33 ಪಿಎಚ್‌ಸಿಗಳ ಸ್ಥಾಪನೆಗೆ ಸಂಪುಟ ಸಮ್ಮತಿ

| Published : Mar 15 2024, 01:23 AM IST

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದಲ್ಲಿನ ಆರೋಗ್ಯ ಸೌಕರ್ಯ ಹೆಚ್ಚಿಸಲು ಪ್ರಸಕ್ತ ವರ್ಷ ಮಂಡಳಿಯು ಹಮ್ಮಿಕೊಂಡಿರುವ “ಆರೋಗ್ಯ ಆವಿಷ್ಕಾರ” ಯೋಜನೆಯಡಿಯಲ್ಲಿ ಕಲ್ಯಾಣದ ಜಿಲ್ಲೆಗಳಲ್ಲಿ 33 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಕಾರ್ಯಕ್ರಮಕ್ಕೆ ರಾಜ್ಯ ಸಚಿವ ಸಂಪುಟದ ಅನುಮೋದನೆ ದೊರಕಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಭಾಗದಲ್ಲಿನ ಆರೋಗ್ಯ ಸೌಕರ್ಯ ಹೆಚ್ಚಿಸಲು ಪ್ರಸಕ್ತ ವರ್ಷ ಮಂಡಳಿಯು ಹಮ್ಮಿಕೊಂಡಿರುವ “ಆರೋಗ್ಯ ಆವಿಷ್ಕಾರ” ಯೋಜನೆಯಡಿಯಲ್ಲಿ ಕಲ್ಯಾಣದ ಜಿಲ್ಲೆಗಳಲ್ಲಿ 33 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಕಾರ್ಯಕ್ರಮಕ್ಕೆ ರಾಜ್ಯ ಸಚಿವ ಸಂಪುಟದ ಅನುಮೋದನೆ ದೊರಕಿದೆ.

ಕೆಕೆಆರ್‌ಡಿಬಿ ಸಲ್ಲಿಸಿದ್ದ ಕಲ್ಯಾಣದ 7 ಜಿಲ್ಲೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ 65 ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದಾಗಿ ನೀಡಿದ್ದ ಪ್ರಸ್ತಾವನೆಯನ್ವಯ ಈ ಯೋಜನೆ ರಾಜ್ಯ ಬಜೆಟ್‌ನಲ್ಲಿಯೂ ಘೋಷಣೆಯಾಗಿತ್ತು.

ಅದರಂತೆಯೇ ಇಂದು ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಕೆಕೆಆರ್‌ಡಿಬಿಯ ಹೊಸ ಪಿಎಚ್‌ಸಿಗಳ ಸ್ಥಾಪನೆ ಯೋಜನೆಗೆ ಹಸಿರು ನಿಶಾನೆ ದೊರಕಿದೆ, ಇದರಿಂದಾಗಿ ಕಲ್ಯಾಣ ನಾಡಲ್ಲಿ ಆರೋಗ್ಯ ಸೇವೆ ಬಡವರು, ಮಧ್ಯಮ ವರ್ಗದವರು, ಗ್ರಾಮೀಣ ಜನರಿಗೆ ಇನ್ನೂ ಹತ್ತಿರವಾದಂತಾಗಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್‌ ಧರ್ಮಸಿಂಗ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲ ಹಂತದಲ್ಲಿ ಮಂಡಳಿಯ ಪ್ರಸ್ತಾವನೆ ಪೈಕಿ 33 ಪಿಎಚ್‌ಸಿಗಳ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ಇದಕ್ಕಾಗಿ 653 ಕೋಟಿ ರು ಹಣ ವೆಚ್ಚವಾಗಲಿದೆ. ಬರುವ ದಿನಗಳಲ್ಲಿ 2ನೇ ಹಂತದಲ್ಲಿ ಇನ್ನೂ 32 ಪಿಎಚ್‌ಸಿಗಳ ಸ್ಥಾಪನೆಗೆ ಮಂಡಳಿ ಮುಂದಾಗಲಿದೆ. ಈ ಹೊಸ ಪಿಎಚ್‌ಸಿಗಳ ಸ್ಥಾಪನೆಯಾದಲ್ಲಿ ಕಲ್ಯಾಣದ ಜಿಲ್ಲೆಗಳಲ್ಲಿನ ಪಿಎಚ್‌ಸಿಗಳ ಕೊರತೆ ಒಂದು ಹಂತಕ್ಕೆ ನೀಗಲಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ರಾಜ್ಯದ ಗಾಮೀಣ ಪ್ರದೇಶದ ಜನಸಂಖ್ಯೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ವಿಭಾಗವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಗಮನಿಸಿದಾಗ ಬೆಂಗಳೂರು ವಿಭಾಗದಲ್ಲಿ 1.13 ಕೋಟಿ ಜನಸಂಖ್ಯೆಗೆ 646, ಬೆಳಗಾವಿ ವಿಭಾಗದಲ್ಲಿ 1.18 ಕೋಟಿ ಜನಸಂಖ್ಯೆಗೆ 455, ಮೈಸೂರು ವಿಭಾಗದಲ್ಲಿ 94.95 ಲಕ್ಷ ಜನಸಂಖ್ಯೆಗೆ 659 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೆ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 1.08 ಕೋಟಿ ಜನಸಂಖ್ಯೆಗೆ ಕೇವಲ 333 ಪಿ.ಎಚ್.ಸಿ. ಇವೆ.

ಇದನ್ನು ವಿಶ್ಲೇಷಣೆ ಮಾಡಿ ನೋಡಿದಾಗ ಕಲ್ಯಾಣ ನಾಡಿನ 7 ಜಿಲ್ಲೆಗಳ ಪಿಎಚ್‌ಸಿಗಳ ಸಂಖ್ಯಾಬಲ ಜನಸಂಖ್ಯೆಗೆ ಆದಾರದಲ್ಲಿ ನೋಡಿದಾಗ ತುಂಬಾನೆ ಕಮ್ಮಿ ಇಗದೆ. ಇದು ಸಹ ಆರೋಗ್ಯ ಕ್ಷೇತ್ರದಲ್ಲಿ ಪ್ರದೇಶ ಹಿಂದುಳಿಯಲು ಕಾರಣವಾಗಿದೆ. ಕೆಕೆಆರ್‌ಡಿಬಿ ಅಧ್ಯಕ್ಷನಾದ ನಂತರ ನಾನು ಈ ಕೊರತೆಯನ್ನು ಅಧ್ಯಯನ ಮಾಡಿ ಹೊಸ ಪಿಎಚ್‌ಸಿಗಳನ್ನು ಮಂಡಳಿಯಿಂದಲೇ ಸ್ಥಾಪಿಸುವ ಯೋಜನೆ ಕೈಗೆತ್ತಿಕೊಂಡೆ. ಈ ಪ್ರತ್ನದಿಂದಾಗಿ ಪಿಎಚ್‌ಸಿಗಳ ಕೊರತೆ ಕಲ್ಯಾಣ ನಾಡಲ್ಲಿ ಒಂದು ಹಂತಕ್ಕೆ ನೀಗಲಿದೆಯಲ್ಲದೆ, ಈ ಅಂತರವನ್ನು ಕಡಿಮೆ ಮಾಡಲು ಪಿ.ಎಚ್.ಸಿ. ಸ್ಥಾಪಿಸಲಾಗುತ್ತಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲಿ ಪ್ರದೇಶದಲ್ಲಿ ಅಪೌಷ್ಠಿಕತೆ ನಿವಾರಣೆ, ತಾಯಿ-ಶಿಶು ಮರಣ ತಗ್ಗಿಸುವುದು ಸೇರಿದಂತೆ ಆರೋಗ್ಯ ಸಮಸ್ಯೆ ಸುಧಾರಣೆಗಳ ಅಧ್ಯಯನಕ್ಕೆ ರಾಯಚೂರಿನಲ್ಲಿ 48 ಕೊಟಿ ರು. ವೆಚ್ಚದಲ್ಲಿ ಹ್ಯೂಮನ್ ಜಿನೋಮ್ ಸೆಂಟರ್ ಸ್ಥಾಪಿಸೋದಲ್ಲದೆ, ತಲಾ 14 ಕೋಟಿ ರೂ. ವೆಚ್ಚದಲ್ಲಿ 17 ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸುವ ಯೋಜನೆಯೂ ಹಾಕಿಕೊಳ್ಳಲಾಗಿದೆ ಎಂದು ಡಾ. ಅಜಯ್‌ ಸಿಂಗ್‌ ತಿಳಿಸಿದ್ದಾರೆ.