ರಾಜ್ಯದ ಬೇಡಿಕೆಗಳಿಗೆ ಕೇಂದ್ರ ಕಿವುಡು: ಮುಖ್ಯಮಂತ್ರಿ ಆರೋಪ

| Published : Feb 01 2025, 12:01 AM IST

ಸಾರಾಂಶ

ಶನಿವಾರ ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವ ಬಗ್ಗೆ ಶುಕ್ರವಾರ ಭಾಗಮಂಡಲದಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸಬೇಕು. ಕೇಂದ್ರ ಸರ್ಕಾರದಿಂದ ನಿರೀಕ್ಷೆ ಮಾಡುವುದೇ ಇಲ್ಲ ಎಂದೇನಿಲ್ಲ. ನಿರೀಕ್ಷೆ ಮಾಡಿದರೂ ಅವು ಹುಸಿಯಾಗುತ್ತಿವೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕನ್ನಡದಲ್ಲಿ ವಾರ್ತೆ ಮಡಿಕೇರಿರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಪಾಲು ಪಡೆಯಲು ನಿರಂತರ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಮಡಿಕೇರಿ ತಾಲೂಕಿನ ಭಾಗಮಂಡಲ ಕಾವೇರಿ ಜೂನಿಯರ್ ಕಾಲೇಜು ಮೈದಾನದ ಹೆಲಿಪ್ಯಾಡ್‌ನಲ್ಲಿ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಶನಿವಾರ ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸಬೇಕು. ಕೇಂದ್ರ ಸರ್ಕಾರದಿಂದ ನಿರೀಕ್ಷೆ ಮಾಡುವುದೇ ಇಲ್ಲ ಎಂದೇನಿಲ್ಲ. ನಿರೀಕ್ಷೆ ಮಾಡಿದರೂ ಅವು ಹುಸಿಯಾಗುತ್ತಿವೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡುತ್ತೇವೆ. ದೆಹಲಿಗೆ ಹೋಗಿ ತೆರಿಗೆ ಹಂಚಿಕೆಯಲ್ಲಿ ಕಡಿಮೆ ಅನುದಾನ ಬರುತ್ತಿದೆ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ, ಕೇಂದ್ರದಿಂದ ಅನುದಾನ ಬರುತ್ತಿಲ್ಲ ಎಂದು ಶಾಸಕರು , ಸಂಸದರು, ಸಚಿವರು ದೆಹಲಿಯಲ್ಲಿಯೇ ಪ್ರತಿಭಟನೆ ಮಾಡಿದೆವು. ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು. ಅನುದಾನ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಇಂದಿನವರೆಗೂ ಒಂದು ರುಪಾಯಿ ಬಿಡುಗಡೆಯಾಗಿಲ್ಲ ಎಂದರು.

ಕಾಮಗಾರಿ ಶೀಘ್ರಗತಿ ಪೂರ್ಣ:

ಒಂಭತ್ತು ವರ್ಷಗಳ ನಂತರ ಕೊಡಗಿನ ಭಾಗಮಂಡಲ ಮೇಲ್ಸೇತುವೆ ಉದ್ಘಾಟನೆಯಾಗುತ್ತಿರುವ ಬಗ್ಗೆ ಮಾತನಾಡಿದ ಅವರು, 2016 ರಲ್ಲಿ ನಮ್ಮ ಸರ್ಕಾರ ಕಾಮಗಾರಿಗೆ ಮಂಜೂರಾತಿ ಕೊಟ್ಟು, 2017 ರಲ್ಲಿ ಪ್ರಾರಂಭವಾಗಿತ್ತು. ಹಿಂದಿನ ಸರ್ಕಾರ ಅದನ್ನು ಪೂರ್ಣಮಾಡದೇ ವಿಳಂಬವಾಯಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನವನ್ನು ನೀಡಿ ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ ಎಂದರು.

ಕೊಡಗಿನಲ್ಲಿ ಸಿ ಅಂಡ್ ಡಿ ಭೂಮಿ ಮತ್ತು ಸೆಕ್ಷನ್ 4 ಅಧಿಸೂಚಿತ ಜಾಗವನ್ನು ಮೀಸಲು ಅರಣ್ಯ ಮಾಡುವ ಪ್ರಸ್ತಾವಕ್ಕೆ ರೈತರು ವ್ಯಾಪಕ ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಕುರಿತು ಸಮಿತಿ ರಚಿಸಬೇಕಾಗುತ್ತದೆ. ಸಮಿತಿ ವರದಿ ಕೊಟ್ಟ ನಂತರ ಸರ್ಕಾರ ಕ್ರಮ ವಹಿಸಲಿದೆ ಎಂದರು.

ಸರ್ಕಾರಿ ಭೂಮಿ: ಸರ್ಕಾರಿ ಭೂಮಿ ಭೂ ಗುತ್ತಿಗೆ ನೀಡುವುದಕ್ಕೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿರುವ ಬಗ್ಗೆ ಮಾತನಾಡಿ, ಸರ್ಕಾರಿ ಭೂಮಿ ಕೊಟ್ಟರೆ ವಿರೋಧ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ನಿವೇಶನ ಇಲ್ಲದಿರುವವರಿಗೆ, ಜಮೀನು ಇಲ್ಲದವರಿಗೂ ಭೂಮಿ ಕೊಡುತ್ತೇವೆ ಎಂದರು.

ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಕ್ರಮ:

ವನ್ಯಜೀವಿ ಮಾನವ ಸಂಘರ್ಷ ಕಾಡಂಚಿನ ಊರುಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ.. ಆನೆಗಳು, ಚಿರತೆಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ. ಹಾಗಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ ಕೈಕೊಳ್ಳಲಾಗುವುದು ಎಂದರು.

ಕಾವೇರಿ ನದಿ ಸ್ವಚ್ಛತೆಯ ಬಗ್ಗೆ ರಚಿಸಲಾಗಿದ್ದ ಸಮಿತಿ ಇನ್ನೂ ವರದಿ ನೀಡಿಲ್ಲ. ವರದಿ ನೀಡಿದ ನಂತರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.