ಸಾರಾಂಶ
ಜನಗಣತಿಗೆ ಕಾಂಗ್ರೆಸ್ ಸರ್ಕಾರ ಜನರ ನಂಬಿಕೆ ಕಳೆದುಕೊಂಡಿದೆ. ಮತ್ತೆ ಸಿದ್ದರಾಮಯ್ಯ ಅವರು ತಮ್ಮ ಖುರ್ಚಿಗಾಗಿ ಸಮೀಕ್ಷೆಗೆ ಮುಂದಾಗಿದ್ದಾರೆ - ಪಿ.ಸಿ.ಮೋಹನ್
ಕೋಲಾರ : ಸಿಎಂ ಸಿದ್ದರಾಮಯ್ಯ ಕುರ್ಚಿ ಅಲುಗಾಡಿದಾಗ ಮಾತ್ರ ಜಾತಿ ಗಣತಿ ವಿಚಾರ ಮುಂದೆ ಬರುತ್ತದೆ. ಆದರೆ ಕೇಂದ್ರ ಸರ್ಕಾರ ಈ ಬಾರಿ 2027ಕ್ಕೆ ಜಾತಿ ಗಣತಿ ವರದಿ ನೀಡಲಿದೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದರು.
ಕೋಲಾರದಲ್ಲಿ ಜನ ಮತ್ತು ಜನಗಣತಿ ಕಾರ್ಯಕ್ರಮದ ಕುರಿತು ಅಭಿಪ್ರಾಯ ಸಂಗ್ರಹಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಳೆದ 2 ವರ್ಷದಿಂದ ಎರಡ್ಮೂರು ಬಾರಿ ಕ್ಯಾಬಿನೆಟ್‌ನಲ್ಲೂ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಮಂಡಿಸಲಿಲ್ಲ, ದೆಹಲಿ ನಾಯಕರು ಬೇಡ ಎಂದಿದ್ದಾರೆ ಎಂದು ಕಾರಣ ಹೇಳಿದ್ದರು ಎಂದರು.ಖುರ್ಚಿಗಾಗಿ ಹೊಸ ಸಮೀಕ್ಷೆ
ಈಗ ಹೊಸ ಸಮೀಕ್ಷೆ ಮಾಡುತ್ತೇನೆ ಎನ್ನುತ್ತಿದ್ದಾರೆ, ಜನಗಣತಿಗೆ ಕಾಂಗ್ರೆಸ್ ಸರ್ಕಾರ ೩೦೦ ಕೋಟಿ ಖರ್ಚು ಮಾಡಿ ಜನರ ನಂಬಿಕೆ ಕಳೆದುಕೊಂಡಿದೆ. ಇವರು ಹಿಂದುಳಿದ ವರ್ಗಗಳ ಪರ ಇಲ್ಲ, ಇವತ್ತಲ್ಲ ನೆಹರು ಕಾಲದಿಂದಲೂ ಸಹ ಕಾಂಗ್ರೆಸ್ ಪಕ್ಷ ಇದೇ ರೀತಿ ಮಾಡುತ್ತಿದೆ, ಸಮೀಕ್ಷೆಗಳನ್ನೆಲ್ಲಾ ಕಸದ ಬುಟ್ಟಿಗೆ ಹಾಕಿದ್ದಾರೆ. ಮತ್ತೆ ಸಿದ್ದರಾಮಯ್ಯ ಅವರು ತಮ್ಮ ಖುರ್ಚಿಗಾಗಿ ಸಮೀಕ್ಷೆಗೆ ಮುಂದಾಗಿದ್ದಾರೆ, ಕೇಂದ್ರ ಸರ್ಕಾರ ೨೦೨೭ಕ್ಕೆ ಸಮೀಕ್ಷೆ ಮಾಡಲಿದೆ ಅದರ ಭಾಗವಾಗಿ ಇಂದು ಸಮೀಕ್ಷೆ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ ಎಂದರು.
ಜನ ಮತ್ತು ಜಾತಿ ಗಣತಿ ಕುರಿತು ಸಭೆ ಬಿಜೆಪಿ ಓಬಿಸಿ ಮುಖಂಡರಿಂದ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಈ ಹಿಂದೆ ಬೆಂಗಳೂರಿನಲ್ಲಿ ಸಭೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿರುವ ಮುಖಂಡರು, 64 ವರ್ಷಗಳ ನಂತರ ಜಾತಿ ಮತ್ತು ಜನ ಗಣತಿಗೆ ಕೇಂದ್ರ ಮುಂದಾಗಿದೆ. ಆದರೆ 10 ವರ್ಷಕ್ಕೆ ಒಮ್ಮೆ ಈ ಗಣತಿ ನಡೆಯಬೇಕಿತ್ತು, ಆದರೆ ಕಾಂಗ್ರೆಸ್‌ನವರು 60 ವರ್ಷದಿಂದ ಸಮೀಕ್ಷೆ ಮಾಡಿಲ್ಲ. ಹಾಗಾಗಿ ಮೋದಿ ಸರ್ಕಾರ ಮಾಡಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.
ಸಿಎಂ ಆಗಲು ಡಿಕೆಶಿ ಟೆಂಪಲ್ ರನ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯದಿಂದ ಸಾಗಾಕಲು ರಾಷ್ಟ್ರೀಯ ಒಬಿಸಿ ಸಲಹಾ ಮಂಡಳಿಯಲ್ಲಿ ಹುದ್ದೆ ಸೃಷ್ಟಿ ಮಾಡಲಾಗಿದೆ. ಕಾಂಗ್ರೆಸ್‌ನಲ್ಲಿ ಒಳ ಜಗಳ ನಡೆಯುತ್ತಿದೆ, ಕೆಲವು ಶಾಸಕರು ಗ್ಯಾರಂಟಿ ನಿಲ್ಲಿಸಿ ಅಂತ ಹೇಳಿದರೆ ಮತ್ತೆ ಕೆಲವರು ಅಭಿವೃದ್ದಿಗೆ ಹಣ ಕೊಡುತ್ತಿಲ್ಲ ಸಿದ್ದರಾಮಯ್ಯ ಹೋಗಬೇಕು ಅಂತಾರೆ. ಇನ್ನು ಡಿಕೆಶಿ ದೇವಾಲಯಗಳು ತಿರುಗಿ ಸಿಎಂ ಆಗಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು,
ಇವೆಲ್ಲಾ ನೋಡಿದರೆ ಕೇಂದ್ರದಲ್ಲಿ ಅಧಿಕಾರವಿಲ್ಲ, ಸಿದ್ದರಾಮಯ್ಯ ಸಿಎಂ ಆಗಿ 7 ವರ್ಷವಿದ್ದು ಏನೂ ಮಾಡಿಲ್ಲ, ರಾಷ್ಟ್ರೀಯ ಪದವಿ ತೆಗೆದುಕೊಂಡು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರಲ್ಲದೆ ಸಿಎಂ ಪದವಿಯಿಂದ ತೆಗೆಯಲು ಹುದ್ದೆ ಕೊಡುತ್ತಿದ್ದಾರೆ ಎಂದರು.
ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್
ಬಿಜೆಪಿ ರೆಬಲ್ ಮುಖಂಡರ ಕುರಿತು ಮಾತನಾಡಿದ ಅವರು, ಹೈಕಮಾಂಡ್ ಸ್ಟ್ರಾಂಗ್ ಇದೆ, ಮುಂದೆ ಎಲ್ಲವೂ ಸರಿ ಹೋಗುತ್ತೆ. ವಿಜಯೇಂದ್ರ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ, ವಿಜಯೇಂದ್ರ ಒಳ್ಳೆ ಕೆಲಸ ಮಾಡುತ್ತಿದ್ದಾರೆ, ಕೆಲವರು ಅಭಿಪ್ರಾಯ ಹೇಳುತ್ತಿದ್ದಾರೆ, ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.