ಅರಣ್ಯ ಪ್ರದೇಶಕ್ಕೆ ರಾತ್ರಿ ಹೊತ್ತು ಅಕ್ರಮವಾಗಿ ಹೋಗಿದ್ದಲ್ಲದೇ ಫೈರ್ ಕ್ಯಾಂಪ್ ಮಾಡಿ, ರೀಲ್ಸ್ ಮಾಡಿ ಇಬ್ಬರು ಹುಚ್ಚಾಟ ಮೆರೆದ ಘಟನೆ ಚಾಮರಾಜನಗರ ತಾಲೂಕಿನ‌ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ರಾಗಿಕಲ್ಲಮಡುವಿನಲ್ಲಿ ನಡೆದಿದೆ.

 ಚಾಮರಾಜನಗರ : ಅರಣ್ಯ ಪ್ರದೇಶಕ್ಕೆ ರಾತ್ರಿ ಹೊತ್ತು ಅಕ್ರಮವಾಗಿ ಹೋಗಿದ್ದಲ್ಲದೇ ಫೈರ್ ಕ್ಯಾಂಪ್ ಮಾಡಿ, ರೀಲ್ಸ್ ಮಾಡಿ ಇಬ್ಬರು ಹುಚ್ಚಾಟ ಮೆರೆದ ಘಟನೆ ಚಾಮರಾಜನಗರ ತಾಲೂಕಿನ‌ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ರಾಗಿಕಲ್ಲಮಡುವಿನಲ್ಲಿ ನಡೆದಿದೆ.

ಯುವಕರು ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಫೈರ್ ಕ್ಯಾಂಪ್

ಬೆಂಗಳೂರಿನ ಹನುಮಂತನಗರದ ಜಿ.ಹರ್ಷರಾಜ್ ಹಾಗೂ ಬ್ಯಾಟರಾಯನಪುರದ ಸತೀಶ್ ಕುಮಾರ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಕಳೆದ ನವೆಂಬರ್ 30 ರಂದು ಕೆಂಪು ಬಣ್ಣದ ಮಹೀಂದ್ರ ಥಾರ್‌ನಲ್ಲಿ ಈ ಇಬ್ಬರು ಯುವಕರು ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಫೈರ್ ಕ್ಯಾಂಪ್ ಹಾಕಿ ರಾತ್ರಿ ವಾಸ್ತವ್ಯ ಕೂಡ ಕಾಡಿನಲ್ಲೇ ಮಾಡಿದ್ದು ಇದನ್ನು ರೀಲ್ಸ್ ‌ಕೂಡ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದರು.

ಕ್ರಮ ಕೈಗೊಳ್ಳಲು ಸಚಿವರಿಂದ ಸೂಚನೆ:

ಕಾಡಿಗೆ ಅಕ್ರಮವಾಗಿ ಪ್ರವೇಶ ಮಾಡಿದ್ದರ ಬಗ್ಗೆ ತಿಳಿದ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಅವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ, ಅರಣ್ಯ ಇಲಾಖೆ ಅಧಿಕಾರಿಗಳು ಡಿ.2ರಂದು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಅರಣ್ಯದೊಳಗೆ ಇಬ್ಬರು ಅಕ್ರಮವಾಗಿ ಪ್ರವೇಶಿಸಿ, ಫೈರ್ ಕ್ಯಾಂಪ್ ನಡೆಸಿರುವ ಘಟನೆಗೆ ಪರಿಸರ ಪ್ರೇಮಿಗಳು ಕೂಡ ಕಿಡಿಕಾರಿದ್ದು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.