ಸಾರಾಂಶ
ನಿಪ್ಪಾಣಿ ನಗರದ ಪ್ರವಾಸಿ ಮಂದಿರದದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಮಾತನಾಡಿ, ನಿಪ್ಪಾಣಿ ತಾಲೂಕಿನಲ್ಲಿ ಅತೀ ಸೂಕ್ಷ್ಮ ಮತಗಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಧಿಕಾರಿಗಳು ಗೊಂದಲ ಮಾಡಿಕೊಳ್ಳದೇ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಿಪ್ಪಾಣಿ ತಾಲೂಕಿನಲ್ಲಿ ಅತೀ ಸೂಕ್ಷ್ಮ ಮತಗಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಧಿಕಾರಿಗಳು ಗೊಂದಲ ಮಾಡಿಕೊಳ್ಳದೇ ಕರ್ತವ್ಯ ನಿರ್ವಹಿಸಬೇಕು. ಕಡಿಮೆ ಮತದಾನ ಆಗಿರುವ ಮತಗಟ್ಟೆಗಳಲ್ಲಿ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಂಡು ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.ನಿಪ್ಪಾಣಿ ನಗರದ ಪ್ರವಾಸಿ ಮಂದಿರದದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಿಪ್ಪಾಣಿ ತಾಲೂಕಿನ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಕುರಿತು ಮಾಹಿತಿ ಪಡೆದಕೊಂಡ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ದೂಧಗಂಗಾ ನದಿಗೆ ಕಾಳಮ್ಮಾವಾಡಿ ಡ್ಯಾಂ ಮೂಲಕ ಹರಿಬಿಡುವ ನೀರಿನ ಪ್ರಮಾಣ ಪರಿಶೀಲಿಸುವುದು. ತಾಲೂಕಿನಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಮನರೇಗಾ ಯೋಜನೆಯಡಿ ಮುಕ್ತಾಯಗೊಂಡಿರುವ ಕಾಮಗಾರಿಗಳನ್ನು ತಂತ್ರಾಂಶದಲ್ಲಿ ಇಂದೀಕರಿಸಿ ಪ್ರಗತಿ ಸಾಧಿಸಬೇಕು. ಸಾಮಾಜಿಕ ಪರಿಶೋಧನೆಯಡಿ ಅತೀ ಹೆಚ್ಚಿಗೆ ಇರುವ 100 ಪ್ರಕರಣಗಳ ಅನುಪಾಲನಾ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸುವಂತೆ ತಿಳಿಸಿದರು.ಸಭೆ ಬಳಿಕ ಜಿ.ಐ.ಬಾಗೇವಾಡಿ ಕಾಲೇಜಿಗೆ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೊಠಡಿಗಳನ್ನು ಪರಿಶೀಲಿಸಿದರು. ಕೋಗನ್ನೋಳ್ಳಿ ಚುನಾವಣಾ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಡಿ ಗ್ರಾಪಂಗೆ ಭೇಟಿ ನೀಡಿ ಡಿಜಿಟಲ್ ಗ್ರಂಥಾಲಯ ಹಾಗೂ ಮನರೇಗಾ ಕಾಮಗಾರಿಗಳು ಮತ್ತು ತಾಪಂ ಅನಿರ್ಬಂಧಿತ ಅನುದಾನದ ಕಾಮಗಾರಿಗಳನ್ನು ವೀಕ್ಷಿಸಿದರು.
ತಾಪಂ ಇಒ ಸುನೀಲ ಮದ್ದಿನ, ತಹಸೀಲ್ದಾರ್ ಎಂ.ಎನ್.ಬಳಿಗಾರ, ಎಇಇ ಎಸ್.ಆರ್.ಭಜಂತ್ರಿ, ಸಹಾಯಕ ನಿರ್ದೇಶಕರಾದ ಸುದೀಪ ಚೌಗಲೆ, ಚಂದ್ರಕಾಂತ ನಂದಗಾವಿ ಮತ್ತಿತರರು ಉಪಸ್ಥಿತರಿದ್ದರು.