ಮೇಕೆದಾಟು, ಮಹದಾಯಿ ಯೋಜನೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಲಕ್ಷ್ಯ: ಆರೋಪ

| Published : Feb 21 2025, 11:47 PM IST

ಮೇಕೆದಾಟು, ಮಹದಾಯಿ ಯೋಜನೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಲಕ್ಷ್ಯ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಕ್ಕೆ ಬಿಜೆಪಿ ಸರ್ಕಾರ ಅವಕಾಶ ನೀಡುತ್ತಿಲ್ಲ. ಮೇಕೆದಾಟು ಯೋಜನೆಗೆ ಪರಿಸರ ಮೌಲ್ಯಮಾಪನ ಪ್ರಮಾಣಪತ್ರ ನೀಡದೆ ತಮಿಳುನಾಡು ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಅದೇ ರೀತಿ ಮಹದಾಯಿ ಯೋಜನೆಗೂ ಹಸಿರುನಿಶಾನೆ ತೋರದೆ ಕಳ್ಳಾಟವಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ರೈತರಿಗೆ ಅನುಕೂಲಕರವಾಗಿರುವ ಮೇಕೆದಾಟು ಅಣೆಕಟ್ಟು ಹಾಗೂ ಮಹದಾಯಿ ಯೋಜನೆಗಳಿಗೆ ಅನುಮತಿ ನೀಡದ ಕೇಂದ್ರ ಸರ್ಕಾರ, ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಾ ರೈತ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರ ಕೆ.ಎನ್.ದೀಪಕ್ ಆರೋಪಿಸಿದ್ದಾರೆ.

ರೈತರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಕ್ಕೆ ಬಿಜೆಪಿ ಸರ್ಕಾರ ಅವಕಾಶ ನೀಡುತ್ತಿಲ್ಲ. ಮೇಕೆದಾಟು ಯೋಜನೆಗೆ ಪರಿಸರ ಮೌಲ್ಯಮಾಪನ ಪ್ರಮಾಣ ಪತ್ರ ನೀಡದೆ ತಮಿಳುನಾಡು ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಅದೇ ರೀತಿ ಮಹದಾಯಿ ಯೋಜನೆಗೂ ಹಸಿರುನಿಶಾನೆ ತೋರದೆ ಕಳ್ಳಾಟವಾಡುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ವಿರುದ್ಧ ಷಡ್ಯಂತ್ರದ ಭಾಗವಾಗಿ ವರ್ತಿಸುತ್ತಿದ್ದಾರೆ. ಇವರಿಗೆ ಕರ್ನಾಟಕ ರೈತರ ಬಗ್ಗೆ ಕಾಳಜಿ ಇಲ್ಲ. ಅದೇ ರೀತಿಯಾಗಿ ದೇವೇಗೌಡರು ಸಹ ಕಳೆದ ಚುನಾವಣೆಯಲ್ಲಿ ಮೇಕೆದಾಟು ಮತ್ತು ಮಹಾದಾಯಿ ಯೋಜನೆಗೆ ಒಂದೇ ದಿನದಲ್ಲಿ ಸಹಿ ಹಾಕಿಸಿಕೊಂಡು ಬರುತ್ತೇನೆಂದು ಹೇಳಿದ ದೇವೇಗೌಡರು ರಾಜ್ಯಸಭೆಯಲ್ಲಿ ಮೌನವಾಗಿ ಕುಳಿತುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಕುಮಾರಸ್ವಾಮಿ ಕೂಡ ಮೋದಿ ಎದುರು

ಕೈಕಟ್ಟಿ ಕುಳಿತುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಮಣ್ಣಿನ ಮಗನಂತೆ ಬಿಂಬಿಸಕೊಳ್ಳುವ ಇವರು ಮೇಕೆದಾಟು ಮತ್ತು ಮಹಾದಾಯಿ ಯೋಜನೆ ಅನುದಾನ ಮತ್ತು ಅನುಮತಿ ತರುವುದಕ್ಕೆ ಆಗುತ್ತಿಲ್ಲ. ವಿನಾಕಾರಣ ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡಿಕೊಂಡು ಕೇಂದ್ರದಲ್ಲಿ ಕಾಲ ಕಳೆಯುತ್ತಿದ್ದಾರೆ.

ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ನಮ್ಮ ರೈತರ ಬದುಕು ಕಟ್ಟುವುದಕ್ಕೆ ಮೇಕೆದಾಟು ಮತ್ತು ಮಹಾದಾಯಿ ಯೋಜನೆ ಅತ್ಯಗತ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳದೆ ಕೇವಲ ಕಾಟಾಚಾರದ ಹೇಳಿಕೆಗಳನ್ನು ನೀಡುತ್ತಿರುವುದನ್ನು ಖಂಡಿಸಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರಕ್ಕೆ ರಾಜ್ಯದ ರೈತ ಸಾಲ ಮನ್ನಾ ಮಾಡುವ ಮನಸ್ಸಿಲ್ಲ. ಅದೇ ಅದಾನಿ, ಅಂಬಾನಿ ಅವರ ಸಾಲ ಮನ್ನಾ ಮಾಡಲು ಹೆಚ್ಚು ಆಸಕ್ತಿ ತೋರುತ್ತಾರೆ. ಪ್ರಸ್ತುತ ದೇಶದಲ್ಲಿ ರೈತರು ಬಳಸುವ ಉಪಕರಣಗಳ ಬೆಲೆ ಗಗನಕ್ಕೇರಿದೆ. ರೈತರು ಬೆಳೆಯುವ ಬೆಳೆಗೆ ನಿಗದಿತ ಬೆಲೆಯನ್ನು ಕೊಡಿಸುವ ಯೋಗ್ಯತೆ ಕೇಂದ್ರದ ಬಿಜೆಪಿ ಸರ್ಕಾರಕ್ಕಿಲ್ಲ. ಇದೆಲ್ಲವನ್ನು ಮನಗಂಡ ಬಿಜೆಪಿ ಸರ್ಕಾರ ಕರ್ನಾಟಕದ ಮೇಕೆದಾಟು ಮತ್ತು ಮಹಾದಾಯಿ ಯೋಜನೆಗೆ ಅನುಮತಿ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದ್ದಾರೆ.