ಸಾರಾಂಶ
ಲೋಕಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ ಇದೆ. ಕೊಡಗಿನಲ್ಲಿ ಬಿಸಿಲಿನ ಕಾವಿನ ನಡುವೆ ಪ್ರಚಾರ ನಡೆಯುತ್ತಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಕೂಡ ಬಿಸಿಲ ಕಾವಿನ ನಡುವೆ ಚುನಾವಣಾ ಪ್ರಚಾರ ಜೋರಾಗಿ ನಡೆಯುತ್ತಿದೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಎಂ. ಲಕ್ಷ್ಮಣ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿರುವ ಯದುವೀರ್ ಒಡೆಯರ್ ಅವರು ಈಗಾಗಲೇ ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಿಸಿಲ ಝಳದ ನಡುವೆ ಮತ ಪ್ರಚಾರದಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಬಿಸಿಲನ್ನು ಲೆಕ್ಕಿಸಿದೆ ಅಭ್ಯರ್ಥಿಗಳು ಸೇರಿದಂತೆ ಪಕ್ಷದ ಪ್ರಮುಖರಿಂದ ಪ್ರಚಾರ ಕಾರ್ಯ ಮಾಡಲಾಗುತ್ತಿದೆ.
ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿಯೇ ನದಿ ಮೂಲ ಸಂಪೂರ್ಣ ಬತ್ತಿ ಹೋಗಿದೆ. ಜಿಲ್ಲೆಯಲ್ಲೂ ಬಿಸಿಲ ವಾತಾವರಣವೂ ಹೆಚ್ಚಾಗಿಯೇ ಇದೆ. ಈ ನಡುವೆಯೂ ಲೋಕಸಭಾ ಚುನಾವಣೆಗೆ ವಿವಿಧ ಪಕ್ಷಗಳು ತಯಾರಾಗಿದ್ದು, ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಪ್ರಚಾರ ಕಾರ್ಯ ಮಾಡಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಪ್ರಚಾರ ಕಾರ್ಯ ಶುರು ಮಾಡಿ ರಾತ್ರಿಯ ವರೆಗೂ ಪ್ರಚಾರ ಕಾರ್ಯವನ್ನು ನಡೆಸುವ ಮೂಲಕ ವಿವಿಧ ಪಕ್ಷದ ಅಭ್ಯರ್ಥಿಗಳ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಬುಧವಾರ ಬೆಳಗ್ಗಿನಿಂದಲೇ ಬಿಸಿಲ ನಡುವೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ, ಬ್ಯಾಡಕೊಟ್ಟ, ಬೆಸ್ಸೂರು, ಹಂಡ್ಲಿ ಹಾಗೂ ಶನಿವಾರಸಂತೆ ಭಾಗದಲ್ಲಿ ನಿರಂತರ ಪ್ರಚಾರ ಸಭೆಯನ್ನು ನಡೆಸಿದರು. ಇವರೊಂದಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಪಕ್ಷದ ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಪಾಲ್ಗೊಂಡು ಪ್ರಚಾರ ನಡೆಸಿದರು.
ಬಿಜೆಪಿ ಅಭ್ಯರ್ಥಿ ಯದುವೀರ್ ಕೂಡ ಈಗಾಗಲೇ ಕೊಡಗಿನ ವಿವಿಧ ಕಡೆಗಳಲ್ಲಿ ಬಿಸಿಲ ನಡುವೆ ಪ್ರಚಾರ ಕಾರ್ಯದಲ್ಲಿ ಬೆಳಗ್ಗಿನಿಂದಲೂ ಪಾಲ್ಗೊಂಡು ರಾತ್ರಿ ವರೆಗೆ ಪ್ರಚಾರ ನಡೆಸುವಲ್ಲಿ ನಿರತರಾಗಿದ್ದಾರೆ. ಇವರೊಂದಿಗೆ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ, ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.