ಕೇಂದ್ರ ರೇಷ್ಮೆ ಸಂಶೋಧನೆ, ತರಬೇತಿ ಸಂಸ್ಥೆಯ ಕಾರ್ಯಾಗಾರಕ್ಕೆ ಚಾಲನೆ

| Published : Mar 07 2025, 11:47 PM IST

ಕೇಂದ್ರ ರೇಷ್ಮೆ ಸಂಶೋಧನೆ, ತರಬೇತಿ ಸಂಸ್ಥೆಯ ಕಾರ್ಯಾಗಾರಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಸುಸ್ಥಿರ ರೇಷ್ಮೆ ಕೃಷಿಗಾಗಿ ಕೃತಕ ಬುದ್ಧಿಮತ್ತೆ: ಸವಾಲುಗಳು ಮತ್ತು ಅವಕಾಶಗಳು ಕುರಿತು ಕಾರ್ಯಾಗಾರಕ್ಕೆ ಸಂಸ್ಥೆಯ ವಿಜ್ಞಾನಿಗಳು, ರೇಷ್ಮೆ ಇಲಾಖೆಯ ಅಧಿಕಾರಿಗಳು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಸುಸ್ಥಿರ ರೇಷ್ಮೆ ಕೃಷಿಗಾಗಿ ಕೃತಕ ಬುದ್ಧಿಮತ್ತೆ: ಸವಾಲುಗಳು ಮತ್ತು ಅವಕಾಶಗಳು ಕುರಿತು ಕಾರ್ಯಾಗಾರಕ್ಕೆ ಸಂಸ್ಥೆಯ ವಿಜ್ಞಾನಿಗಳು, ರೇಷ್ಮೆ ಇಲಾಖೆಯ ಅಧಿಕಾರಿಗಳು ಚಾಲನೆ ನೀಡಿದರು.

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ.ಎಸ್. ಬಾಲಸರಸ್ವತಿ ಮಾತನಾಡಿ, ಕೃತಕ ಬುದ್ಧಿಮತ್ತೆಯು ರೇಷ್ಮೆ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಬೆಳೆಸುವ ಒಂದು ಹೂಬಿಡುವ ತಂತ್ರಜ್ಞಾನವಾಗಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯ ತಾಂತ್ರಿಕ ನಿರ್ದೇಶಕರಾದ ಡಾ.ಎಸ್. ಮಂಥಿರಾ ಮೂರ್ತಿ ಮಾತನಾಡಿ, ಕೃತಕ ಬುದ್ಧಿಮತ್ತೆಯು ರೇಷ್ಮೆ ಕೃಷಿ ಅಭಿವೃದ್ಧಿಯಲ್ಲಿ ಬಹಳ ಮುಖ್ಯಪಾತ್ರ ವಹಿಸುತ್ತದೆ. ನಾವು ಇದನ್ನು ಸಮರ್ಪಕವಾಗಿ ಬಳಸಿಕೊಂಡು ರೇಷ್ಮೆ ಕೃಷಿಯ ಉತ್ಪಾದನೆಯನ್ನು ಹೆಚ್ಚಿಸಬೇಕೆಂದರು.

ಬಾಲಸುಬ್ರಮುನಿಯಮ್‌ ಅವರು ಸುಸ್ಥಿರ ರೇಷ್ಮೆ ಕೃಷಿಗಾಗಿ ಕೃತಕ ಬುದ್ಧಿಮತ್ತೆ ಕುರಿತು ಉಪನ್ಯಾಸ ನೀಡಿದರು. ತಮ್ಮ ಭಾಷಣದಲ್ಲಿ ರೇಷ್ಮೆ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ಪ್ರಸಾರ ಮಾಡಲು ಕಂಪ್ಯೂಟರ್ ಆಧಾರಿತ ಫಾರ್ಮ್ ಕಿಂಗ್ ಎಂಬ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಡಾ.ಎಂ.ಜಿ. ಯೋಗೇಶ್ ಅವರು ರೇಷ್ಮೆಕೃಷಿ ಕೃತಕ ಬುದ್ಧಿಮತ್ತೆ ಕುರಿತು ಉಪನ್ಯಾಸ ನೀಡಿದರು. ಭಾರತೀಯ ರೇಷ್ಮೆ ಕೃಷಿಯ ಸವಾಲುಗಳು ಮತ್ತು ಅವಕಾಶವನ್ನು ಮತ್ತು ರೇಷ್ಮೆಯ ಗುಣಮಟ್ಟದ ನಿಯಂತ್ರಣ, ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುಗಳ ರೋಗ, ಕೀಟ ನಿಯಂತ್ರಣ, ರೇಷ್ಮೆ ಉತ್ಪನ್ನಗಳ ಮಾರುಕಟ್ಟೆ ಮುಂತಾದವುಗಳಲ್ಲಿ ಕೃತಕ ಬುದ್ಧಿಮತ್ತೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದರು.

ಡಾ.ಕೆ.ಎಸ್‌. ನಿತೀನ್ ಅವರು ರೇಷ್ಮೆಕೃಷಿಯಲ್ಲಿ ಯಾವ ರೀತಿ ಕೃತಕ ಬುದ್ಧಿಮತ್ತೆ ಪರಿಕರಗಳನ್ನು ಬಳಸಬಹುದೆಂಬ ವಿಷಯದಲ್ಲಿ ಉದಾಹರಣೆಗಳೊಂದಿಗೆ ವಿವರಿಸಿದರು.

ಇಸ್ರೇಲ್‌ನ ಮಿಗಲ್ ಗಲಿಲೀ ಸಂಶೋಧನಾ ಸಂಸ್ಥೆಯ ಫಾರ್ಮ್ ಹೈವ್‌ನ ಕೃಷಿ ವಿಜ್ಞಾನಿ ಡಾ. ಜಾನ್ ರೋಹಿತ್ ಕಟುರಿ ರವರು ಯಾವ ರೀತಿ ಫಾರ್ಮ್ ಹೈವ್ ತಂತ್ರಾಂಶವು ಕೃತಕ ಬುದ್ಧಿಮತ್ತೆಯ ಮೂಲಕ ಆಂಧ್ರ ಪ್ರದೇಶದ ಗ್ರಾಮೀಣ ಭಾಗದ ರೈತರನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂಬುವುದನ್ನು ವಿವರಿಸಿದರು.

ಸಂಸ್ಥೆಯ ವಿಜ್ಞಾನಿಗಳು, ಜಿಕೆವಿಕೆ, ಬೆಂಗಳೂರಿನ ವಿಜ್ಞಾನಿಗಳು, ಚಿಂತಾಮಣಿ ರೇಷ್ಮೆ ಕಾಲೇಜಿನ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲದ ರೇಷ್ಮೆ ವಿಭಾಗದ ಪ್ರಾಧ್ಯಾಪಕರು, ಆಂಧ್ರಪ್ರದೇಶದ ರೇಷ್ಮೆ ಕೃಷಿ ಸಂಶೋಧನೆಯ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು, ಕರ್ನಾಟಕ ರಾಜ್ಯ ರೇಷ್ಮೆ ಕೃಷಿ ಸಂಶೋಧನೆಯ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು, ಅರಣ್ಯ ಕಾಲೇಜು, ಮೆಟ್ಟುಪಾಳ್ಳಂ ಪ್ರಾಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿ, ಯೋಜನಾ ಸಹಾಯಕರು ಭಾಗವಹಿಸುವರು.

ಸಿಎಫ್‌ಆರ್‌ಟಿಐ ವಿಸ್ತರಣ ವಿಭಾಗದ ಮುಖ್ಯಸ್ಥೆ, ವಿಜ್ಞಾನಿ ಡಾ.ಆರ್.ಭಾಗ್ಯ ಸ್ವಾಗತಿಸಿದರು. ವಿಜ್ಞಾನಿ ಡಾ. ಮುತ್ತುಲಕ್ಷ್ಮೀ, ವಂದಿಸಿದರು. ವಿಜ್ಞಾನಿ ಡಾ. ಜಾಯ್ಸಿರಾಣಿ ನಿರೂಪಿಸಿದರು.