರಾದವರೊಂದಿಗೆ ಜಗಳ ಕಾಯ್ದುಕೊಳ್ಳುತ್ತಾ ಕೂರುವುದು ಸರಿಯಲ್ಲ. ಪ್ರಥಮವಾಗಿ ಜೀವ ಉಳಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು, ಉಳಿದೆಲ್ಲವೂ ನಂತರ. ಅಪಘಾತ ವೇಳೆ ಪೊಲೀಸ್ ಕೇಸು, ಸಾಕ್ಷ್ಯಕ್ಕೆ ಹೆದರಿ ಗಾಯಾಳುಗಳನ್ನು ಉಪಚರಿಸಲು ಹಿಂದೇಟು ಹಾಕುವುದು ಸರಿಯಲ್ಲ ಎಂದರು.
ಯಾವುದೇ ಸನ್ಮಾನಕ್ಕೂ ನಾನು ಅಭಿಮಾನ ಪಡುವುದಿಲ್ಲ, ಅಂತಹ ಜಾಯಮಾನವೂ ನನ್ನದಲ್ಲ, ವಾಹನ ಅಪಘಾತ ವೇಳೆ ಪ್ರತಿಯೊಬ್ಬ ಗಾಯಾಳುವಿನ ಜೀವ ಉಳಿಸುವುದೇ ನನ್ನ ಮೊದಲ ಆದ್ಯತೆ. ಅದುವೇ ನನ್ನ ಮನಸ್ಸಿಗೆ ಸಮಾಧಾನ ತರುವ ಸಂಗತಿ, ಎಷ್ಟು ಮಂದಿಗೆ ನೆರವಾಗಿದ್ದೇನೆ ಎಂಬುದನ್ನು ನೆನಪಿಟ್ಟುಕೊಂಡಿಲ್ಲ. ಉಪಕಾರ ಮಾಡುವುದಷ್ಟೆ ನನ್ನ ಕೆಲಸ, ಆದರೆ ನನ್ನಿಂದ ಉಪಕಾರ ಪಡೆದವರು ಬಂದು ಕೃತಜ್ಞತೆ ಹೇಳುವಾಗ ನನ್ನ ಸೇವೆ ಸಾರ್ಥಕ ಎಂದು ಕಾಣುತ್ತದೆ. ಅದುವೇ ನನಗೆ ದೊಡ್ಡ ಸನ್ಮಾನ ಎಂದು ಭಾವಿಸಿದ್ದೇನೆ ಎಂದರು.ವಿ ಫೋರ್ ನ್ಯೂಸ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಕುಂದರ್ ಗೌರವ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ, ಹಸನಬ್ಬರಂತಹ ಸಾಧಕರನ್ನು ಗುರುತಿಸಿ ಸಂವಾದ ನಡೆಸುವುದು ಶ್ಲಾಘನೀಯ. ಇದು ಹಸನಬ್ಬರಿಗೆ ಮಾತ್ರವಲ್ಲ ಪ್ರೆಸ್‌ಕ್ಲಬ್‌ಗೂ ಗೌರವ ತರುತ್ತದೆ ಎಂದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿ, ಹಸನಬ್ಬರು ಮಾನವೀಯ ಸೇವೆಯ ಬಗ್ಗೆ ಪ್ರಸ್ತಾಪಿಸಿದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಇದ್ದರು.
ಪತ್ರಕರ್ತ ಬಿ.ಎನ್.ಪುಷ್ಪರಾಜ್ ಸ್ವಾಗತಿಸಿ ನಿರೂಪಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಛಾಯಾಗ್ರಾಹಕ ಸತೀಶ್ ಇರಾ ಕಾರ್ಯಕ್ರಮ ಸಂಯೋಜಿಸಿದರು.ಚಾರ್ಮಾಡಿಯಲ್ಲಿ ಹಸನಬ್ಬರ ಆ್ಯಂಬುಲೆನ್ಸ್ ಸೇವೆ ಶೀಘ್ರ
ಚಾರ್ಮಾಡಿ ಘಾಟ್‌ನಲ್ಲಿ ಈಗ ರಸ್ತೆ ಅಗಲೀಕರಣ, ಅಭಿವೃದ್ಧಿಯಿಂದಾಗಿ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ತುರ್ತು ಸಂದರ್ಭಗಳಲ್ಲಿ ಮುಂಜಾಗ್ರತೆಗಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸಲು ನಿರ್ಧರಿಸಿದ್ದೇನೆ. ಇದು ಚಾರ್ಮಾಡಿಯ ಸುತ್ತಲಿನ 50 ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ಸೇವೆ ನೀಡಲಿದೆ ಎಂದು ಸಮಾಜ ಸೇವಕ ಹಸನಬ್ಬ ಹೇಳಿದರು.ಮೊನ್ನೆ ರಾಜ್ಯೋತ್ಸವ ಪುರಸ್ಕಾರದಲ್ಲಿ ಸರ್ಕಾರ 5 ಲಕ್ಷ ರು. ಗೌರವ ಮೊತ್ತ ನೀಡಿದೆ. ಈ ಮೊತ್ತವನ್ನು ಸ್ವಂತ ಆ್ಯಂಬುಲೆನ್ಸ್ ಖರೀದಿಗೆ ಉಪಯೋಗಿಸುತ್ತಿದ್ದೇನೆ. ಆ್ಯಂಬುಲೆನ್ಸ್‌ಗೆ 8 ಲಕ್ಷ ರು. ಬೇಕು. ಉಳಿದ ಮೊತ್ತವನ್ನು ನಾವೇ ಕುಟುಂಬಸ್ಥರು ಟ್ರಸ್ಟ್ ಮಾಡಿಕೊಂಡು ಸಾಲದ ಮೂಲಕ ಭರಿಸುತ್ತೇವೆ. ನನ್ನ ಮೂವರು ಪುತ್ರರು ಇದರ ಜವಾಬ್ದಾರಿ ನಿರ್ವಹಿಸುತ್ತಾರೆ. ಬಳಿಕ ಕಂತು ಪಾವತಿಸಿ ಸಾಲ ತೀರಿಸುತ್ತೇವೆ. ಆ್ಯಂಬುಲೆನ್ಸ್ ಕೆಲವೇ ದಿನಗಳಲ್ಲಿ ಬರಲಿದೆ. ಪ್ರಸ್ತುತ ಟ್ರಸ್ಟ್‌ನ್ನು ನೋಂದಣಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಯಾರು, ಯಾವುದೇ ಹೊತ್ತಿನಲ್ಲಿ ಕರೆ ಮಾಡಿದರೂ ನಮ್ಮ ಆ್ಯಂಬುಲೆನ್ಸ್ ಉಚಿತ ಸೇವೆ ನೀಡಲಿದೆ ಎಂದು ಹಸನಬ್ಬ ಹೇಳಿದರು.