ಸಾರಾಂಶ
ತರಬೇತಿ ಕಾರ್ಯಗಾರದಲ್ಲಿ ಎಚ್.ಎ.ನಾಸಿರುದ್ದೀನ್ ಹೇಳಿಕೆ
ಕನ್ನಡಪ್ರಭ ವಾರ್ತೆ ಮೊಳಕಾಲ್ಮರು
ಬುಡಕಟ್ಟು ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಆದಿಕರ್ಮಯೋಗಿ ಯೋಜನೆಯನ್ನು ಜಾರಿ ಮಾಡಿದೆ. ಮಹತ್ವಪೂರ್ಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎ.ನಾಸಿರುದ್ದೀನ್ ಹೇಳಿದರು.ಪಟ್ಟಣದ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆದಿಕರ್ಮ ಯೋಗಿ ಬ್ಲಾಕ್ ಮಟ್ಟದ ತರಬೇತುದಾರರಿಂದ ಓರಿಯೆಂಟೇಷನ್ ಹಾಗೂ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಬಹುತೇಕ ಬುಡಕಟ್ಟು ಸಮುದಾಯ ಹೆಚ್ಚಾಗಿ ವಾಸಿಸುವ ಈ ಪ್ರದೇಶದ ಬುಡಕಟ್ಟು ಪ್ರದೇಶಗಳಿಗೆ ಮೂಲ ಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆದಿಕರ್ಮ ಅಭಿಯಾನ ನಡೆಸಲಾಗುತ್ತಿದೆ. ಆ ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಆರೋಗ್ಯ ಸ್ಥಿತಿಗತಿಗಳ ವಿವರಗಳನ್ನು ಸಮಗ್ರವಾಗಿ ಗಣತಿ ನಡೆಸಿ ವರದಿ ಸಲ್ಲಿಸಬೇಕು. ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ತಿಳಿಸಿದರು.ಈ ವೇಳೆ ತಾಪಂ ಸಹಾಯಕ ನಿರ್ದೇಶಕ ಎಚ್.ಗಣೇಶ ಮಾತನಾಡಿ, ಆದಿಕರ್ಮಯೋಗಿ ವ್ಯಾಪ್ತಿಗೆ ತಾಲೂಕಿನ 13 ಗ್ರಾಮ ಪಂಚಾಯಿತಿಗಳ ಪೈಕಿ 23 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು ಈ ಗ್ರಾಮಗಳಲ್ಲಿ ಸಮಗ್ರ ಅಧ್ಯಯನ ನಡೆಯಲಿದೆ. ದೇಶದ 5 ಕೋಟಿ ಬುಡಕಟ್ಟು ಜನರನ್ನು ಮುಖ್ಯ ವಾಹಿನಿಗೆ ತರುವಂತ ಮಹತ್ವದ ಯೋಜನೆ ಇದಾಗಿದೆ. ಪ್ರತಿ ಗಣತಿದಾರರು ಬದ್ಧತೆಯಿಂದ ಕೆಲಸ ನಿರ್ವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ಹರ್ಷ, ಅರಣ್ಯ ರಕ್ಷಕ ಶಿವರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲೀಲಾಬಾಯಿ, ಆರೋಗ್ಯ ಇಲಾಖೆಯ ಕುಮಾರಸ್ವಾಮಿ ಇದ್ದರು.