ಅಭ್ಯರ್ಥಿಗಳಿಗೀಗ ಮತಗಳ ಕ್ರೋಢೀಕರಣದ್ದೇ ಚಿಂತೆ!

| Published : Mar 26 2024, 01:06 AM IST

ಅಭ್ಯರ್ಥಿಗಳಿಗೀಗ ಮತಗಳ ಕ್ರೋಢೀಕರಣದ್ದೇ ಚಿಂತೆ!
Share this Article
  • FB
  • TW
  • Linkdin
  • Email

ಸಾರಾಂಶ

ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ಅಧಿಕವಾಗಿದ್ದು, ಕಾಂಗ್ರೆಸ್ ನ ಡಿ.ಕೆ.ಸುರೇಶ್ ಮತ್ತು ಬಿಜೆಪಿಯ ಡಾ.ಸಿ.ಎನ್ .ಮಂಜುನಾಥ್ ರವರು ಅದೇ ಸಮುದಾಯಕ್ಕೆ ಸೇರಿದವರು. ಹೀಗಾಗಿ ಒಕ್ಕಲಿಗ ಮತಗಳು ವಿಭಜನೆಗೊಳ್ಳುವ, ಲಿಂಗಾಯತ ಮತಗಳು ಬಿಜೆಪಿ ಪಾಲಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.

ಕನ್ನಡಪ್ರಭ ವಾರ್ತೆ ರಾಮನಗರ

ರಾಜಕಾರಣದಲ್ಲಿ ಉತ್ತಮ ಕೆಲಸಗಾರ, ಆಡಳಿತಗಾರರಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಹೃದ್ರೋಗ ತಜ್ಞರಾಗಿ ಖ್ಯಾತಿಗಳಿಸಿರುವ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರಿಗೀಗ ಮತಗಳ ಕ್ರೋಢೀಕರಣದ ಚಿಂತೆ ಕಾಡ ತೊಡಗಿದೆ.

ತೀವ್ರ ಕುತೂಹಲ ಕೆರಳಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನಲ್ಲಿ ಪಕ್ಷ, ಜಾತಿ, ಧರ್ಮ, ವರ್ಗದ ಜೊತೆಗೆ ಯೋಜನೆಗಳ ಫಲಾನುಭವಿಗಳು, ಸ್ಥಳೀಯ ಶಾಸಕರ ಪ್ರಭಾವ ಕೂಡ ಮತಗಳಾಗಿ ಪರಿವರ್ತನೆಯಾಗುವ ಲೆಕ್ಕಾಚಾರಗಳು ಅಡಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು, ಅಹಿಂದ ಮತಗಳ ಮೇಲೆ ನಂಬಿಕೆಯಿಟ್ಟಿದ್ದರೆ, ಬಿಜೆಪಿ - ಜೆಡಿಎಸ್ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ ಮತಗಳ ಮೇಲೆ ಕಣ್ಣಿಟ್ಟಿದೆ. ಆ ಮತಗಳನ್ನು ಅಭ್ಯರ್ಥಿಗೆ ವರ್ಗಾಯಿಸುವ ಸವಾಲು ರಾಜಕೀಯ ನಾಯಕರ ಮೇಲೂ ಇದೆ.

ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ಅಧಿಕವಾಗಿದ್ದು, ಕಾಂಗ್ರೆಸ್ ನ ಡಿ.ಕೆ.ಸುರೇಶ್ ಮತ್ತು ಬಿಜೆಪಿಯ ಡಾ.ಸಿ.ಎನ್ .ಮಂಜುನಾಥ್ ರವರು ಅದೇ ಸಮುದಾಯಕ್ಕೆ ಸೇರಿದವರು. ಹೀಗಾಗಿ ಒಕ್ಕಲಿಗ ಮತಗಳು ವಿಭಜನೆಗೊಳ್ಳುವ, ಲಿಂಗಾಯತ ಮತಗಳು ಬಿಜೆಪಿ ಪಾಲಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಉಳಿದಂತೆ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಮತಗಳೇ ನಿರ್ಣಾಯಕವಾಗಿದ್ದು, ಮುಸ್ಲಿಂ ಮತಗಳು ಕಾಂಗ್ರೆಸ್‌ ಕೈ ಬಿಡಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಈ ಬಾರಿ ಹಿಂದುಳಿದ ಮತ್ತು ದಲಿತ ಮತಗಳೂ ಜೊತೆ ಇರಲಿವೆ ಎಂಬುದು ಕಾಂಗ್ರೆಸ್ ನವರ ಲೆಕ್ಕಾಚಾರ.

ಕೈಗೆ ಶಾಸಕರ ಬಲ, ದಳ ಕಮಲಕ್ಕೆ ಮತಗಳ ಬಲ :

ಅತಿ ದೊಡ್ಡ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಈ ಪೈಕಿ ಕುಣಿಗಲ್, ಆನೇಕಲ್, ರಾಮನಗರ, ಕನಕಪುರ, ಮಾಗಡಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ.

2018ರ ಚುನಾವಣೆಯಲ್ಲಿ 3 (ರಾಮನಗರ, ಮಾಗಡಿ, ಚನ್ನಪಟ್ಟಣ )ಕ್ಷೇತ್ರಗಳಲ್ಲಿ ಜೆಡಿಎಸ್, ಬಿಜೆಪಿ - 1 ಹಾಗೂ ಕಾಂಗ್ರೆಸ್ - 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಗ ಕಾಂಗ್ರೆಸ್ - ಜೆಡಿಎಸ್ ಮೈತ್ರಿಯಿಂದ ಹೆಚ್ಚಿನ ಲಾಭ ಆಗಲಿಲ್ಲ ಎಂಬುದಕ್ಕೆ ಡಿ.ಕೆ.ಸುರೇಶ್ ಪಡೆದ ಮತ ಗಳಿಕೆಯ ಪ್ರಮಾಣವೇ ಸಾಕ್ಷಿ. ಈಗಿನ ಬಿಜೆಪಿ - ಜೆಡಿಎಸ್ ಮೈತ್ರಿ ಎದುರಾಳಿಗಳ ನಿದ್ದೆ ಗೆಡಿಸಿರುವುದಂತೂ ಸುಳ್ಳಲ್ಲ. ಆದರೂ ಕಮಲ - ದಳಪತಿಗಳಿಗೆ ಮೈತ್ರಿ ವರ್ಕ್ ಔಟ್ ಆಗುತ್ತದೆಯೋ ಇಲ್ಲವೋ ಎಂಬ ಆತಂಕ ಒಳಗೊಳಗೆ ಕಾಡುತ್ತಿದೆ.

ವಿಧಾನಸಭಾ ಕ್ಷೇತ್ರವಾರು ಬಿಜೆಪಿ -2, ಜೆಡಿಎಸ್ -1 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ ಪಕ್ಷ 5 ಶಾಸಕರನ್ನೊಳಗೊಂಡು ಬಲಾಬಲವನ್ನು ಹೆಚ್ಚಿಸಿಕೊಂಡಿರಬಹುದು. ಆದರೆ, ಬಿಜೆಪಿ - ಜೆಡಿಎಸ್ ಪಡೆದಿರುವ ಮತಗಳನ್ನು ಒಗ್ಗೂಡಿಸಿ ಮೈತ್ರಿ ಅಭ್ಯರ್ಥಿಗೆ ವರ್ಗಾಯಿಸಿದರೆ ಕಾಂಗ್ರೆಸ್ ಗೆ ಹಿನ್ನಡೆಯಾಗುವ ಭೀತಿಯೂ ಕಾಡುತ್ತಿದೆ.

ಕೆಲಸಗಾರ ವರ್ಸಸ್‌ ಸಜ್ಜನ ವೈದ್ಯ:

ಇನ್ನು ಡಿ.ಕೆ.ಸುರೇಶ್ ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆ ವಿಚಾರದಲ್ಲಿ ಹಾರ್ಡ್ ವರ್ಕರ್. ಸಹೋದರ ಉಪ ಮುಖ್ಯಮಂತ್ರಿಯೂ ಆಗಿರುವ ಕಾರಣ ಕ್ಷೇತ್ರಕ್ಕೆ ಅನುದಾನ ತರುವುದು ಕಷ್ಟವೇನಲ್ಲ ಎಂಬುದು ಪ್ಲಸ್ ಪಾಯಿಂಟ್. ಅಲ್ಲದೆ, ಕೊರೋನಾ ಸಂಕಷ್ಟದಲ್ಲಿ ಆರೋಗ್ಯ ಕಾರ್ಯಕರ್ತರಂತೆ ಕೆಲಸ ಮಾಡಿದವರು. ರೋಗಿಗಳಿಗೆ ಪೌಷ್ಠಿಕ ಆಹಾರ ಪೂರೈಕೆ, ಕೋವಿಡ್ ಕಾರಣಕ್ಕೆ ಕುಟುಂಬದವರು ಶವದ ಹತ್ತಿರವೂ ಸುಳಿಯದ ಸಂದರ್ಭದಲ್ಲಿ ಅನಾಥ ಶವಗಳ ಸಂಸ್ಕಾರವನ್ನು ಮುಂದೆ ನಿಂತು ನೆರವೇರಿಸಿದವರು. ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆಂಬ ಮಾತೂ ಇದೆ. ಕ್ಷೇತ್ರದ ಅಭಿವೃದ್ಧಿಯ ಹೆಸರು ಹೇಳಿ ಡಿ.ಕೆ.ಸುರೇಶ್ ಮತ ಕೇಳುತ್ತಿದ್ದಾರೆ.

ಸಂಭಾವಿತ ವ್ಯಕ್ತಿಯಾಗಿರುವ ಡಾ. ಮಂಜುನಾಥ್ ವೈದ್ಯರಾಗಿ ಒಳ್ಳೆಯ ಹೆಸರು ಹೊಂದಿದ್ದಾರೆ. ಮೈತ್ರಿಯ ಕಾರಣಕ್ಕೆ ಒತ್ತಾಯಪೂರ್ವಕವಾಗಿಯೇ ರಾಜಕೀಯ ಪ್ರವೇಶ ಮಾಡಿದವರು. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುಡಿ ಎಂಬುದನ್ನು ಹೊರತು ಪಡಿಸಿದರೆ ಅವರನ್ನು ಟೀಕಿಸಲು ಬೇರೆ ಅಸ್ತ್ರಗಳೇ ಇಲ್ಲ. ಆದರೆ, ರಾಜಕಾರಣಿಯಾಗಿ ಜನರ ಸಂಕಷ್ಟಕ್ಕೆ ಸ್ಪಂದನೆ ಇವರಿಂದ ಸಾಧ್ಯವಾ? ಎಂಬ ಪ್ರಶ್ನೆಯೂ ಇದೆ. ಸ್ಥಿರ ಮತ್ತು ಪ್ರಗತಿದಾಯಕ ಸರ್ಕಾರ ಮುಂದುವರೆಯಬೇಕೆಂದರೆ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲು ತನ್ನನ್ನು ಬೆಂಬಲಿಸುವಂತೆ ಮಂಜುನಾಥ್ ರವರು ಮತಯಾಚನೆ ಮಾಡುತ್ತಿದ್ದಾರೆ.

ಕ್ಷೇತ್ರದ ಜಾತೀವಾರು ಮತದಾರರ ವಿವರ

ಒಕ್ಕಲಿಗ - 8.70 ಲಕ್ಷ

ಪ.ಜಾ, ಪ.ಪಂ- 6.98ಲಕ್ಷ

ಲಿಂಗಾಯತ- 2.35ಲಕ್ಷ

ಕುರುಬರು- 1.40 ಲಕ್ಷ

ಮುಸ್ಲಿಂ- 3.20 ಲಕ್ಷ

ಇತರೆ- 5.00 ಲಕ್ಷ

ಇತರ: 321

ಪುರುಷರು: 14,06042

ಮಹಿಳೆಯರು: 13,57,547

-------------

ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳು ಪಡೆದ ಮತಗಳ ವಿವರ

ಕ್ಷೇತ್ರ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ

ಕುಣಿಗಲ್, 74,724, 46,974, 48,151,

ಆರ್ ಆರ್ ನಗರ, 1,16,138, 7795, 1,27,980

ಬೆ. ದಕ್ಷಿಣ, 1,46,521, 24,612, 1,96,220

ಆನೇಕಲ್, 1,34,797, 6,415, 1,03,472

ಮಾಗಡಿ ,94,650, 82,811, 20,197

ರಾಮನಗರ, 87,690, 76,975, 12,912

ಕನಕಪುರ, 1,43,023, 20,631, 19,753

ಚನ್ನಪಟ್ಟಣ, 15,374, 96,592, 80677

---------------------------------------------

ಒಟ್ಟು 8,12,917, 3,62,805, 6,09,362