ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಾಫಿ ಬೆಳೆಗಾರರಿಗೆ ಕಾರ್ಬನ್ ಕ್ರೆಡಿಟ್ ನೀಡುವ ಯೋಜನೆ ಗಗನಕುಸುಮವಾಗಿಯೇ ಉಳಿದಿದೆ.ವಾತಾವರಣದಲ್ಲಿ ಏರುತ್ತಿರುವ ಉಷ್ಣಾಂಶವನ್ನು ತಗ್ಗಿಸುವ ನಿಟ್ಟಿನಲ್ಲಿ ಜಾಗತಿಕವಾಗಿ ರೈತರಿಗೆ ಕಾರ್ಬನ್ ಕ್ರೆಡಿಟ್ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಈ ಮೂಲಕ ಅರಣ್ಯ ಕೃಷಿ ಉತ್ತೇಜಿಸಿ ಭೂಮಿಯಲ್ಲಿ ಹಸಿರು ಹೆಚ್ಚಳಮಾಡುವ ಉದ್ದೇಶ ಅಡಗಿದೆ. ಇದಕ್ಕಾಗಿ ವಾತಾವರಣಕ್ಕೆ ವಿಷಾನಿಲ ಸೂಸುವ ಬೃಹತ್ ಕಂಪನಿಗಳಿಂದ ಅನುದಾನ ಸಂಗ್ರಹಿಸಿ ಜಮೀನಿನಲ್ಲಿ ಮರಗಳನ್ನು ಬೆಳೆಸುವ ಮೂಲಕ ವಾತಾವರಣದಲ್ಲಿ ಕಾರ್ಬನ್ ಅಂಶವನ್ನು ಕಡಿತಗೊಳಿಸುವ ಯೋಜನೆ ಇದಾಗಿದ್ದು, ವಿಶ್ವದಾದ್ಯಂತ ಈ ಯೋಜನೆ ಜಾರಿಗೊಂಡಿದೆ. ದೇಶದಲ್ಲಿ ಒಡಿಶಾ, ಅಸ್ಸಾಂ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಈ ಯೋಜನೆ ಆರಂಭಿಕ ಹಂತದಲ್ಲಿದ್ದರೆ, ಉತ್ತರ ಪ್ರದೇಶ ರಾಜ್ಯದಲ್ಲಿ ಈ ವರ್ಷ ಸುಮಾರು 250 ರೈತರಿಗೆ 48 ಲಕ್ಷ ರು. ಗಳನ್ನು ಪಾವತಿಸುವ ಮೂಲಕ ಕಾರ್ಬನ್ ಕ್ರೆಡಿಟ್ ಪಾವತಿಸಿದ ದೇಶದ ಮೊದಲ ರಾಜ್ಯ ಎನ್ನಿಸಿಕೊಂಡಿದೆ.ಕರ್ನಾಟಕದಲ್ಲಿ ಕಾರ್ಬನ್ ಕ್ರೆಡಿಟ್‌ಗೆ ಆಯ್ಕೆಯಾದ ಏಕೈಕ ಬೆಳೆ ಕಾಫಿಯಾಗಿದ್ದು, 2022ರ ಡಿಸಂಬರ್ ತಿಂಗಳಿನಲ್ಲಿ ಕಾರ್ಬನ್ ಸೇ ಎಂಬ ಕಂಪನಿ ಕಾರ್ಬನ್ ಕ್ರೆಡಿಟ್ ಪಡೆಯಲು ಅರ್ಹರಿರುವ ಕಾಫಿ ಬೆಳೆಗಾರರು ಅರ್ಜಿ ಸಲ್ಲಿಸುವಂತೆ ಮನವಿ ಮಾಡಿತ್ತು. ಅರ್ಜಿ ಸಲ್ಲಿಸಲು ಕಂಪನಿ ಸೀಮಿತ ಅವಧಿಯನ್ನು ನೀಡಿದ್ದ ಪರಿಣಾಮ ಹಾಸನ ಬೆಳೆಗಾರರ ಸಂಘದಲ್ಲಿ ಬೆಳೆಗಾರರು ಸರತಿಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಿದ್ದು, ಸುಮಾರು 7 ಸಾವಿರ ಬೆಳೆಗಾರರು ಅರ್ಜಿ ಸಲ್ಲಿಸಿದ್ದರು ಎಂಬ ಅಂಕಿ ಅಂಶವನ್ನು ಬೆಳೆಗಾರರ ಸಂಘ ನೀಡುತ್ತಿದೆ.ಒಂದು ಎಕರೆ ಪ್ರದೇಶಕ್ಕೆ 3ರಿಂದ 4 ಸಾವಿರ ರು. ಕಂಪನಿ ನೀಡಿತ್ತು. ಇದಕ್ಕಾಗಿ ಸರ್ವೆ ಕಾರ್ಯವನ್ನು ಹಲವೆಡೆ ನಡೆಸಲಾಗಿದ್ದು ಕಾಫಿ ತೋಟದಲ್ಲಿ ನೈಸರ್ಗಿಕವಾಗಿ ಪಾವತಿಸಲಾಗುವುದು ಎಂಬ ಭರವಸೆಯನ್ನು ಅಂದು ಬೆಳೆದ ಮರಗಳಿಗೆ ಕಾರ್ಬನ್ ಕ್ರೆಡಿಟ್‌ನಲ್ಲಿ ಹೆಚ್ಚಿನ ಅಂಕ ಲಭಿಸಲಿದೆ ಎಂಬ ಮಾತುಗಳು ಅಧಿಕಾರಿಗಳ ವಲಯದಿಂದ ಕೇಳಿ ಬರುತ್ತಿದ್ದರಿಂದ ಬೆಳೆಗಾರರಿಗೆ ಇದರಿಂದಲೂ ಆದಾಯ ಲಭಿಸಲಿದೆ ಎಂಬ ನಂಬಿಕೆ ಸೃಷ್ಟಿಯಾಗಿತ್ತು. ಆದರೆ, ಕಾರ್ಬನ್ ಸೇ ಕಂಪನಿ ಅರ್ಜಿ ಪಡೆದಿರುವುದನ್ನು ಹೊರತುಪಡಿಸಿ ಇದುವರಗೆ ಯಾವುದೇ ಬೆಳವಣಿಗೆಯನ್ನು ದಾಖಲಿಸಿಲ್ಲ. ಈ ಬಗ್ಗೆ ಹಾಸನ ಬೆಳೆಗಾರರ ಸಂಘದ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು ಎರಡು ಬಾರಿ ಕಂಪನಿಯ ಅಧಿಕಾರಿಗಳನ್ನು ಸಭೆಗೆ ಕರೆಸಿ ವಿವರ ಕೇಳಿದ್ದು ಈ ವೇಳೆ ಅಧಿಕಾರಿಗಳು ಹೇಳಿಕೆ ವಿಚಿತ್ರವಾಗಿದೆ.ಕಾರ್ಬನ್ ಕ್ರೆಡಿಟ್ ಮೌಲ್ಯ ಈಗ ಜಾಗತಿಕವಾಗಿ ಕುಸಿದಿದ್ದು ಬೆಳೆಗಾರರಿಗೆ ಕ್ರೆಡಿಟ್ ನೀಡಲು ಹೋದರೆ ಕಂಪನಿಯೇ ದಿವಾಳಿಯಾಗಲಿದೆ. ಆದ್ದರಿಂದ, ಮೌಲ್ಯ ಹೆಚ್ಚಳವಾಗದ ಹೊರತು ಕಾರ್ಬನ್ ಕ್ರೆಡಿಟ್ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಪ್ಪೆಸಾರಿಸಿದ್ದಾರೆ. ಇದರಿಂದಾಗಿ ಕಾರ್ಬನ್ ಕ್ರೆಡಿಟ್ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಸದ್ಯಕ್ಕೆ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿದೆ.
====ಹೇಳಿಕೆ:1
ಕಾರ್ಬನ್ ಕ್ರೆಡಿಟ್ ಪಡೆಯುವ ಉದ್ದೇಶದಿಂದ ದಿನಗಟ್ಟಲೆ ಸರತಿಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಿರುವುದನ್ನು ಹೊರತುಪಡಿಸಿ ಯಾವುದೇ ಬೆಳವಣಿಗೆಯಾಗಿಲ್ಲ. ಈಗ ಕೇಳಿದರೆ ಮೌಲ್ಯವಿಲ್ಲ ಎಂಬ ಹೇಳಿಕೆ ನೀಡಲಾಗುತ್ತಿದೆ. - ಸುರೇಂದ್ರ ಕ್ಯಾಮನಹಳ್ಳಿ, ಕಾಫಿ ಬೆಳೆಗಾರ