ಕೈ ಪಡೆಗೆ ಮೈಸೂರಿನಲ್ಲಿ ನಾಲ್ಕು ಬಾರಿ ಸೋಲು

| Published : Mar 28 2024, 12:49 AM IST / Updated: Mar 28 2024, 02:25 PM IST

Congress

ಸಾರಾಂಶ

ಲೋಕಸಭಾ ಚುನಾವಣೆಯ ಮಟ್ಟಿಗೆ ಹೇಳುವುದಾದರೆ ಮೈಸೂರು ಹಾಗೂ ಚಾಮರಾಜನಗರ ಎರಡೂ ಕಾಂಗ್ರೆಸ್ ಭದ್ರಕೋಟೆಗಳಾಗಿದ್ದವು. ಇಂತಹ ಭದ್ರಕೋಟೆಯಲ್ಲಿಯೂ ಮೈಸೂರಿನಲ್ಲಿ ನಾಲ್ಕು ಬಾರಿ, ಚಾಮರಾಜನಗರದಲ್ಲಿ ಐದು ಬಾರಿ ಕಾಂಗ್ರೆಸ್ ಸೋತಿದೆ.

ಕನ್ನಡಪ್ರಭ ವಾರ್ತೆ, ಮೈಸೂರು

ಲೋಕಸಭಾ ಚುನಾವಣೆಯ ಮಟ್ಟಿಗೆ ಹೇಳುವುದಾದರೆ ಮೈಸೂರು ಹಾಗೂ ಚಾಮರಾಜನಗರ ಎರಡೂ ಕಾಂಗ್ರೆಸ್ ಭದ್ರಕೋಟೆಗಳಾಗಿದ್ದವು. ಇಂತಹ ಭದ್ರಕೋಟೆಯಲ್ಲಿಯೂ ಮೈಸೂರಿನಲ್ಲಿ ನಾಲ್ಕು ಬಾರಿ, ಚಾಮರಾಜನಗರದಲ್ಲಿ ಐದು ಬಾರಿ ಕಾಂಗ್ರೆಸ್ ಸೋತಿದೆ.

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ 1962 ರಲ್ಲಿ ರಚನೆಯಾಯಿತು. 1962, 1967, 1971- ಹೀಗೆ ಹ್ಯಾಟ್ರಿಕ್ ಜಯ ಸಾಧಿಸಿದವರು ಕಾಂಗ್ರೆಸ್ನ ಎಸ್.ಎಂ. ಸಿದ್ದಯ್ಯ.

1977 ರಲ್ಲಿ ಕಾಂಗ್ರೆಸ್ನ ಬಿ. ರಾಚಯ್ಯ ಗೆದ್ದರು. 1980, 1984, 1989, 1991 ರಲ್ಲಿ ಕಾಂಗ್ರೆಸ್ನ ವಿ. ಶ್ರೀನಿವಾಸಪ್ರಸಾದ್ ಸತತ ನಾಲ್ಕು ಬಾರಿ ಗೆಲ್ಲುವ ಮೂಲಕ ಭದ್ರಕೋಟೆಯನ್ನು ಮತ್ತಷ್ಟು ಗಟ್ಟಿಗೊಳಿಸಿದರು.

1966 ರ ಚುನಾವಣೆ ಎದುರಾಗುವ ಹೊತ್ತಿಗೆ ಶ್ರೀನಿವಾಸಪ್ರಸಾದ್ ಅವರು ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರೊಂದಿಗೆ ಮುನಿಸಿಕೊಂಡಿದ್ದರು.

 ಹಗರಣವೊಂದರಲ್ಲಿ ಚಿಕ್ಕೋಡಿಯ ಬಿ. ಶಂಕರಾನಂದ ಅವರು ಕೇಂದ್ರ ಸಚಿವ ಸ್ಥಾನ ತೆರವು ಮಾಡಿದಾಗ ಆ ಸ್ಥಾನಕ್ಕೆ ತಾವು ಬರಬೇಕು ಎಂಬುದು ಶ್ರೀನಿವಾಸಪ್ರಸಾದ್ ಅವರ ಇಚ್ಛೆಯಾಗಿತ್ತು. ಆದರೆ ಕೋಲಾರದ ಜಿ.ವೈ. ಕೃಷ್ಣನ್ ಅವರಿಗೆ ಮಂತ್ರಿ ಸ್ಥಾನ ದೊರೆಯಿತು.

 ಶ್ರೀನಿವಾಸಪ್ರಸಾದ್ ಅವರು ನರಸಿಂಹರಾವ್ ಅವರನ್ನು ಹಿಗ್ಗಾಮುಗ್ಗಾ ಜಾಡಿಸಿದರು. ಆಗ ಜಿಲ್ಲೆಯವರೇ ಆದ ಎಂ. ರಾಜಶೇಖರಮೂರ್ತಿ ಅವರು ಕೇಂದ್ರ ಭೂಸಾರಿಗೆ ಸಚಿವರಾಗಿದ್ದರು. 

ಬದನವಾಳು- ಉಮ್ಮತ್ತೂರು ಸಂಘರ್ಷದ ಹಿನ್ನೆಲೆಯಲ್ಲಿ ಶ್ರೀನಿವಾಸ ಪ್ರಸಾದ್, ರಾಜಶೇಖರಮೂರ್ತಿ ಅವರ ನಡುವೆ ಎಣ್ಣೆ-ಸೀಗೆಕಾಯಿಯ ಸಂಬಂಧ. 

ಪರಿಸ್ಥಿತಿಯ ಲಾಭ ಪಡೆದ ರಾಜಶೇಖರಮೂರ್ತಿ ಅವರು ತಮ್ಮ ಬಂಟ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಲ್.ಎಚ್. ಬಾಲಕೃಷ್ಣ ಅವರಿಗೆ ಟಿಕೆಟ್ ಕೊಡಿಸಿದರು. ಶ್ರೀನಿವಾಸ ಪ್ರಸಾದ್ ಬಂಡಾಯದ ಬಾವುಟ ಹಾರಿಸಿದರು.

ಬಾಲಕೃಷ್ಣ 1,91,169, ಶ್ರೀನಿವಾಸ ಪ್ರಸಾದ್ 1,66,339 ಮತಗಳನ್ನು ಪಡೆದರು. ಆದರೆ ಗೆದ್ದಿದ್ದು ಮಾತ್ರ 2,14,745 ಮತಗಳನ್ನು ಪಡೆದ ಜನತಾದಳದ ಎ. ಸಿದ್ದರಾಜು ಅವರು. ಎಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್ ನೇತೃತ್ವದ ಸಂಯುಕ್ತ ರಂಗ ಸರ್ಕಾರಗಳು ಪತನಗೊಂಡಿದ್ದರಿಂದ 1998 ರಲ್ಲಿ ಮತ್ತೆ ಚುನಾವಣೆ ಎದುರಾಯಿತು. 

ಆ ವೇಳೆಗೆ ಶ್ರೀನಿವಾಸಪ್ರಸಾದ್ ಕಾಂಗ್ರೆಸ್‌ಗೆ ವಾಪಸ್ ಆಗಿದ್ದರು. ಅವರಿಗೆ ಟಿಕೆಟ್ ಸಿಕ್ಕಿತು. ಆದರೆ ರಾಜಶೇಖರಮೂರ್ತಿ, ಶ್ರೀನಿವಾಸಪ್ರಸಾದ್ ಬೆಂಬಲಿಗರು ಒಟ್ಟಾಗಿರಲಿಲ್ಲ. 

ಹೀಗಾಗಿ ಕಾಂಗ್ರೆಸ್ ಎರಡನೇ ಬಾರಿ ಸೋತಿತು. 3,40,490 ಮತಗಳನ್ನು ಪಡೆದ ಜನತಾದಳದ ಎ. ಸಿದ್ದರಾಜು ಸತತ ಎರಡನೇ ಬಾರಿ ಆಯ್ಕೆಯಾದರೇ 2,70,175 ಮತಗಳನ್ನು ಪಡೆದ ಶ್ರೀನಿವಾಸಪ್ರಸಾದ್ ಸತತ ಎರಡನೇ ಸೋಲು ಅನುಭವಿಸಿದರು. 

ಎ.ಬಿ. ವಾಜಪೇಯಿ ನೇತೃತ್ವದ ಸರ್ಕಾರ ಒಂದೇ ವರ್ಷದಲ್ಲಿ ಉರುಳಿ 1999 ರಲ್ಲಿ ಮತ್ತೆ ಚುನಾವಣೆ ಬಂದಿತು. ಶ್ರೀನಿವಾಸಪ್ರಸಾದ್ ಅವರು ಕಾಂಗ್ರೆಸ್ ಸಹವಾಸವೇ ಬೇಡ ಎಂದು ರಾಮಕೃಷ ಹೆಗಡೆ ಅವರು ಲೋಕಶಕ್ತಿ ಸೇರಿ, ಜೆಡಿಯುನ ಬಾಣದ ಗುರುತಿನಲ್ಲಿ ಸ್ಪರ್ಧಿಸಿದರು. 

ಎರಡು ಬಾರಿ ಜನತಾದಳದಿಂದ ಗೆದ್ದಿದ್ದ ಎ. ಸಿದ್ದರಾಜು ಕಾಂಗ್ರೆಸ್ ಕಡೆ ವಾಲಿದ್ದರು, ಜೆಡಿಎಸ್‌ನಿಂದ ಪ್ರೊ.ಎಚ್. ಗೋವಿಂದಯ್ಯ ಸ್ಪರ್ಧಿಸಿದ್ದರು.

3,11,547 ಮತಗಳನ್ನು ಪಡೆದ ಶ್ರೀನಿವಾಸಪ್ರಸಾದ್ ಗೆದ್ದರು. 2,95,401 ಮತಗಳನ್ನು ಪಡೆದ ಸಿದ್ದರಾಜು ಸೋತರು. ಜೆಡಿಎಸ್‌ನ ಗೋವಿಂದಯ್ಯಗೆ ಸಿಕ್ಕಿದ್ದು 1,07,556 ಮತಗಳು.

2004ರ ಚುನಾವಣೆ ಹೊತ್ತಿಗೆ ಶ್ರೀನಿವಾಸಪ್ರಸಾದ್ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದರು. ಜೆಡಿಎಸ್ ಸೇರಿ, ಕಾಗಲವಾಡಿಯ ಶಿವಣ್ಣ ಅವರಿಗೆ ಟಿಕೆಟ್ ಕೊಡಿಸಿದರು. ಮತ್ತೆ ಎ. ಸಿದ್ದರಾಜು ಕಾಂಗ್ರೆಸ್ ಅಭ್ಯರ್ಥಿಯಾದರು. 

ಶ್ರೀನಿವಾಸಪ್ರಸಾದ್ ಅವರ ಜೊತೆಗೆ ಎಚ್.ಎಸ್. ಮಹದೇವಪ್ರಸಾದ್ ಎ.ಆರ್. ಕೃಷ್ಣಮೂರ್ತಿ ಮೊದಲಾದವರು ಕೂಡ ಜೆಡಿಎಸ್ ಸೇರಿದ್ದರಿಂದ 3,16,661 ಮತಗಳನ್ನು ಪಡೆದು ಶಿವಣ್ಣ ಗೆದ್ದರು. 2,72, 672 ಮತಗಳನ್ನು ಪಡೆದ ಸಿದ್ದರಾಜು ಸತತ ಎರಡನೇ ಬಾರಿಗೆ ಸೋತರು.

ನಾಲ್ಕು ಸೋಲಿನ ನಂತರ 2009 ರಲ್ಲಿ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಗೆಲ್ಲುವ ಮೂಲಕ ಕಾಂಗ್ರೆಸ್ ಕೋಟೆಯನ್ನು ಜನತಾ ಪರಿವಾರದಿಂದ ಮರಳಿ ವಶಪಡಿಸಿಕೊಂಡರು. 

ನಾಲ್ಕು ಬಾರಿ ಗೆದ್ದಿದ್ದ ಜನತಾ ಪರಿವಾರ ಸ್ವಯಂಕೃತ ಅಪರಾಧ ಅರ್ಥಾತ್ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಬಿ.ಎಸ್. ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರಿಂದ ಚಾಮರಾಜನಗರದ ಮಟ್ಟಿಗೆ ಧೂಳೀಪಟವಾಯಿತು. ಬಿಜೆಪಿ ಎರಡನೇ ಸ್ಥಾನಕ್ಕೆ ಬಂದಿತು.

2014 ರಲ್ಲಿ ಮತ್ತೆ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಗೆದ್ದರು. ಬಿಜೆಪಿಯಿಂದ ಎ.ಆರ್. ಕೃಷ್ಣಮೂರ್ತಿ, ಜೆಡಿಎಸ್ಸಿಂದ ಕೋಟೆ ಎಂ. ಶಿವಣ್ಣ ಎರಡೂ ಬಾರಿಯೂ ಅಭ್ಯರ್ಥಿಗಳಾಗಿದ್ದರು.

2019 ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ವಿ. ಶ್ರೀನಿವಾಸಪ್ರಸಾದ್ ಅವರು ಕಾಂಗ್ರೆಸ್ನ ಆರ್. ಧ್ರುವನಾರಾಯಣ ಅವರನ್ನು ಸೋಲಿಸಿ, ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿದರು. 

ಕಾಂಗ್ರೆಸ್ ಐದನೇ ಸೋಲು ಅನುಭವಿಸಿತು. ಶ್ರೀನಿವಾಸಪ್ರಸಾದ್ ಅವರಿಗೆ 5,68,537, ಧ್ರುವನಾರಾಯಣ ಅವರಿಗೆ 5,66,720 ಮತಗಳು ದೊರೆತವು.

2009 ರ ಚುನಾವಣೆ ಹೊತ್ತಿಗೆ ಕ್ಷೇತ್ರ ಸ್ವರೂಪ ಬದಲಾಗಿತ್ತು. ಬಿಜೆಪಿಯ ಪ್ರಬಲ ಪೈಪೋಟಿಯ ನಡುವೆಯೂ 3,54,810 ಮತಗಳನ್ನು ಗಳಿಸಿದ ಎಚ್. ವಿಶ್ವನಾಥ್ ಅವರು ಗೆದ್ದು, ಕಾಂಗ್ರೆಸ್‌ಗೆ ಕೋಟೆಯನ್ನು ಮರಳಿ ಗಳಿಸಿಕೊಟ್ಟರು. ಬಿಜೆಪಿಯ ಸಿ.ಎಚ್. ವಿಜಯಶಂಕರ್ 3,47,119, ಜೆಡಿಎಸ್‌ನ ಬಿ.ಎ. ಜೀವಿಜಯ 2,16,283 ಮತಗಳನ್ನು ಗಳಿಸಿದರು.

2014 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಆದರೂ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್- 4,72,300 ಮತಗಳನ್ನು ಪಡೆದು ಸೋತರು. ಬಿಜೆಪಿಯ ಪ್ರತಾಪ್‌ ಸಿಂಹ- 5,03,908

ಮತಗಳನ್ನು ಪಡೆಯುವ ಮೂಲಕ ಮೂರನೇ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿತು. ಜೆಡಿಎಸ್‌ನ ತಂತ್ರಗಾರಿಕೆಯು ಇದಕ್ಕೆ ನೆರವಾಯಿತು. ಏಕೆಂದರೆ ಆ ಪಕ್ಷದ ಅಭ್ಯರ್ಥಿಯಾಗಿದ್ದ ನ್ಯಾ.ಚಂದ್ರಶೇಖರ್ ಅವರಿಗೆ ದೊರೆತಿದ್ದು ಕೇವಲ 1,38,587 ಮತಗಳು ಮಾತ್ರ.

2019 ರಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಗೆದ್ದರು. ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದಿಂದ ಸಿ.ಎಚ್. ವಿಜಯಶಂಕರ್ ಕಣದಲ್ಲಿದ್ದರು. ಪ್ರತಾಪ್ ಸಿಂಹ ಅವರಿಗೆ 6,88,984 ಹಾಗೂ ವಿಜಯಶಂಕರ್ ಅವರಿಗೆ 5,50,327 ಮತಗಳು ದೊರೆತವು. ಈ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಕಮಲ ಅರಳಿತು

ಈ ಬಾರಿ ಮತ್ತೆ 2014ರ ಪರಿಸ್ಥಿತಿ: ಈ ಬಾರಿ ಮತ್ತೆ 2014ರ ಪರಿಸ್ಥಿತಿ ಮರುಕಳಿಸಿದೆ. ಜಿಲ್ಲೆಯವರೇ ಸಿದ್ದರಾಮಯ್ಯ ಮುಖ್ಯಮಂತ್ರಿ. ಈ ಬಾರಿ ಬಿಜೆಪಿ--, ಜೆಡಿಎಸ್ ಮೈತ್ರಿಕೂಟದಿಂದ ಮೈಸೂರಿನಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್‌ನಿಂದ ಎಂ, ಲಕ್ಷ್ಮಣ ಕಣದಲ್ಲಿದ್ದಾರೆ. 

ಚಾಮರಾಜನಗರದಲ್ಲಿ ಬಿಜೆಪಿ-, ಜೆಡಿಎಸ್ ಮೈತ್ರಿಕೂಟದಿಂದ ಮಾಜಿ ಶಾಸಕ ಎಸ್. ಬಾಲರಾಜ್, ಕಾಂಗ್ರೆಸ್‌ನಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಕಣದಲ್ಲಿದ್ದಾರೆ.

ಗೆಲವು ಯಾರಿಗೆ ಎಂಬುದು ಕುತೂಹಲ ಕೆರಳಿಸಿದೆ: ಮೈಸೂರಿನಲ್ಲಿ 1952ರ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್. ರಾಚಯ್ಯ ಅವರೊಂದಿಗೆ ಕೆಎಂಪಿಪಿಯ ಎಂ.ಎಸ್. ಗುರುಪಾದಸ್ವಾಮಿ ಅವರು ಗೆದ್ದಿದ್ದನ್ನು ಬಿಟ್ಟರೇ 1996 ರವರೆಗೆ ಕಾಂಗ್ರೆಸ್ ನಡೆದಿದ್ದೆ ದಾರಿ. 

1957 ರಲ್ಲಿ ಕಾಂಗ್ರೆಸ್ನ ಎಂ. ಶಂಕರಯ್ಯ, ಎಸ್.ಎಂ. ಸಿದ್ದಯ್ಯ. 1962 ರಲ್ಲಿ ಕಾಂಗ್ರೆಸ್ನ ಎಂ. ಶಂಕರಯ್ಯ 1967, 1971, 1977 ರಲ್ಲಿ ಕಾಂಗ್ರೆಸ್‌ನ ಎಚ್.ಡಿ. ತುಳಸಿದಾಸ್, 1980 ರಲ್ಲಿ ಕಾಂಗ್ರೆಸ್-ಐನ ಎಂ. ರಾಜಶೇಖರಮೂರ್ತಿ, 1984, 1989 ರಲ್ಲಿ ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, 1991 ರಲ್ಲಿ ಕಾಂಗ್ರೆಸ್ನ ಚಂದ್ರಪ್ರಭ ಅರಸು, 1996 ರಲ್ಲಿ ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೆದ್ದರು.

1998ರ ಚುನಾವಣೆಯಲ್ಲಿ ಒಡೆಯರ್ ಅನಾರೋಗ್ಯ ನಿಮಿತ್ತ ಸ್ಪರ್ಧಿಸಲಿಲ್ಲ. ಎಂ. ರಾಜಶೇಖರಮೂರ್ತಿ ಅವರು ನಾಯಕ ಜನಾಂಗದ ಎಸ್. ಚಿಕ್ಕಮಾದು ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ಬಿಜೆಪಿಯ ಹೊಸ ಪ್ರಯೋಗವಾಗಿ ಕುರುಬ ಜನಾಂಗದ ಸಿ.ಎಚ್. ವಿಜಯಶಂಕರ್ ಅವರಿಗೆ ಟಿಕೆಟ್ ನೀಡಿತು. 

ವಾಜಪೇಯಿ ಅವರ ಅಲೆ, ಕುರುಬ ಜನಾಂಗ ಒಟ್ಟಾಗಿ ವಿಜಯಶಂಕರ ಪರ ನಿಂತಿದ್ದರಿಂದ ಮೊದಲ ಬಾರಿಗೆ ಕಾಂಗ್ರೆಸ್ ಕೋಟೆ ಕುಸಿದು, ಬಿಜೆಪಿಯ ಕಮಲ ಅರಳಿತು. 3,55,846 ಮತಗಳನ್ನು ಪಡೆದು. ವಿಜಯಶಂಕರ್ ಗೆದ್ದರು. ಚಿಕ್ಕಮಾದು 2,52,822 ಮತಗಳನ್ನು ಪಡೆದರು.

1999ರ ಚುನಾವಣೆ ವೇಳೆಗೆ ಮತ್ತೆ ಒಡೆಯರ್ ಸ್ಪರ್ಧಿಸಿ, ಕಾಂಗ್ರೆಸ್‌ಗೆ ಗೆಲವು ತಂದು ಕೊಟ್ಟರು. 2004 ರಲ್ಲಿ ಜನತಾದಳದ ಅಲೆ ಇತ್ತು. ಇದರ ಪರಿಣಾಮ 2,99,227 ಮತಗಳನ್ನು ಗಳಿಸಿದ ಒಡೆಯರ್ ಮೂರನೇ ಸ್ಥಾನಕ್ಕೆ ಹೋದರು. 

3,06,292 ಮತಗಳನ್ನು ಪಡೆದ ಜೆಡಿಎಸ್‌ನ ಎ.ಎಸ್. ಗುರುಸ್ವಾಮಿ ಎರಡನೇ ಸ್ಥಾನಕ್ಕೆ ಬಂದರು. ಮತ್ತೊಮ್ಮೆ ಕುರುಬ ಜನಾಂಗ ಒಟ್ಟಾಗಿ ಚಲಾಯಿಸಿದ್ದರಿಂದ 3,16,442 ಮತಗಳಿಂದ ವಿಜಯಶಂಕರ್ ಬಿಜೆಪಿಯ ಕಮಲ ಅರಳಿಸಿದರು.