ಜಾನುವಾರುಗಳಿಗೆ ಮೇವು, ನೀರು ಸಿಗದೇ ಹೈರಾಣು

| Published : Mar 29 2024, 12:47 AM IST

ಸಾರಾಂಶ

ಕಳೆದ ಒಂದು ವರ್ಷದ ಹಿಂದೆ ಮನೆಯಲ್ಲಿ ಕೂಡಿಟ್ಟ ಅಲ್ಪ ಹಣ ಮತ್ತು ಬ್ಯಾಂಕ್‌ನಿಂದ ಪಡೆದ ಸಾಲದಿಂದ ಹೈನುಗಾರಿಕೆ ಪ್ರಾರಂಭಿಸಿದ ಅನ್ನದಾತ ಜಾನುವಾರುಗಳಿಗೆ ಸರಿಯಾಗಿ ಹೊಟ್ಟು,ಮೇವು ಸಿಗದೇ ಮಾರಾಟ ಮಾಡಲು ಮುಂದಾಗಿದ್ದಾರೆ.

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ಜಾನುವಾರುಗಳಿಗೆ ತಿನ್ನಲು ಹೊಟ್ಟಿಲ್ಲ, ಕುಡಿಯಲು ನೀರಿಲ್ಲ, ಮನೆಯಲ್ಲಿದ್ದ ಶೇಂಗಾ ಹೊಟ್ಟು, ಸೊಪ್ಪು ಖಾಲಿಯಾಗಿದೆ. ಜಾನುವಾರುಗಳನ್ನು ಮಾರಾಟ ಮಾಡುವ ಸ್ಥಿತಿ ರೈತರಿಗೆ ಬಂದೊದಗಿದೆ.

ಕಳೆದ ಒಂದು ವರ್ಷದ ಹಿಂದೆ ಮನೆಯಲ್ಲಿ ಕೂಡಿಟ್ಟ ಅಲ್ಪ ಹಣ ಮತ್ತು ಬ್ಯಾಂಕ್‌ನಿಂದ ಪಡೆದ ಸಾಲದಿಂದ ಹೈನುಗಾರಿಕೆ ಪ್ರಾರಂಭಿಸಿದ ಅನ್ನದಾತ ಜಾನುವಾರುಗಳಿಗೆ ಸರಿಯಾಗಿ ಹೊಟ್ಟು,ಮೇವು ಸಿಗದೇ ಮಾರಾಟ ಮಾಡಲು ಮುಂದಾಗಿದ್ದಾರೆ. ₹೨೦, ೨೫ ಸಾವಿರ ಖರ್ಚು ಮಾಡಿ ಪಡೆದ ಜಾನುವಾರುಗಳನ್ನು ಮಾರಲು ಹೋದರೆ ₹೫ ಸಾವಿರ ಬೆಲೆ ಕಟ್ಟುತ್ತಿದ್ದಾರೆ. ಹೀಗೆ ಮಳೆರಾಯ ಕೈಕೊಟ್ಟರೆ ಮುಂದೆ ಬದುಕುವುದು ಕಷ್ಟವಾಗುತ್ತದೆ ಎಂದು ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಗೆ ಮಾಡುತ್ತಿರುವ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಹಾಲಿಗೂ ಬರ: ದಿನಕ್ಕೆ ೬ ಲೀಟರ್ ಹಾಲು ಹಿಂಡುವ ಎಮ್ಮೆ ಹೊಟ್ಟೆಗೆ ಮೇವಿಲ್ಲದೇ ಕೇವಲ ೨ ಲೀಟರ್ ಹಿಂಡುತ್ತಿವೆ ಎಂದು ರೈತರು ಹೇಳುತ್ತಿದ್ದು, ಹೈನುಗಾರಿಕೆ ನಂಬಿಕೊಂಡಿದ್ದ ಗ್ರಾಮದ ಬಹುತೇಕ ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿ ಬಂದಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಹೈನುಗಾರಿಕೆಯಿಂದಲೇ ಮನೆತನ ಸಾಗುತ್ತಿತ್ತು. ಮಾಡಿದ ಸಾಲವೂ ತೀರುತ್ತಿತ್ತು. ಸಾಲ-ಸೊಲ ಮಾಡಿ ಹೈನುಗಾರಿಕೆ ಮಾಡಲು ಮುಂದಾದ ನಮಗೆ ಈ ಬಾರಿ ಮಳೆ ಕೊರತೆಯಿಂದ ಕಷ್ಟ ಅನುಭವಿಸುವಂತಾಗಿದೆ. ಎಮ್ಮೆ ಕರುವಿಗೂ ಹಾಲಿಲ್ಲ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದು, ಹಾಲಿಗಾಗಿ ಪರದಾಡುತ್ತಿವೆ ಎನ್ನುತ್ತಾರೆ ರೈತರು.

ಬರಗಾಲ ಸಮಸ್ಯೆಗೆ ಸ್ಪಂದಿಸಿ: ಮೂಕ ಪ್ರಾಣಿಗಳ ಗೋಳನ್ನು ತಾಲೂಕಾಡಳಿತ ಗಮನಿಸಬೇಕು. ಹೈನುಗಾರಿಕೆ ಮಾಡುವ ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಸರ್ಕಾರ ಬರಗಾಲ ನಿರ್ವಹಣೆಗೆಂದು ಸಾಕಷ್ಟು ಅನುದಾನ ನೀಡಿದ್ದರೂ ಯಾತಕ್ಕಾಗಿ ಬಳಕೆಯಾಗುತ್ತಿದೆ ಎಂಬುದು ತಿಳಿಯದಾಗಿದ್ದು, ಸಮರ್ಪಕವಾಗಿ ಬರಗಾಲ ಸಮಸ್ಯೆಗೆ ಸ್ಪಂದಿಸಿ ರೈತರಿಗೆ ಮತ್ತು ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮೇವನ್ನು ಪೂರೈಕೆ ಮಾಡಬೇಕು ಎಂದು ತಾಲೂಕಿನ ರೈತರು ಆಗ್ರಹಿಸಿದ್ದಾರೆ.

ನಿತ್ಯ ಅಡವಿಗೆ ಮೇಯಲು ಹೋಗುತ್ತಿರುವ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಕೆರೆ, ಹಳ್ಳ ರೈತರ ಜಮೀನುಗಳಲ್ಲಿರುವ ಬಹುತೇಕ ಕೊಳವೆ ಬಾವಿಗಳು ಬತ್ತಿದ್ದು, ನಿತ್ಯ ಸುಡುಬಿಸಿಲಿನಲ್ಲಿ ಕುಡಿಯಲು ನೀರು ಸಿಗದೇ ಜಾನುವಾರುಗಳು ಗೋಳಾಡುತ್ತಿವೆ. ದನಕರುಗಳಿಗೆ ಹೊಟ್ಟು ಮೇವು ಪೂರೈಕೆ, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಈ ಹಿಂದೆಯೇ ತಹಸೀಲ್ದಾರ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇವತ್ತಿನ ವರೆಗೂ ಯಾವುದೇ ಗ್ರಾಪಂಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ಜಿಲ್ಲಾಧಿಕಾರಿಗಳು ಪದೇ ಪದೇ ಸಭೆ ಕರೆದು ಅಧಿಕಾರಿಗಳನ್ನು ಎಚ್ಚರಗೊಳಿಸಿದರೂ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡುತ್ತಿಲ್ಲ ಎಂದು ರೈತ ಮುಖಂಡ ಜಾನು ಲಮಾಣಿ ಹೇಳಿದರು.

ತಾಲೂಕಿನಲ್ಲಿ ೫.೨೬೮ ಎಮ್ಮೆ, ೧೨.೯೩೦ ಎತ್ತು ಮತ್ತು ಆಕಳುಗಳು ಸೇರಿದಂತೆ ಒಟ್ಟು ೧೮.೧೯೮ ಜಾನುವಾರುಗಳಿವೆ. ಇವಲ್ಲದೇ ೩.೦೭೦, ೬ ತಿಂಗಳ ಕರುಗಳಿವೆ. ಸಧ್ಯ ಬೇಸಿಗೆ ಕಾಲವಾಗಿದ್ದರಿಂದ ಕುಡಿವ ನೀರು, ಹೊಟ್ಟು, ಮೇವಿನ ತೊಂದರೆ ಆಗುತ್ತಿದೆ. ೨೦೨೩-೨೪ನೇ ಸಾಲಿನ ಬರಗಾಲ ನಿರ್ವಹಣೆ ಸಂಬಂಧಿಸಿದಂತೆ ಶಿರಹಟ್ಟಿ ತಾಲೂಕಿನ ಜಾನುವಾರುಗಳಿಗೆ ಬೇಡಿಕೆಗೆ ಅನುಗುಣವಾಗಿ ಮೇವು ಪೂರೈಕೆ ಮಾಡುವ ಸಲುವಾಗಿ ಸಧ್ಯಕ್ಕೆ ೧೦ಟನ್‌ಗಳಷ್ಟು ಮೇವನ್ನು ಪೂರೈಕೆ ಮಾಡಬೇಕೆಂದು ತಹಸೀಲ್ದಾರ ಅವರಿಗೆ ಲಿಖಿತ ಪತ್ರ ಬರೆಯಲಾಗಿದೆ. ಯಾವುದೇ ಉತ್ತರ ಅವರಿಂದ ಬಂದಿಲ್ಲ ಎಂದು ತಾಲೂಕು ಪಶು ಆಸ್ಪತ್ರೆ ಪ್ರಭಾರಿ ವೈದ್ಯಾಧಿಕಾರಿ ಡಾ.ನಿಂಗಪ್ಪ ಓಲೇಕಾರ ಹೇಳಿದ್ದಾರೆ.