ಮಂಗಳೂರು ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಕಾರ್ಗೊ ಸೇವೆ

| Published : Jul 08 2024, 12:36 AM IST

ಸಾರಾಂಶ

ಇನ್ನು ಮುಂದೆ ದಕ್ಷಿಣ ಕನ್ನಡ, ಉಡುಪಿ, ಕೇರಳ ಸಹಿತ ವಿವಿಧ ಭಾಗದಿಂದ ಸರಕನ್ನು ಮಂಗಳೂರು ಏರ್‌ಪೋರ್ಟ್ ಮೂಲಕ ವಿದೇಶಗಳಿಗೆ ಸಾಗಾಟ ನಡೆಸಬಹುದು.

ಕನ್ನಡಪ್ರಭ ವಾರ್ತೆ ಮಂಗಳೂರು

ಬಹುಕಾಲದ ಬೇಡಿಕೆಯಾಗಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ಕಾರ್ಗೊ (ಸರಕು) ಸಾಗಾಟ ಕೊನೆಗೂ ಆರಂಭಗೊಂಡಿದೆ. ಶುಕ್ರವಾರ ಮಂಗಳೂರಿನಿಂದ ಅಬುಧಾಬಿಗೆ 2,522 ಕಿಲೋ ತರಕಾರಿ ಹಾಗೂ ಹಣ್ಣು ಸಾಗಾಟ ಮಾಡುವ ಮೂಲಕ ಮೊದಲ ಅಂತಾರಾಷ್ಟ್ರೀಯ ಕಾರ್ಗೊ ಸಾಗಾಟ ಆರಂಭವಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಕಾರ್ಗೊ ಸಾಗಾಟಕ್ಕೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು.ಇನ್ನು ಮುಂದೆ ದಕ್ಷಿಣ ಕನ್ನಡ, ಉಡುಪಿ, ಕೇರಳ ಸಹಿತ ವಿವಿಧ ಭಾಗದಿಂದ ಸರಕನ್ನು ಮಂಗಳೂರು ಏರ್‌ಪೋರ್ಟ್ ಮೂಲಕ ವಿದೇಶಗಳಿಗೆ ಸಾಗಾಟ ನಡೆಸಬಹುದು. ತರಕಾರಿ, ಹಣ್ಣು, ಆಹಾರ ವಸ್ತುಗಳು, ಯಂತ್ರೋಪಕರಣದ ಬಿಡಿಭಾಗಗಳು, ಟೆಕ್ಸ್‌ಟೈಲ್ಸ್ ಮೀನು ಸಹಿತ ವಿವಿಧ ವಸ್ತುಗಳನ್ನು ಪ್ರಯಾಣಿಕರು ಸಂಚರಿಸುವ ವಿಮಾನದಲ್ಲೇ ಕೊಂಡೊಯ್ಯಲಾಗುತ್ತದೆ. ಇಂಡಿಗೋ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈ, ದೋಹಾ, ದಮಾಮ್, ಕುವೈಟ್, ಮಸ್ಕತ್, ಅಬುಧಾಬಿ ಹಾಗೂ ಬಹರೈನ್‌ಗೆ ಸರಕು ಕೊಂಡೊಯ್ಯಲು ಅವಕಾಶವಿದೆ.