ಕಂಪನಿಗಳಲ್ಲಿ ಅಕ್ರಮ ವಲಸಿಗರ ಬಗ್ಗೆ ಪರಿಶೀಲಿಸಿ: ಎಸ್ಪಿ

| Published : Jul 06 2025, 01:48 AM IST

ಕಂಪನಿಗಳಲ್ಲಿ ಅಕ್ರಮ ವಲಸಿಗರ ಬಗ್ಗೆ ಪರಿಶೀಲಿಸಿ: ಎಸ್ಪಿ
Share this Article
  • FB
  • TW
  • Linkdin
  • Email

ಸಾರಾಂಶ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ತ್ಯಾಜ್ಯ ಕಂಪನಿಗಳಲ್ಲಿ ಅನ್ಯ ರಾಜ್ಯಗಳ ಕಾರ್ಮಿಕರ ಮಾಹಿತಿ ಗೌಪ್ಯ ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಶಂಕೆ ವ್ಯಕ್ತವಾಗಿದ್ದು, ಕಾರ್ಖಾನೆಗಳು ಕಾರ್ಮಿಕ ಇಲಾಖೆಗೂ ಮಾಹಿತಿ ಮುಚ್ಚಿಡುತ್ತಿವೆ ಎಂಬ ಜನರ ಮಾತುಗಳು ಕೇಳಿಬರುತ್ತಿದ್ದ ಬೆನ್ನಲ್ಲೇ, ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಸುಮಾರು 20ಕ್ಕೂ ಹೆಚ್ಚು ಅಪಾಯಕಾರಿ ಕೆಮಿಕಲ್‌ ಕಂಪನಿಗಳಲ್ಲಿ ಅನ್ಯ ರಾಜ್ಯಗಳ ಕಾರ್ಮಿಕ ಗುತ್ತಿಗೆದಾರರು ಹಾಗೂ ಬಾಂಗ್ಲಾ ವಲಸಿಗರು ಇರುವ ಶಂಕೆ ಕಂಡುಬಂದಿದ್ದು, ಈ ಕುರಿತು ಖುದ್ದಾಗಿ ಭೇಟಿ ನೀಡಿ, ಪ್ರತಿಯೊಬ್ಬ ಕಾರ್ಮಿಕನ ಬಗ್ಗೆ 30 ದಿನಗಳೊಳಗೆ ವರದಿ ನೀಡುವಂತೆ ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಸೈದಾಪುರ ಠಾಣೆಯ ಇನ್ಸ್ಪೆಕ್ಟರ್‌ ಅವರಿಗೆ ಪತ್ರಮುಖೇನ ಸೂಚಿಸಿದ್ದಾರೆ.

ಕನ್ನಡಪ್ರಭ ಸರಣಿ ವರದಿ ಭಾಗ : 88

ಕನ್ನಡಪ್ರಭ ವಾರ್ತೆ ಯಾದಗಿರಿ

ಎಸ್ಪಿ ಪೃಥ್ವಿಕ್‌ ಶಂಕರ್‌ ಪತ್ರ ಬರೆದು ಸೂಚಿಸಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆನ್ನಲಾಗಿದ್ದು, ಉತ್ತರ-ಪೂರ್ವ ಭಾರತದ ವಿವಿಧ ರಾಜ್ಯಗಳಿಂದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರ ಕೂಲಂಕುಷ ಪರಿಶೀಲನೆ ನಂತರ ಅಕ್ರಮ ವಲಸಿಗರ ಬಗ್ಗೆ ತಿಳಿಯಲಿದೆ ಎನ್ನಲಾಗುತ್ತಿದೆ. ಇದಕ್ಕೆಂದು, ಇಲಾಖೆಯ ಮೇಲಾಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕಾರ್ಮಿಕರ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಂಡಿರುವ ಕೆಲವು ಕಂಪನಿಗಳಲ್ಲಿ, ದೇಶದ ವಿವಿಧೆಡೆ ಅಪರಾಧ ಹಿನ್ನೆಲೆಯುಳ್ಳವರೂ ಬಂದಿರಬಹುದು ಎಂಬ ಶಂಕೆಯನ್ನು ಅಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. "ಕೆಮಿಕಲ್‌ ಕಂಪನಿಗಳಲ್ಲಿ ಅಕ್ರಮ ವಲಸಿಗ ಕಾರ್ಮಿಕರು " ಶೀರ್ಷಿಕೆಯಡಿ ಕನ್ನಡಪ್ರಭ ಮೇ 12 ರಂದು ಪ್ರಕಟಿಸಿದ್ದ ವರದಿ ಗಮನ ಸೆಳೆದಿತ್ತು.

------------

ನಮ್ಮ ಈ ಭಾಗದಲ್ಲಿ ಶೇ. 60ಕ್ಕಿಂತ ಹೆಚ್ಚು ಭೂಮಿ ಫಲವತ್ತತೆಯಿಂದ ಕೂಡಿತ್ತು. ಇಂಥಹ ಭೂಮಿಯಲ್ಲಿ ಹೇಗಾದರೂ ಕೃಷಿ ಮಾಡಿದರೂ ನಷ್ಟವಾಗುತ್ತಿರಲಿಲ್ಲ. ಆರೋಗ್ಯಕರ ಜೀವನವನ್ನು ಸಾಗಿಸಬಹುದಾಗಿತ್ತು. ಅಂದಿನ ಸರಕಾರದ ಪ್ರತಿನಿಧಿಗಳು, ಅಧಿಕಾರಿಗಳು ರೈತರಿಗೆ ನೂರೆಂಟು ಸುಳ್ಳು ಭರವಸೆಯನ್ನು ನೀಡಿ , ಇಲ್ಲಿನ ಜನರ ಹಿತಾಸಕ್ತಿಯನ್ನು ಬಲಿ ನೀಡಿ , ಇಂದು ಪರಿಸರಕ್ಕೆ ಹಾನಿಕಾರಕ ಮತ್ತು ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿರುವ ರಾಸಾಯನಿಕ ಕಂಪನಿಗಳನ್ನು ಸ್ಥಾಪಿಸಿರುವುದು ಅತ್ಯಂತ ಖಂಡನೀಯವಾಗಿದೆ. : ಶಿವುಕುಮಾರಸ್ವಾಮಿ, ಸೈದಾಪುರ

---------

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿದ ಬಹುಪಾಲು ರಾಸಾಯನಿಕ ಕಂಪನಿಗಳು ಸರಕಾರ ಮತ್ತು ಪರಿಸರದ ನಿಯಮಗಳು ಸಂಪೂರ್ಣವಾಗಿ ಗಾಳಿಗೆ ತೂರಿದರ ಪರಿಣಾಮ, ಈ ಭಾಗದ ಜನರಲ್ಲಿ ಚರ್ಮ, ಕಣ್ಣು ಹಾಗೂ ಗರ್ಭಿಣಿ, ವೃದ್ಧರಿಗೆ ಮತ್ತು ಮಕ್ಕಳಿಗೆ ಉಸಿರಾಟದ ಸಮಸ್ಯೆಗಳು ಎದುರಾಗಿವೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಭಾಗದ ಸರಕಾರದ ಅಧಿಕಾರಿಗಳು ಯಾರೋ ರಾಜಕೀಯ ಮತ್ತು ಉದ್ಯಮಿಗಳ ಪ್ರಭಾವಕ್ಕೆ ಒಳಗಾಗಿ ಇಲ್ಲಿನ ಜನರ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ.

ಸಾಬಣ್ಣ, ಮುನಗಾಲ್.