ಮಹಿಳಾ ದೌರ್ಜನ್ಯ ಪ್ರಕರಣಗಳು ಸೂಕ್ಷ್ಮ ವಿಷಯ

| Published : Jan 03 2025, 12:33 AM IST

ಸಾರಾಂಶ

ಮಹಿಳಾ ದೌರ್ಜನ್ಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ತುಂಬಾ ಸೂಕ್ಷ್ಮತೆಯಿಂದ ಕೂಡಿದ್ದು, ಮುರಿದ ಮನಸ್ಸುಗಳನ್ನು ಒಂದುಗೂಡಿಸಲು ಪ್ರಯತ್ನ ಅತ್ಯಂತ ಅನಿವಾರ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ನೂರುನ್ನೀಸಾ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಮಹಿಳಾ ದೌರ್ಜನ್ಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ತುಂಬಾ ಸೂಕ್ಷ್ಮತೆಯಿಂದ ಕೂಡಿದ್ದು, ಮುರಿದ ಮನಸ್ಸುಗಳನ್ನು ಒಂದುಗೂಡಿಸಲು ಪ್ರಯತ್ನ ಅತ್ಯಂತ ಅನಿವಾರ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ನೂರುನ್ನೀಸಾ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಅನುಷ್ಠಾನ, ಭಾಗಿದಾರ ಇಲಾಖೆಗಳ ಪಾತ್ರ ಕುರಿತ ಎರಡು ದಿನಗಳ ಓರಿಯಂಟೇಷನ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ದಿನಗಳು ಕಳೆದಂತೆ ಸಮಸ್ಯೆಗಳು ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ. ಇವುಗಳನ್ನು ಶಾಂತಿಯುತವಾಗಿ ಬಗೆಹರಿಸುವ ಪ್ರಯತ್ನ ಶ್ಲಾಘನೀಯ ಎಂದರು. ಎಲ್ಲ ಸಮಸ್ಯೆಗಳಿಗೆ ಕೋರ್ಟ್, ಪೊಲೀಸ್ ಠಾಣೆ ಪರಿಹಾರವಲ್ಲ. ಸಮಸ್ಯೆಗಳಿಗೆ ಕಾರಣ ಹುಡುಕಿ ಅದನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಇಲಾಖೆಗಳ ಸಹಭಾಗಿತ್ವ ಅತ್ಯಂತ ಹೆಚ್ಚಿನದಿದೆ. ಈ ನಿಟ್ಟಿನಲ್ಲಿ ಮಹಿಳಾ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಾಂತ್ವನ, ಸಖಿ, ಸಂರಕ್ಷಣಾಧಿಕಾರಿಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕಿದೆ. ಒಮ್ಮೆ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದಲ್ಲಿ ಕೇಸು ದಾಖಲಾದರೆ ಹಠಮಾರಿ ಧೋರಣೆ ಹೆಚ್ಚುತ್ತದೆ. ಆದಕಾರಣ ಪ್ರಾಥಮಿಕ ಹಂತದಲ್ಲಿಯೇ ಕೌಟುಂಬಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ಹೆಚ್ಚು ಸೂಕ್ತ ಎಂದರು.

ಒಡೆದ ಮನಸ್ಸುಗಳನ್ನು ಒಂದುಗೂಡಿಸದಿದ್ದರೆ ಮಕ್ಕಳ ಭವಿಷ್ಯ ಭಯಾನಕವಾಗುತ್ತದೆ. ಬಹಳಷ್ಟು ಜನ ಆತುರದಲ್ಲಿ ವಿಚ್ಛೇದನಕ್ಕೆ ಮುಂದಾಗುತ್ತಾರೆ. ಆದರೆ ಮುಂದಿನ ಬದುಕಿನ ಮಾರ್ಗಗಳೂ ಮುಖ್ಯ ಎಂಬುದನ್ನು ಸಮಾಲೋಚಕರು ನೋಂದ ಮಹಿಳೆಯರಿಗೆ ಸಲಹೆ ನೀಡಬೇಕಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಚೇತನ್ ಕುಮಾರ್ ಮಾತನಾಡಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಎಂದರೆ ಕೇವಲ ಪತ್ನಿ, ಗಂಡ ಹಾಗೂ ಕುಟುಂಬದವರ ವಿರುದ್ಧ ದಾಖಲಿಸುವ ದೂರು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಒಂದು ಕುಟುಂಬದಲ್ಲಿ ಮಗಳು, ತಾಯಿ ಇತ್ಯಾದಿ ಇರುತ್ತಾರೆ. ಇವರೂ ಸಹ ದೂರು ಸಲ್ಲಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಯಾವುದೇ ಸಂದರ್ಭದಲ್ಲಿ ಒಂದು ಕುಟುಂಬದಿಂದ ಮಹಿಳೆಯನ್ನು ಹೊರ ಹಾಕುವ ಪ್ರಯತ್ನ ನಡೆದಾಗ ಈ ಕಾಯ್ದೆಯಡಿಯಲ್ಲಿ ಸಂರಕ್ಷಣಾ ಆದೇಶ ಪಡೆಯಲು ಅವಕಾಶವಿದೆ ಎಂದರು.ಕೌಟುಂಬಿಕ ಸಮಸ್ಯೆ ಪ್ರಕರಣಗಳಲ್ಲಿ ಸಮಾಲೋಚನೆ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಸಮಾಲೋಚನೆಯಿಂದಲೇ ಬಹಳಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಿದೆ. ಸಣ್ಣಪುಟ್ಟ ವಿಷಯಗಳಿಗೆಲ್ಲ ಮನೆಯಲ್ಲಿ ವ್ಯಾಜ್ಯಗಳು ಶುರುವಾಗುತ್ತಿವೆ. ಆಧುನಿಕ ಜಗತ್ತಿಗೆ ತಕ್ಕಂತೆ ಬದುಕುವ ಮನಸ್ಸು ಇದಕ್ಕೆ ಕಾರಣವಾಗುತ್ತಿದೆ ಎಂದ ಅವರು, ಯಾವುದೇ ಸಮಸ್ಯಗಳು ಇರಲಿ ಅಂತಿಮವಾಗಿ ಸಮಾಲೋಚನ ಪ್ರಕ್ರಿಯೆಗಳೇ ಉತ್ತಮ ದಾರಿ ಎಂದರು.ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣಾ ಕಾಯ್ದೆಯ ಸ್ವರೂಪ, ಕಾಯ್ದೆಯ ಅನುಷ್ಠಾನಕ್ಕಾಗಿ ಜಾರಿಗೊಂಡಿರುವ ಕಾರ್ಯಕ್ರಮಗಳು, ನ್ಯಾಯಾಲಯದ ಆದೇಶಗಳು ಹಾಗೂ ಅದರ ಅನುಷ್ಠಾನ, ದಂಡಾಧಿಕಾರಿಗಳೊಂದಿಗೆ ಸಮನ್ವಯ ಕುರಿತು ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿದರು.ಲಿಂಗ ತಾರತಮ್ಯ, ಸಮಾಲೋಚನೆಯ ವಿಧಿ ವಿಧಾನಗಳು ಕುರಿತು ಬದುಕು ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್.ನಂದಕುಮಾರ್ ಮಾತನಾಡಿದರು. ಸಂರಕ್ಷಣಾ ಕಾಯ್ದೆಯಡಿ ವೈದ್ಯಾಧಿಕಾರಿಗಳ ಪಾತ್ರ ಕುರಿತು ತುಮಕೂರು ಜಿಲ್ಲಾಸ್ಪತ್ರೆಯ ಡಾ.ಕಾಮಾಕ್ಷಿ ಮಾತನಾಡಿದರು. ಜಿಲ್ಲಾ ಮಹಿಳಾ ಸಬಲೀಕರಣ ಘಟಕದಿಂದ ದೊರೆಯುವ ಯೋಜನೆಗಳು ಕುರಿತು ಮಿಷನ್ ಶಕ್ತಿ ಯೋಜನೆಯ ರಶ್ಮಿ ಮಾತನಾಡಿದರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಮಹಿಳಾ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ದಿನೇಶ್ ಇತರರು ಉಪಸ್ಥಿತರಿದ್ದರು. ಮಹಿಳಾ ಇಲಾಖೆ ಅಭಿವೃದ್ಧಿ ಅಧಿಕಾರಿ ಆರ್.ಜೆ.ಪವಿತ್ರ ಸ್ವಾಗತಿಸಿ, ವಂದಿಸಿದರು. ಮಿಷನ್ ಶಕ್ತಿ ಯೋಜನೆಯ ಚೈತ್ರ ಕಾರ್ಯಕ್ರಮ ನಿರೂಪಿಸಿದರು.