ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ

| Published : Oct 07 2024, 01:41 AM IST

ಸಾರಾಂಶ

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ಹಾಗೂ ಕ್ರಿಯಾಯೋಜನೆ ತಯಾರಿಸಲು ಅ. 2ರಿಂದ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಆರಂಭಿಸಲಾಗಿದೆ.

ಅಧಿಕಾರಿಗಳು ಮನೆ ಮನೆಗೆ ಭೇಟಿ, ಕಾಮಗಾರಿಗಳ ಪಟ್ಟಿ ಸ್ವೀಕಾರ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ಹಾಗೂ ಕ್ರಿಯಾಯೋಜನೆ ತಯಾರಿಸಲು ಅ. 2ರಿಂದ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಆರಂಭಿಸಲಾಗಿದೆ.

ಈ ಅಭಿಯಾನವು ಕೊಪ್ಪಳ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ತಾಲೂಕಿನ 36 ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು ಎಲ್ಲ ಗ್ರಾಮಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ, ನರೇಗಾ ಯೋಜನೆ ಕುರಿತು ಜಾಗೃತಿ ಮೂಡಿಸಿ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆ ಸ್ವೀಕರಿಸಲಿದ್ದಾರೆ.ಏನೇನು ಮಾಹಿತಿ?:

ಗ್ರಾಪಂ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದ ವೇಳೆ ನರೇಗಾ ಯೋಜನೆಯ ಕೆಲಸದ ಅಳತೆ, ಕೆಲಸದ ದಿನಗಳು, ವೇತನದ ಮಾಹಿತಿ, ಕಾಮಗಾರಿಗಳ ಬಗ್ಗೆ ಮಾಹಿತಿ, ವಿಶೇಷ ಸೌಲಭ್ಯಗಳು ಸೇರಿದಂತೆ ಅನೇಕ ಮಾಹಿತಿಗಳನ್ನು ತಿಳಿಸಬೇಕಾಗಿದೆ.

ತಾಲೂಕಿನ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಪಂಚಾಯಿತಿ ಸಿಬ್ಬಂದಿ ಹಾಗೂ ನರೇಗಾ ಸಿಬ್ಬಂದಿ, ತಾಂತ್ರಿಕ ಸಹಾಯಕರು, ಬಿಎಫ್‌ಟಿ, ಕಾಯಕ ಮಿತ್ರ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸುವ ಮೂಲಕ ವಾರ್ಡಿನ ಪ್ರತಿ ಮನೆ ಮನೆಗೆ ಭೇಟಿ ನೀಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಬೇಡಿಕೆ ಪೆಟ್ಟಿಗೆಯಲ್ಲಿ ಸ್ವೀಕರಿಸಬೇಕಿದೆ.ಬೇಡಿಕೆ ಪೆಟ್ಟಿಗೆ:

ಮನೆಗಳಿಗೆ ಭೇಟಿ ನೀಡುವ ಅಧಿಕಾರಿಗಳು ಅರ್ಜಿಯನ್ನು ಸ್ವೀಕರಿಸಲು ಸಿದ್ಧಪಡಿಸಲಾದ ಪೆಟ್ಟಿಗೆಯಾಗಿದ್ದು, ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ಈ ಪೆಟ್ಟಿಗೆಯಲ್ಲಿ ಹಾಕಬೇಕು ಹಾಗೂ ಈ ಬೇಡಿಕೆಯ ಪೆಟ್ಟಿಗೆಯನ್ನು ಅಂಗನವಾಡಿ ಕೇಂದ್ರ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ ಹಾಗೂ ಹಾಲಿನ ಕೇಂದ್ರಗಳಲ್ಲಿ ಸ್ಥಾಪಿಸುವ ಮೂಲಕ ಅದರಲ್ಲಿ ಹಾಕಲಾದ ಅರ್ಜಿಗಳನ್ನು ಸಂಗ್ರಹಿಸಿ ವಾರ್ಡ್ ಸಭೆ ಹಾಗೂ ಗ್ರಾಮ ಸಭೆ ಮಾಡುವ ಮೂಲಕ ಕೃಷಿ ಚಟುವಟಿಕೆ ಕಾಮಗಾರಿಗಳಿಗೂ ಸಹಿತ ಅನುಮೋದನೆ ಪಡೆಯಬೇಕು.ಆದ್ಯತೆ:

ದುರ್ಬಲ ವರ್ಗದ ಕುಟುಂಬಗಳನ್ನು ಗಮನದಲ್ಲಿರಿಸಿಕೊಂಡು ಬೇಡಿಕೆಯ ಅಂದಾಜು ತಯಾರಿಸುವುದು, ವೈಯಕ್ತಿಕ ಭೂ ಅಭಿವೃದ್ಧಿ, ವೈಯಕ್ತಿಕ ಅನುಕೂಲ ಮಾಡಿಕೊಡುವ ಕಾಮಗಾರಿಗಳ ಪಟ್ಟಿಯನ್ನು ತಯಾರಿಸುವುದು, ಶೋಷಿತ ಮಹಿಳೆಯರು, ಅಬಲೆಯರ ಬೇಡಿಕೆ ಸ್ವೀಕರಿಸಬೇಕು. ಸಮಸ್ಯೆಗಳು ಇದ್ದಲ್ಲಿ ಚರ್ಚಿಸಿ ಪರಿಹರಿಸಲು ನೆರವಾಗುವುದು. ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಬೇಡಿಕೆ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದು ಆದ್ಯತೆಯಾಗಿದೆ.

ಗ್ರಾಪಂ ಅಧಿಕಾರಿಗಳು ತಯಾರಿಸಿಕೊಂಡ ಕ್ರಿಯಾ ಯೋಜನೆಯನ್ನು ವಾರ್ಡ್‌ ಹಾಗೂ ಗ್ರಾಮಸಭೆಯಲ್ಲಿ ಅನುಮೋದಿಸಿ ಡಿ. 5ರ ಒಳಗಾಗಿ ತಾಪಂಗೆ ಸಲ್ಲಿಸಬೇಕು. ಆನಂತರ ತಾಪಂನಿಂದ ಎಲ್ಲ ಗ್ರಾಪಂಗಳ ಕ್ರೋಡೀಕೃತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಅನುಮೋದಿಸಿ, ಡಿ. 20ರ ಒಳಗಾಗಿ ಜಿಪಂ ಸಿಇಒ ಅವರ ಗಮನಕ್ಕೆ ತಂದು, ಅನುಮೋದನೆ ಪಡೆದು, ಅಭಿವೃದ್ಧಿ ಕೆಲಸ ಮಾಡುವುದೆ ಈ ಅಭಿಯಾನದ ಉದ್ದೇಶವಾಗಿದೆ.