ಆ.14 ರವರೆಗೆ ಪ್ರಚಾರಾಂದೋಲನಕ್ಕೆ ಕರೆ

| Published : Aug 11 2024, 01:35 AM IST

ಸಾರಾಂಶ

ದುಡಿಯುವ ಜನರ ಹಕ್ಕೊತ್ತಾಯಗಳಿಗೆ ನೀಡಿರುವ ಪ್ರಚಾರಾಂದೋಲನಕ್ಕೆ ಕರೆ ಹಿನ್ನೆಲೆಯಲ್ಲಿ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಂಯುಕ್ತ ಕಿಸಾನ್ ಮೋರ್ಚ್ (ಎಸ್‌ಕೆಎಂ) ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ದೇಶವ್ಯಾಪಿ ಆ.14 ರವರೆಗೆ ದುಡಿಯುವ ಜನರ ಹಕ್ಕೊತ್ತಾಯಗಳಿಗೆ ಪ್ರಚಾರಾಂದೋಲನಕ್ಕೆ ಕರೆ ನೀಡಿರುವ ಹಿನ್ನೆಲೆ ಶುಕ್ರವಾರ (ಆ.9) ರಂದು ಕ್ವಿಟ್ ಇಂಡಿಯಾ ಚಳುವಳಿಯ ದಿನ ಅಂಗವಾಗಿ ನಗರದ ನೇತಾಜಿ ಸುಭಾಷ್‌ ಚಂದ್ರ ಬೋಸ್ ವೃತ್ತದಲ್ಲಿ ಕೇಂದ್ರ ಮತ್ತ ರಾಜ್ಯ ಸರ್ಕಾರಗಳ ರೈತ-ಕಾರ್ಮಿಕ ವಿರೊಧಿ ನೀತಿಗಳ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ಆರಂಭಿಸಲಾಯಿತು.

ಭಾರತದ ವಿಶಾಲ ಜನ ಸಮುದಾಯಗಳ ಅಪಾರ ತ್ಯಾಗ-ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯಕ್ಕೆ ಈ ಆ.15 ರಂದು 77 ವರ್ಷ ತುಂಬಲಿದೆ. ಆದರೆ ಸ್ವಾತಂತ್ರ್ಯ ಚಳುವಳಿಯ ಆಶೋತ್ತರಗಳಾದ ಎಲ್ಲರಿಗೂ ವಸತಿ-ಭೂಮಿ, ಆಹಾರ, ಶಿಕ್ಷಣ, ಉದ್ಯೋಗ, ನ್ಯಾಯಯುತ ಕೂಲಿ, ಸಮಾನತೆ, ಆರ್ಥಿಕ ಸ್ವಾವಲಂಬನೆ ಮುಂತಾದವು ಆಳುವ ವರ್ಗಗಳ ನೀತಿಗಳಿಂದಾಗಿ ಮರೀಚಿಕೆಯಾಗಿಯೇ ಉಳಿದಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ನವ ಉದಾರವಾದಿ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಗೆ ತಂದ ಹಿನ್ನೆಲೆ ಬಡವರ-ಶ್ರೀಮಂತರ ನಡುವಿನ ಅಸಮಾನತೆ ಹೆಚ್ಚಾಗಿದೆ. ಭಾರತದ ಮೇಲ್‌ಸ್ತರದ ಶೇ.10ರಷ್ಟು ಜನರ ಸಂಪತ್ತು ಶೇ.77ರಷ್ಟಿದ್ದರೆ, ಶೇ.50 ರಷ್ಟು ಸಾಮಾನ್ಯ ಜನರ ಸಂಪತ್ತು ಶೇ.3ರಷ್ಟು ಮಾತ್ರ ಇದೆ. ಬಡತನ, ಹಸಿವು, ನಿರುದ್ಯೋಗ ಪ್ರಮಾಣ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರ ಏರಿಕೆಯಾಗುತ್ತಲೇ ಇದೆ. ದೇಶಕ್ಕೆ ಸಂಪತ್ತನ್ನು ಸೃಷ್ಟಿಸುವ ರೈತ-ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದರು.

ಈ ವೇಳೆ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷರಾದ ಚನ್ನಪ್ಪ ಆನೆಗುಂದಿ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ, ಸಿಐಟಿಯು ಮುಖಂಡರಾದ ಬಸವರಾಜ ದೊರೆ, ಜಮಾಲ್ ಸಾಬ್, ಎಸ್.ಎಂ. ಸಾಗರ, ಸುಭಾಶ್ಚಂದ್ರ, ಗಂಗಮ್ಮ ಸೇರಿದಂತೆ ಇತರರಿದ್ದರು.