ಸಾರಾಂಶ
ತಿಪಟೂರು
ತೆರಿಗೆ ಹಂಚಿಕೆ ಹಾಗೂ ಬರ ಪರಿಹಾರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಲವಾರು ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.ತಾಲೂಕಿನ ಕೆ.ಬಿ.ಕ್ರಾಸ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಒಕ್ಕೂಟ ವ್ಯವಸ್ಥೆ ಸಂವಿಧಾನದಲ್ಲಿದೆ. ರಾಜ್ಯ ಸರ್ಕರಗಳಿಗೆ ಏನು ಅಧಿಕಾರ ಇದೆ ಎಂದು ಅದರಲ್ಲಿದೆ. ಮೋದಿ ಸರ್ಕಾರಕ್ಕೆ ಒಕ್ಕೂಟವ್ಯವಸ್ಥೆಯಲ್ಲಿ ನಂಬಿಕೆ ಇರುವ ಹಾಗೆ ಕಾಣುತ್ತಿಲ್ಲ.
ಎನ್‌ಆರ್‌ಡಿಎಫ್ ಪ್ರತಿ ವರ್ಷ ನಿಗದಿ ಮಾಡಿರುವ ಹಣವನ್ನು ಕೂಡ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸರಿಯಾಗಿ ನೀಡುತ್ತಿಲ್ಲ. ಹಿಂದೆ ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ರಾಜ್ಯಕ್ಕೆ ನೆರಹಾವಳಿ ವಿಶೇಷ ಅನುದಾನ 2000 ಕೋಟಿ ಬಿಡುಗಡೆ ಮಾಡಿತ್ತು. ಈಗ ಭೀಕರ ಬರಗಾಲವಿದ್ದು ಕೇಂದ್ರದ ತಂಡ ಪರಿಶೀಲನೆ ಮಾಡಿಕೊಂಡು ಹೋದರೂ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಹಾಗಾಗಿ ಕೇರಳ, ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳು ಕೇಂದ್ರದ ವಿರುದ್ಧ ಸುಪ್ರೀಂ ಮೊರೆಹೋಗಿದ್ದು, ಕೇಂದ್ರ ರಾಜ್ಯದ ಜನರಿಗೆ ಮಾಡುತ್ತಿರುವ ಅನ್ಯಾಯ ಇದಾಗಿದೆ ಎಂದು ತಿಳಿಸಿದರು.
14 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್‌ನಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಗೃಹಸಚಿವ ಪರಮೇಶ್ವರ್ ತಿಳಿಸಿದರು. ಅವರ ಜೊತೆ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ರಾಜಣ್ಣ, ಜಿಲ್ಲೆಯ ಎಲ್ಲ ಶಾಸಕರೂ, ಕಾಂಗ್ರೆಸ್ ಪಕ್ಷದ ತುಮಕೂರು ಅಭ್ಯರ್ಥಿ ಮುದ್ದಹನುಮೇಗೌಡ ಹಾಗೂ ನಾಲ್ಕು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎಲ್ಲಾ ಕ್ಷೇತ್ರಗಳಿಗೆ ಸಿಎಂ ಭೇಟಿಗೆ ಬೇಡಿಕೆ ಇದ್ದು ಸಮಯದ ಅಭಾವದ ಕಾರಣ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ಗುಬ್ಬಿ ಕ್ಷೇತ್ರಗಳಿಗೆ ಹತ್ತಿರವಾದ ಕೆ.ಬಿ.ಕ್ರಾಸ್‌ನಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದ ಅವರು ಸುದ್ದಿಗೋಷ್ಟಿಯ ನಂತರ ಸಮಾರಂಭದ ವ್ಯವಸ್ಥೆ, ಪೆಂಡಾಲ್ ಹಾಗೂ ವೇದಿಕೆ ಸ್ಥಳವನ್ನು ಪರಿಶೀಲಿಸಿ ಸೂಚನೆಗಳನ್ನು ನೀಡಿದರು. ಆಹಾರ ಸಚಿವ ಮುನಿಯಪ್ಪ ಮಾತನಾಡಿ, ತುಮಕೂರು ಕ್ಷೇತ್ರದ ಅಭ್ಯರ್ಥಿ ಮುದ್ದಹನುಮೇಗೌಡ ಉತ್ತಮ ಸಂಸದೀಯ ಪಟುವಾಗಿದ್ದು, ಅವರನ್ನು ಗೆಲ್ಲಿಸಿದರೆ ಕ್ಷೇತ್ರ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ದನಿ ಎತ್ತುವುದಲ್ಲದೆ, ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಿದ್ದಾರೆ.
ರಾಜ್ಯಕ್ಕೆ ಕ್ಷೇತ್ರಕ್ಕೆ ಬರಬೇಕಿರುವ ಅನುದಾನ, ಪ್ರಾಜೆಕ್ಟ್‌ಗಳು ಬಗ್ಗೆ ಅವರಿಗೆ ವಿಶೇಷ ಕಾಳಜಿ ಇದೆ. ಅವರನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಾವು ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಿರುವುದರಿಂದ ನಮಗೆ ಮತ ಕೇಳುವ ಹಕ್ಕಿದೆ ಎಂದು ತಿಳಿಸಿದರು ಶಾಸಕ ಕೆ.ಷಡಕ್ಷರಿ, ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಗುಬ್ಬಿ, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ಮತ್ತು ತಿಪಟೂರು ಬ್ಲಾಕ್ ಕಾಂಗ್ರೆಸ್ ಮುಖಂಡರುಗಳು, ಮತ್ತಿತರರು ಉಪಸ್ಥಿತರಿದ್ದರು