ಶ್ರದ್ಧಾ, ಭಕ್ತಿಯಿಂದ ಗುಡ್ ಫ್ರೈಡೆ ಆಚರಣೆ

| Published : Mar 30 2024, 12:49 AM IST

ಸಾರಾಂಶ

ಬೆಳಗ್ಗೆ ಚರ್ಚ್‌ನಲ್ಲಿ ಗುರು ಫ್ರಾನ್ಸಿಸ್ ಮಿರಾಂಡಾ ಅವರ ಸಾನ್ನಿಧ್ಯದಲ್ಲಿ ಧಾರ್ಮಿಕ ಪೂಜಾವಿಧಿಗಳು ನಡೆದವು.

ಹಳಿಯಾಳ: ಪ್ರಭು ಯೇಸು ಕ್ರಿಸ್ತರು ಮಾನವ ಕುಲದ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನೇ ಬಲಿಯಾಗಿ ಅರ್ಪಿಸಿದ ಪವಿತ್ರ ದಿನವಾದ ಗುಡ್ ಫ್ರೈಡೆ(ಶುಭ ಶುಕ್ರವಾರ)ಯನ್ನು ಪಟ್ಟಣದ ಮಿಲಾಗ್ರಿಸ್ ಚರ್ಚ್‌ನಲ್ಲಿ ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಕ್ರೈಸ್ತರು ಗುಡ್ ಫ್ರೈಡೆ ಪೂಜಾವಿಧಿಯಲ್ಲಿ ಭಕ್ತಿಯಿಂದ ಪಾಲ್ಗೊಂಡರು.

ಬೆಳಗ್ಗೆ ಚರ್ಚ್‌ನಲ್ಲಿ ಗುರು ಫ್ರಾನ್ಸಿಸ್ ಮಿರಾಂಡಾ ಅವರ ಸಾನ್ನಿಧ್ಯದಲ್ಲಿ ಧಾರ್ಮಿಕ ಪೂಜಾವಿಧಿಗಳು ನಡೆದವು. ಯೇಸು ಕ್ರಿಸ್ತರು ತಮ್ಮ ಅಂತ್ಯಾವಧಿಯಲ್ಲಿ ಎದುರಿಸಿದ ಕಷ್ಟ ಸಂಕಷ್ಟ ಶೋಷಣೆಗಳನ್ನು ಸ್ಮರಿಸುವ ಶಿಲುಬೆಯ ಮಾರ್ಗ ಅಧ್ಯಾತ್ಮ ಪೂಜಾ ವಿಧಿಯನ್ನು ನಡೆಸಿ, ಜಾಗತಿಕವಾಗಿ ಶಾಂತಿ ನೆಲೆಸಲು ವಿಶೇಷವಾಗಿ ಪ್ರಾರ್ಥಿಸಲಾಯಿತು. ಮಧ್ಯಾಹ್ನ ಚರ್ಚ್‌ನಲ್ಲಿ ಗುಡ್ ಫ್ರೈಡೆಯ ಧಾರ್ಮಿಕ ಪೂಜಾ ವಿಧಿಗಳು ಜರುಗಿದವು.

ಎಲ್ಲೆಡೆ ಆಚರಣೆ: ಗ್ರಾಮಾಂತರ ಭಾಗಗಳಾದ ಮಂಗಳವಾಡದ ಸಂತ ಸೆಬೆಸ್ಟಿಯನ್ ಚರ್ಚ್‌ನಲ್ಲಿ ಗುರು ನಾತ್ವಿದಾದ, ಯಡೋಗಾದ ಸಂತ ಅನ್ನಾ ಚರ್ಚ್‌ನಲ್ಲಿ ಬ್ಯಾಪ್ಟಿಸ್ಟ್ ಗೋಮ್ಸ್, ಗುಂಡೋಳ್ಳಿಯ ಸಂತ ಅಂತೋನಿ ಚರ್ಚ್‌ನಲ್ಲಿ ಗುರು ನೋಯಲ್ ಪ್ರಕಾಶ, ಗರಡೊಳ್ಳಿಯ ಚರ್ಚನಲ್ಲಿ ಗುರು ರೋನಾಲ್ಡೋ ಪೂಜಾ ವಿಧಿಯನ್ನು ನೆರವೇರಿಸಿ ಜಾಗತಿಕ ಶಾಂತಿಗಾಗಿ, ನಮ್ಮ ಜನಪ್ರತಿನಿಧಿಗಳಿಗಾಗಿ, ಆಡಳಿತಾಧಿಕಾರಿಗಳಿಗಾಗಿ, ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು.

ದಿವ್ಯ ಮೂರ್ತಿಯ ದರ್ಶನ: ಸುಮಾರು ನೂರಕ್ಕು ಹೆಚ್ಚು ವರ್ಷಗಳ ಇತಿಹಾಸವಿರುವ ಯೇಸು ಕ್ರಿಸ್ತರ ಪವಿತ್ರ ಕಳೆಬರದ ಹಾಗೂ ಮಾತೆ ಮೇರಿಯ ಪವಿತ್ರ ಮೂರ್ತಿಯಯನ್ನು ಗುಡ್ ಫ್ರೈಡೆ ನಿಮಿತ್ತ ಸಾರ್ವಜನಿಕರ ದರ್ಶನಕ್ಕಾಗಿ ತೆರೆದಿಡಲಾಯಿತು. ಗ್ರೀಕ್ ರೋಮನ್ ಶೈಲಿಯಲ್ಲಿ ಕೈಯಿಂದಲೇ ಮರದಲ್ಲಿ ನಿರ್ಮಿಸಿದ ಈ ಮೂರ್ತಿಯನ್ನು ವಿದೇಶದಿಂದ ಹಿಂದೆ ಆಮದು ಮಾಡಿಕೊಳ್ಳಲಾಗಿತ್ತು ಎಂಬ ಚರ್ಚ್‌ ಇತಿಹಾಸ ಹೇಳುತ್ತದೆ. ಯೇಸು ಕ್ರಿಸ್ತರ ಮೂರ್ತಿ 6 ಅಡಿ ಹಾಗೂ ಮಾತೆ ಮೇರಿಯ ಮೂರ್ತಿ 5 ಅಡಿ ಇದೆ.