ಸಿಬಿಎಸ್ಸಿಯಲ್ಲಿ ಮಾತೃಭಾಷಾ ಕಲಿಕೆ ಸೇರಿ ನಾಲ್ಕು ನಿರ್ಣಯ

| Published : Jul 10 2025, 12:45 AM IST

ಸಿಬಿಎಸ್ಸಿಯಲ್ಲಿ ಮಾತೃಭಾಷಾ ಕಲಿಕೆ ಸೇರಿ ನಾಲ್ಕು ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಸ್ಸಿ ಎಲ್ಲ ಸಂಯೋಜಿತ ಶಾಲೆಗಳಲ್ಲಿ ಮಾತೃಭಾಷೆ ಕಲಿಸುವ ಆದೇಶ ಅನ್ವಯಿಸುತ್ತದೆ. ಇದರಿಂದ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಸುಲಭವಾಗಿ ಕಲಿಯಲು ಅನುಕೂಲ. ಇದೇ ಶೈಕ್ಷಣಿಕ ವರ್ಷದಿಂದ ಈ ಆದೇಶ ಪಾಲಿಸಲು ಸೂಚಿಸಿದರೂ ಕರ್ನಾಟಕದಲ್ಲಿ ಈ ಬಗ್ಗೆ ಸಾರ್ವಜನಿಕವಾಗಿ ಯಾರಿಗೂ ಮಾಹಿತಿ ಇರದೇ ಇರುವುದು ಖೇದಕರ ಸಂಗತಿ.

ಧಾರವಾಡ: ಸಿಬಿಎಸ್‍ಇ (CBSE) ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ಐದನೇ ತರಗತಿಯ ವರೆಗೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸುವುದು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಆದೇಶ ಹಿಂಪಡೆಯುವುದು. ಮಾತೃಭಾಷೆಗೆ ಇರುವ ಅಂಕಗಳನ್ನು ಕಡಿತಗೊಳಿಸದೇ 125 ಅಂಕಗಳಿಗೆ ಪರೀಕ್ಷೆ ನಡೆಸುವುದು ಹಾಗೂ ದ್ವಿಭಾಷಾ ನೀತಿ ಅನುಸರಿಸಬೇಕು ಎನ್ನುವ ನಾಲ್ಕು ನಿರ್ಣಯಗಳನ್ನು ರಾಜ್ಯ ಸರ್ಕಾರದ ಮುಂದಿಡಲು ಕರ್ನಾಟಕ ವಿದ್ಯಾವರ್ಧಕ ಸಂಘವು ಬುಧವಾರ ತೀರ್ಮಾನಿಸಿತು.

ಸಂಘದ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ಬುಧವಾರ ಶಿಕ್ಷಣ ತಜ್ಞರು, ಹಿರಿಯ ಸಾಹಿತಿಗಳು, ಚಿಂತಕರು, ಭಾಷಾ ತಜ್ಞರು ಹಾಗೂ ಕನ್ನಡ ಹೋರಾಟಗಾರರು ಸಭೆ ನಡೆಸಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಇದಕ್ಕೂ ಮುಂಚೆ ಶಿಕ್ಷಣ ಇಲಾಖೆಯ ನಿವೃತ್ತ ಅಪರ ಆಯುಕ್ತ ವೆಂಕಟೇಶ ಮಾಚಕನೂರ ಮಾತನಾಡಿ, ಸಿಬಿಎಸ್ಸಿ ಎಲ್ಲ ಸಂಯೋಜಿತ ಶಾಲೆಗಳಲ್ಲಿ ಮಾತೃಭಾಷೆ ಕಲಿಸುವ ಆದೇಶ ಅನ್ವಯಿಸುತ್ತದೆ. ಇದರಿಂದ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಸುಲಭವಾಗಿ ಕಲಿಯಲು ಅನುಕೂಲ. ಇದೇ ಶೈಕ್ಷಣಿಕ ವರ್ಷದಿಂದ ಈ ಆದೇಶ ಪಾಲಿಸಲು ಸೂಚಿಸಿದರೂ ಕರ್ನಾಟಕದಲ್ಲಿ ಈ ಬಗ್ಗೆ ಸಾರ್ವಜನಿಕವಾಗಿ ಯಾರಿಗೂ ಮಾಹಿತಿ ಇರದೇ ಇರುವುದು ಖೇದಕರ ಸಂಗತಿ ಎಂದರು.

ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಸಿದ್ರಾಮ ಮನಹಳ್ಳಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಇರಬೇಕು ಎಂದಿದೆ. ಮಾಧ್ಯಮಿಕ ಶಿಕ್ಷಣದಲ್ಲಿ ಉಳಿದ ಭಾಷೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಈ ನೀತಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾದರೇ ಮಾತೃಭಾಷೆಗೆ ಅನುಕೂಲ ಆಗಲಿದೆ. ಕನ್ನಡ ಭಾಷೆಗೆ ಮನ್ನಣೆ ದೊರೆಯುತ್ತದೆ ಎಂಬ ಅಭಿಪ್ರಾಯ ತಿಳಿಸಿದರು.

ಸಂಘದ ಕಾರ್ಯಾಧ್ಯಕ್ಷ ಸಂಜೀವ ಕುಲಕರ್ಣಿ, ಕನ್ನಡ ಅಸ್ಮಿತೆಯನ್ನು ಪ್ರಶ್ನಿಸುವ ಯಾವುದೇ ವಿಷಯವನ್ನು ವಿದ್ಯಾವರ್ಧಕ ಸಂಘ ಸಹಿಸುವುದಿಲ್ಲ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರವ ನಿಟ್ಟಿನಲ್ಲಿ ಪ್ರಯತ್ನ ಆಗಲಿ ಎಂದು ತಿಳಿಸಿದರು. ಶಿಕ್ಷಣ ತಜ್ಞ ಶಾಂತಿನಾಥ ದಿಬ್ಬದ, ಹಿರಿಯ ಸಾಹಿತಿ ಮಾಲತಿ ಪಟ್ಟಣಶೆಟ್ಟಿ, ಸಾಹಿತಿ ವೀರಣ್ಣ ರಾಜೂರ ಮಾತನಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸಭೆಯ ನಿರ್ಣಯಗಳನ್ನು ಮಂಡಿಸಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ವಿಶ್ವೇಶ್ವರಿ ಹಿರೇಮಠ, ನಿಂಗಣ್ಣ ಕುಂಠಿ, ಡಾ. ಡಿ.ಎಂ. ಹಿರೇಮಠ, ಡಾ. ಸಂಜೀವ ಕುಲಕರ್ಣಿ, ರಾಜೇಶ್ವರಿ ಮಹೇಶ್ವರಯ್ಯ, ಧನವಂತ ಹಾವಜೋಳ ಶಿವಾನಂದ ಭಾವಿಕಟ್ಟಿ, ಕೆ.ಎಚ್ ನಾಯಕ, ಗುರು ತಿಗಡಿ, ಚಂದ್ರಶೇಖರ ರೊಟ್ಟಿಗವಾಡ, ಸತೀಶ ತುರಮರಿ ಇತರರು ಇದ್ದರು.