ಸಾರಾಂಶ
ಚಂದ್ರು ಕೊಂಚಿಗೇರಿ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಗ್ರಾಮೀಣ ಪ್ರದೇಶದಲ್ಲಿ ಶತಮಾನ ಕಂಡಿರುವ ತಾಲೂಕಿನ ಮಾಗಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಪಿಎಂಶ್ರೀ (ಪಿಎಂ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಗೆ ಆಯ್ಕೆಯಾಗಿದೆ.
ಈ ಶಾಲೆಯು 1904ರಲ್ಲಿ ಸ್ಥಾಪನೆಯಾಗಿದ್ದು, ಅಂದಿನಿಂದ ಇಂದಿನವರೆಗೂ ಗ್ರಾಮೀಣ ಭಾಗದ ಮಕ್ಕಳಿಗೆ ಅಕ್ಷರ ದಾಸೋಹ ನಿರಂತರವಾಗಿ ನಡೆಯುತ್ತಿದೆ.ಈ ಸರ್ಕಾರಿ ಶಾಲೆಯು 1ರಿಂದ 7ನೇ ತರಗತಿ ನಡೆಯುತ್ತಿದೆ. 652ಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಇದೆ. ಇಂತಹ ಶಾಲೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಪಿಎಂಶ್ರೀ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಬರಲಿದೆ. ಭವಿಷ್ಯದಲ್ಲಿ ಈ ಗ್ರಾಮೀಣ ಭಾಗದ ಶಾಲೆಗೆ ಹೈಟೆಕ್ ಸ್ಪರ್ಶ ಸಿಗಲಿದೆ.
ಕೇಂದ್ರ ಮಂತ್ರಾಲಯದ ಅಡಿಯಲ್ಲಿ 2020ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ಈ ಶಾಲೆಗಳನ್ನು ಮೇಲ್ದರ್ಜೇಗೇರಿಸಿ ಅಭಿವೃದ್ಧಿಪಡಿಸುವ ಯೋಜನೆಯಾಗಿದ್ದು, ಈ ಪಿಎಂಶ್ರೀ ಯೋಜನೆಯಡಿಯಲ್ಲಿ ದೇಶದ 14500 ಶಾಲೆಗಳನ್ನು ಆಯ್ಕೆಯಾಗಿವೆ. ರಾಜ್ಯದಲ್ಲಿ 129 ಶಾಲೆಗಳಲ್ಲಿ ತಾಲೂಕಿನ ಮಾಗಳ ಶಾಲೆಯೂ ಒಂದಾಗಿದೆ.ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಹಿತದೃಷ್ಟಿ ಹೊಂದಿರುವ ಈ ಯೋಜನೆಯಡಿಯಲ್ಲಿ ಗುಣಮಟ್ಟದ ಬೋಧನೆ, ಕಲಿಕಾ ಗುಣಮಟ್ಟ ಹೆಚ್ಚಿಸಲು ಅಗತ್ಯವಿರುವ ಎಲ್ಲ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತಿದೆ.
ಪಿಎಂಶ್ರೀ ಯೋಜನೆಗೆ ಕ್ರಿಯಾಯೋಜನೆ ಸಿದ್ದಪಡಿಸಿ ಎಂಎಚ್‌ಆರ್‌ಡಿಯಿಂದ ಅನುಮೋದನೆ ಪಡೆಯಲಾಗಿದೆ. ಕ್ರಿಯಾಯೋಜನೆಗೆ ತಕ್ಕಂತೆ ಅನುದಾನ ಬಿಡುಗಡೆಯಾದ ಕೂಡಲೇ ಯೋಜನೆ ಕಾರ್ಯರೂಪಕ್ಕೆ ಬರಲಿದೆ. 5 ವರ್ಷಗಳ ಅವಧಿಯಲ್ಲಿ ಈ ಶಾಲೆಗಳು ಸಮಗ್ರ ಮಾದರಿ ಶಾಲೆಗಳಾಗಿ ಪರಿವರ್ತನೆಯಾಗುವ ಅವಕಾಶ ಈ ಯೋಜನೆಯಿಂದ ಸಿಗಲಿದೆ.ಎಷ್ಟೆಲ್ಲ ಸೌಲಭ್ಯಗಳಿವೆ?:
ಆಧುನಿಕ ತಂತ್ರಾಜ್ಞಾನ ಹೊಂದಿರುವ ಪ್ರಯೋಗಾಲಯ, ಐಸಿಟಿ ಲ್ಯಾಬ್ ವ್ಯವಸ್ಥೆ, ಸ್ಮಾರ್ಟ್‌ಕ್ಲಾಸ್, ಹಸಿರು ಶಾಲೆ, ಗ್ರಂಥಾಲಯ, ಕಲಿಕೋಪಕರಣಗಳು, ಸಿವಿಲ್ ಕಾಮಗಾರಿಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರತ್ಯೇಕ ಹೈಟೆಕ್ ಶೌಚಾಲಯ ವ್ಯವಸ್ಥೆ, ರಾಷ್ಟ್ರೀಯ ಆವಿಷ್ಕಾರ ಅಭಿಯಾನ, ಕ್ರೀಡೆ ಮತ್ತು ದೈಹಿಕ ಶಿಕ್ಷಣ, ಹೆಣ್ಣುಮಕ್ಕಳಿಗೆ ಸ್ವ ರಕ್ಷಣಾ ತರಬೇತಿ, ಸಮುದಾಯ ಭಾಗವಹಿಸುವಿಕೆ, ವಿಶೇಷ ತರಬೇತಿ ಸೇರಿದಂತೆ ಹತ್ತಾರು ರೀತಿಯ ಸೌಲಭ್ಯಗಳಿಂದ ಪಿಎಂಶ್ರೀ ಶಾಲೆಗಳು ಕಂಗೊಳಿಸುವ ಭಾಗ್ಯ ಪಡೆಯಲಿವೆ.ಈ ಯೋಜನೆಯಲ್ಲಿ ಕಟ್ಟಡ ಭಾಗ್ಯವಿಲ್ಲ:
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳಲ್ಲಿ ಒಂದಾಗಿರುವ ಕಟ್ಟಡಳ ಕೊರತೆ ಸಾಕಷ್ಟು ಕಾಡುತ್ತಿದೆ. ಶಾಲೆಗಳಿಗೆ ರಾಜ್ಯ ಸರ್ಕಾರವೇ ಕಟ್ಟಡಗಳ ವ್ಯವಸ್ಥೆ ಮಾಡಬೇಕಿದೆ. ಈ ಯೋಜನೆಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿಲ್ಲ. ಕಟ್ಟಡ ನಿರ್ಮಾಣಕ್ಕೂ ಅಗತ್ಯ ಅನುದಾನ ನೀಡಿದ್ದರೆ ಬಹಳ ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.ಮಾಗಳ ಶಾಲೆಯಲ್ಲಿ ಮಕ್ಕಳ ಹೆಚ್ಚು ದಾಖಲಾತಿಯಾಗಿರುವ ಹಿನ್ನೆಲೆಯಲ್ಲಿ ಕೋಣೆಗಳ ಸಂಖ್ಯೆ ಕೊರತೆಯಲ್ಲಿವೆ. ಇನ್ನು ಪಿಎಂಶ್ರಿ ಯೋಜನೆಯಡಿ ಬರುವ ಪ್ರಯೋಗಾಲಯ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಕೋಣೆಗಳು ಇಲ್ಲದಂತಾಗುತ್ತದೆ.ಮಾದರಿ ಶಾಲೆ:
ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಗೆ ನಮ್ಮ ಶಾಲೆ ಆಯ್ಕೆಯಾಗಿರುವುದು ಸಂತೋಷವಾಗಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಬಹಳ ಅನುಕೂಲವಾಗಲಿದೆ. ಈ ಯೋಜನೆಯನ್ನು ಸಮರ್ಪಕ ರೀತಿ ಅನುಷ್ಠಾನಕ್ಕೆ ತಂದು ರಾಜ್ಯಕ್ಕೆ ಮಾದರಿ ಶಾಲೆಯನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಡಿ. ವಿರೂಪಣ್ಣ.ಖುಷಿ ತಂದಿದೆ:ಮಕ್ಕಳ ಕಲಿಕೆಗೆ ಅನುಗುಣವಾಗಿ ಯೋಜನೆಯನ್ನು ಸಮಗ್ರವಾಗಿ ಅನುಷ್ಠಾನ ಮಾಡುತ್ತೇವೆ. ಶತಮಾನ ಕಂಡಿರುವ ಗ್ರಾಮೀಣ ಭಾಗದ ಶಾಲೆಯನ್ನು ಆಯ್ಕೆ ಮಾಡಿರುವುದು ಖುಷಿ ತಂದಿದೆ ಎಂದರು ಬಿಇಒ ಮಹೇಶ ಪೂಜಾರ.