ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಕಳೆದ ನವೆಂಬರ್‌ನಲ್ಲೇ ಭೂಮಿ ಪೂಜೆ ಮಾಡಿದ್ದು, ವರ್ಷ ಕಳೆಯುತ್ತಾ ಬಂದರೂ ಇದುವರೆಗೂ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಕೋರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನ ಕುಮಾರ್ ಆರೋಪಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅತ್ಯಂತ ಬಡವರಿಗೆ ಅನುಕೂಲವಾಗುವ ದೃಷ್ಠಿಯಿಂದ ಸರ್ಕಾರ ಕ್ಯಾನ್ಸರ್ ಶಿವಮೊಗ್ಗದಲ್ಲಿ ಆಸ್ಪತ್ರೆಗೆ ನಿರ್ಮಿಸಲು ಉದ್ದೇಶಿಸಿ ಭೂಮಿ ಪೂಜೆ ಮಾಡಿತ್ತು. ಆದರೆ, ಆಸ್ಪತ್ರೆ ಕಾಮಗಾರಿ ನಡೆದಿಲ್ಲ. ಕೇವಲ ಗುದ್ದಲಿ ಪೂಜೆಗಷ್ಟೇ ಕ್ಯಾನ್ಸರ್ ಆಸ್ಪತ್ರೆ ಸೀಮಿತ ಎಂಬಂತಾಗಿದೆ. ಹೀಗಾಗಿ ಈ ಭಾಗದ ಜನರಿಗೆ ಕ್ಯಾನ್ಸರ್ ಆಸ್ಪತ್ರೆ ಕನಸು ಸದ್ಯಕ್ಕೆ ನನಸಾಗುವ ಯಾವ ಲಕ್ಷಗಳು ಕಾಣುತ್ತಿಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಇಲ್ಲದಿರುವ ಪರಿಣಾಮ ಕ್ಯಾನ್ಸರ್ ದೇಹದಲ್ಲಿ ಯಾವ ಭಾಗದಲ್ಲಿದೆ. ಯಾವ ಸ್ಟೇಜ್‍ನಲ್ಲಿ ಇದೆ ಎಂದು ಗೊತ್ತಾಗಲೂ ಖಾಸಗಿ ಆಸ್ಪತ್ರೆಗೆ ಬಡವರು ಪರದಾಡಬೇಕಾಗಿದೆ. ಪೆಟ್ ಸ್ಕ್ಯಾನ್ ಮಾಡಲು 30 ಸಾವಿರ ಶುಲ್ಕವಿದ್ದು, ಅದನ್ನು ಹೊಂದಿಸಲು ಬಡವರಿಗೆ ಕಷ್ಟವಾಗುತ್ತಿದೆ. ಹಣ ಜೋಡಿಸು ವಷ್ಟರಲ್ಲೇ ಕಾಯಿಲೆ 3 ಅಥವಾ 4ನೇ ಹಂತಕ್ಕೆ ಹೋಗಿ ರೋಗಿ ಸಾಯುವ ಸಂಭವ ಹೆಚ್ಚಿರುವುದರಿಂದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಕೂಡಲೇ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಬೇಕು. ಅಲ್ಲಿಯವರೆಗೆ ಮೆಗ್ಗಾನ್‍ನಲ್ಲೇ ಪೆಟ್ ಸಿಟಿ ಸ್ಕ್ಯಾನ್ ಅಳವಡಿಸಬೇಕು ಎಂದು ಆಗ್ರಹಿಸಿದರು.ಈ ಬಗ್ಗೆ ಸಿಮ್ಸ್ ನಿರ್ದೇಶಕರಿಗೆ ಕೇಳಿದರೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎನ್ನುತ್ತಾರೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ಕೊಟ್ಟಂತೆ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಇನ್ನು, ಸ್ಮಾರ್ಟ್ ಸಿಟಿ ಅನುದಾನದಲ್ಲಿ ಶೇ.30ರಷ್ಟು ನಗರದಲ್ಲಿ ಯುಜಿ ಕೇಬಲ್ ಅಳವಡಿಕೆಗೆ ಖರ್ಚು ಮಾಡಲಾಗಿತ್ತು. ಸ್ಮಾರ್ಟ್‌ಸಿಟಿ ಗುತ್ತಿಗೆದಾರರು ನಿಯಮಾವಳಿ ಗಳನ್ನು ಪಾಲಿಸದೇ ಕಳಪೆ ಕೆಲಸ ಮಾಡಿದ್ದರಿಂದ ನಗರದ ಹಲವೆಡೆ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಕೆಲವು ಕಡೆ ಮತ್ತೆ ಕಂಬದಿಂದಲೇ ಪಡೆಯುವಂತಾಗಿದೆ. ಇದರ ಬಗ್ಗೆ ದೂರು ನೀಡಿದಾಗ ಮೆಸ್ಕಾಂ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆಯಾಗಿತ್ತು. ಆದರೆ, ಇದುವರೆಗೆ ಯಾವುದೇ ಕ್ರಮವಾಗಿಲ್ಲ. ಪಾಲಿಕೆ ಮತ್ತು ಮೆಸ್ಕಾಂ ಅವರು ಗುತ್ತಿಗೆದಾರ ತಮಗಿನ್ನೂ ಹಸ್ತಾಂತರ ಮಾಡಿಲ್ಲ ಎಂದು ಹೇಳುತ್ತಾರೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ನಿರಂತರ ವಿದ್ಯುತ್ ಸಂಪರ್ಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸಾಕು ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೀದಿ ನಾಯಿ, ಹಂದಿ, ಕುದುರೆ, ಕತ್ತೆಗಳ ಹಾವಳಿ ಮಿತಿ ಮೀರಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗಿದ್ದು, ಅನೇಕ ಅಪಘಾತಗಳು ಸಂಭವಿಸಿವೆ. ಕೂಡಲೇ ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ನಗರದಲ್ಲಿ ಸೊಳ್ಳೆ ಕಾಟ ಜಾಸ್ತಿಯಾಗಿದ್ದು, ಡೆಂಗ್ಯೂ ಜ್ವರ ಹೆಚ್ಚಾಗಿದೆ. ಬೀದಿ ದೀಪಗಳು ಇಲ್ಲದೆ ಕೆಲವು ವಾರ್ಡ್‍ಗಳಲ್ಲಿ ನಾಗರೀಕರು ಓಡಾಡುವುದು ಕಷ್ಟವಾಗಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಕೆ.ಎನ್.ರಾಮಕೃಷ್ಣ, ಗೀತಾ ಸತೀಶ್, ಸಿದ್ದಪ್ಪ, ಬೊಮ್ಮನಕಟ್ಟೆ ಮಂಜುನಾಥ್, ದಯಾನಂದ್, ಅಬ್ದುಲ್ ವಾಜೀದ್, ಹೆಚ್.ಎಂ.ಸಂಗಯ್ಯ, ನರಸಿಂಹ ಗಂಧದಮನೆ, ನಾಗೇಶ್, ನಿಖಿಲ್, ಕಾಂತರಾಜ್, ಸುನೀಲ್‍ಗೌಡ, ವೆಂಕಟೇಶ್ ಇನ್ನಿತರರಿದ್ದರು.ಬಡವರಿಗೆ ಆಶ್ರಯ ಮನೆ ನೀಡಿ
ಬಡವರಿಗೆ ಸೂರು ನೀಡುವ ದೃಷ್ಟಿಯಿಂದ ಹಲವು ವರ್ಷಗಳ ಹಿಂದೆಯೇ ಗೋಪಿಶೆಟ್ಟಿಕೊಪ್ಪ ಮತ್ತು ಗೋವಿಂದಾಪುರದಲ್ಲಿ ಆಶ್ರಯ ಸಮಿತಿಯಿಂದ ಫಲಾನುಭವಿ ಗಳನ್ನು ಗುರುತಿಸಿ ಸುಮಾರು 4 ಸಾವಿರ ಮನೆ ನಿರ್ಮಾಣಕ್ಕೆ ಯೋಜನೆ ಮಾಡಿ ನಾಗಾರ್ಜುನ ಕಂಪನಿಗೆ ಟೆಂಡರ್ ಕೂಡ ಆಗಿತ್ತು. ಈಗಾಗಲೇ ಆ ಕಂಪನಿಗೆ 128 ಕೋಟಿ ರು. ಸಂದಾಯ ಕೂಡ ಆಗಿದೆ. ಆದರೆ, ಕೇವಲ 300 ಮನೆಗಳನ್ನು ಅಷ್ಟೇ ನೀಡಿದ್ದಾರೆ. 9 ಕೋಟಿ ರು. ಹಣವನ್ನು ನೀಡುವಂತೆ ಮತ್ತೆ ಕಂಪನಿಯವರು ಮನವಿ ಮಾಡಿದ್ದು, ಪಾಲಿಕೆಯಲ್ಲಿ ಅವರಿಗೆ ನೀಡಲು ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಲು ಹಣವಿಲ್ಲವಾಗಿದೆ ಎಂದು ದೂರಿದರು. ಈ ಬಗ್ಗೆ ಕೂಡ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕೂಡಲೇ ಬಡವರ ಮನೆ ನಿರ್ಮಾಣಕ್ಕೆ ಸಹಕರಿಸಬೇಕು. ಈಗಾಗಲೇ ಬ್ಯಾಂಕ್ ಲೋನ್ ಪಡೆದವರ ಕಂತು ಕಟ್ಟಲು ಪ್ರಾರಂಭವಾಗಿದ್ದು, ಮನೆಯೂ ಇಲ್ಲದೆ ಸಾಲದಿಂದ ತತ್ತರಿಸಿ ಹೋಗಿದ್ದಾರೆ ಎಂದು ಆರೋಪಿಸಿದರು.