ವೃದ್ಧರು, ವಿಶೇಷ ಚೇತನರಿಗೆ ಮನೆಯಲ್ಲೇ ಮತದಾನ ವ್ಯವಸ್ಥೆ

| Published : Apr 11 2024, 12:53 AM IST

ವೃದ್ಧರು, ವಿಶೇಷ ಚೇತನರಿಗೆ ಮನೆಯಲ್ಲೇ ಮತದಾನ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತನರಿಗೆ ಮನೆ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು, ಈ ಸಂಬಂಧ ಕ್ಷೇತ್ರದಲ್ಲಿ ಅರ್ಹ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಅರ್ಹ ವಿಶೇಷಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆಯು ಏಪ್ರಿಲ್ 13 ರಿಂದ 18 ರವರೆಗೆ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಇಂದು ನಡೆದ ಮನೆ ಮತದಾನಕ್ಕೆ ನಿಯೋಜನೆಯಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮನೆಯಲ್ಲೇ ಮತದಾನ

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತನರಿಗೆ ಮನೆ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು, ಈ ಸಂಬಂಧ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಮನೆ ಮತದಾನ ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಮತದಾನಕ್ಕೆ ಬೇಕಾದ ಎಲ್ಲಾ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ವಯ ನಿಗದಿತ ಕಾಲಾವಧಿಯಲ್ಲಿ ಯಾವುದೇ ಲೋಪಕ್ಕೆ ಅವಕಾಶ ಕೊಡದೆ ಚುನಾವಣಾ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು

ಸೆಕ್ಟರ್ ಅಧಿಕಾರಿಗಳ ಜವಾಬ್ದಾರಿ

ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಮಾತನಾಡಿ, ಮನೆ ಮತದಾನ ಪ್ರಕ್ರಿಯೆಯ ಪೂರ್ಣ ಉಸ್ತುವಾರಿಯನ್ನು ಸೆಕ್ಟರ್ ಅಧಿಕಾರಿಗಳು ನಿರ್ವಹಿಸಬೇಕಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳಿಂದ ಮತದಾನ ಸಾಮಗ್ರಿಗಳನ್ನು ಪಡೆದು ಅಗತ್ಯ ಸಿಬ್ಬಂದಿಯೊಂದಿಗೆ ರೂಟ್ ಮ್ಯಾಪ್ ಪ್ರಕಾರ ಮತದಾನ ನಿರ್ವಹಣೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದೆ. ಹೀಗಾಗಿ ಸೆಕ್ಟರ್ ಅಧಿಕಾರಿಗಳ ಹೊಣೆಗಾರಿಕೆ ಮಹತ್ತರವಾಗಿದೆ ಎಂದರು.

ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರವಾರು ಮನೆಯಿಂದಲೇ ಮತದಾನಕ್ಕೆ ಮಾಡಲು ಒಪ್ಪಿಗೆ ನೀಡಿರುವ ಅರ್ಹ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ, ವಿಶೇಷ ಚೇತನರ ಮತದಾರರ ಪಟ್ಟಿ ಮಾಡಲಾಗಿದೆ. ಅದರಂತೆ ಮತದಾರರ ವಾಸ ವಿಳಾಸಕ್ಕೆ ತೆರಳಿ ಮತದಾನ ಪ್ರಕ್ರಿಯೆಯನ್ನು ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ನಿರ್ವಹಣೆ ಮಾಡಬೇಕೆಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಅವರು ತಿಳಿಸಿದರು.