ಸಾರಾಂಶ
ಪ್ರಧಾನಿ ಮೋದಿ ಅವರು 2040 ಗುರಿಯೊಂದಿಗೆ 4 ಮತ್ತು 5 ಚಂದ್ರಯಾನ ಯೋಜನೆ ಹಾಕಿಕೊಳ್ಳಲಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕವಾಗಿ ಭಾರತದ ಸಾಧನೆಯನ್ನು ಉತ್ತುಂಗಕ್ಕೇರಿಸುವ ಗುರಿ ಹೊಂದಲಾಗಿದೆ. ಬಾಹ್ಯಾಕಾಶ ಅಧ್ಯಯನಕ್ಕೆ ಸಾಕಷ್ಟ್ಟು ಹಣ ವೆಚ್ಚ ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಇಸ್ರೋ ಕೈಗೊಂಡ ಚಂದ್ರಯಾನ 1, 2, 3 ಯಶಸ್ವಿಯಾಗಿದೆ. ಭವಿಷ್ಯದಲ್ಲಿ ಚಂದ್ರಯಾನ 4 ಮತ್ತು 5 ಉಡಾವಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಇಸ್ರೋ ಯುಆರ್ ಎಸ್ ಸಿ ಬಾಹ್ಯಾಕಾಶ ಖಗೋಳ ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ವಿ. ರಾಧಾಕೃಷ್ಣ ತಿಳಿಸಿದರು.ನಗರದ ಕ್ರಾಫರ್ಡ್ ಭವನದಲ್ಲಿ ಮೈಸೂರು ವಿವಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿದ ಅವರು, ಬಾಹ್ಯಾಕಾಶ ವಿಜ್ಞಾನ ಕಾರ್ಯಾಚರಣೆಗಳು: ಸವಾಲುಗಳು ಮತ್ತು ಅವಕಾಶಗಳು ಕುರಿತು ಉಪನ್ಯಾಸ ನೀಡಿದರು.
ಪ್ರಧಾನಿ ಮೋದಿ ಅವರು 2040 ಗುರಿಯೊಂದಿಗೆ 4 ಮತ್ತು 5 ಚಂದ್ರಯಾನ ಯೋಜನೆ ಹಾಕಿಕೊಳ್ಳಲಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕವಾಗಿ ಭಾರತದ ಸಾಧನೆಯನ್ನು ಉತ್ತುಂಗಕ್ಕೇರಿಸುವ ಗುರಿ ಹೊಂದಲಾಗಿದೆ. ಬಾಹ್ಯಾಕಾಶ ಅಧ್ಯಯನಕ್ಕೆ ಸಾಕಷ್ಟ್ಟು ಹಣ ವೆಚ್ಚ ಮಾಡಲಾಗುತ್ತಿದೆ. ಮಾನವನ ಕುತೂಹಲ ಹಾಗೂ ಆತನ ಚಿಂತನೆಗಳೇ ಆಧುನಿಕ ಯುಗಕ್ಕೆ ಕರೆ ತಂದಿದೆ. ಕಾಶ್ಮೀರದ ಗುಹೆಯೊಂದರಲ್ಲಿ 5 ಸಾವಿರ ವರ್ಷದ ಹಿಂದೆ ಆದಿ ಮಾನವ ಬಾಹ್ಯಾಕಾಶದಲ್ಲಿ ನಕ್ಷತ್ರ ಸಿಡಿಯುವ ಬೆಳವಣಿಗೆಯನ್ನು ಚಿತ್ರಿಸಿದ್ದಾನೆ. ಅಲ್ಲಿಂದ ಇಲ್ಲಿಯವರೆಗೆ ಕರೆ ತಂದಿರುವುದು ಕುತೂಹಲವೇ ಆಗಿದೆ ಎಂದು ಅವರು ಹೇಳಿದರು.ವಿಜ್ಞಾನ ವಿಷಯಗಳಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಹೀಗಾಗಿ, ವಿಜ್ಞಾನದ ಕ್ಷೇತ್ರದಲ್ಲಿ ಸಂಶೋಧನೆಯನ್ನು ನಡೆಸುವವರು ಎದುರಾಗುವ ಸವಾಲುಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು ದೇಶದ ಪ್ರಗತಿಗೆ ಅನುಕೂಲವಾಗುವ ಸಂಶೋಧನೆಗಳನ್ನು ನೀಡಬೇಕು ಎಂದರು.
ವಿದ್ಯಾರ್ಥಿಗಳು ಶಾಲಾ ಕಾಲೇಜು ದಿನಗಳಲ್ಲಿಯೇ ವಿಜ್ಞಾನಕ್ಕೆ ಸಂಬಂಧಿಸಿದ ಮೂಲಭೂತ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ವಿಜ್ಞಾನದ ವಿಷಯಗಳನ್ನು ಹೆಚ್ಚಿನ ಆಸಕ್ತ ವಹಿಸಿ ಕಲಿಯಬೇಕು. ಭಾರತ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಸಂಶೋಧನಾ ಕಾರ್ಯಗಳು ನಮ್ಮ ದೇಶದಲ್ಲಿ ನಡೆದಿವೆ. ಇದಕ್ಕೆ ಚಂದ್ರಯಾನ 3 ಭಾರತ ವಿಜ್ಞಾನ ಕ್ಷೇತ್ರದ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ತಿಳಿಸಿದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ ಇದ್ದರು. ಡಾ.ಜೆ. ಲೋಹಿತ್ ನಿರೂಪಿಸಿದರು.