ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ

| Published : Jul 19 2025, 02:00 AM IST

ಸಾರಾಂಶ

ವಿದ್ಯಾರ್ಥಿಗಳು ತಮ್ಮ ಓದು ಮತ್ತು ಭವಿಷ್ಯ ಕಟ್ಟಿಕೊಳ್ಳುವ ಕಡೆಗೆ ಗಮನ ಕೊಡಬೇಕೆ ವಿನಃ ಪ್ರೀತಿ, ಪ್ರೇಮದ ಬಲೆಗೆ ಬೀಳದೇ ಬದುಕು ಕಟ್ಟಿಕೊಳ್ಳಬೇಕು

ಧಾರವಾಡ: ಆಧುನಿಕ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿದ್ದು, ಯುವ ಪೀಳಿಗೆಗೆ ಮಾಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವ ಅಗತ್ಯವಿದೆ ಎಂದು ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.

ತಾಲೂಕಿನ ಉಪ್ಪಿನ ಬೆಟಗೇರಿಯ ಶ್ರೀಗುರು ವಿರೂಪಾಕ್ಷೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ಉಪ್ಪಿನಬೆಟಗೇರಿ ಪತ್ರಕರ್ತ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡುವ ಇಚ್ಚಾಶಕ್ತಿ ಇದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಈ ಸತ್ಯ ಅರಿತು ವಿದ್ಯಾರ್ಥಿಗಳು ಯಶಸ್ಸಿನತ್ತ ಮುನ್ನಡೆಯಬೇಕು. ಮಕ್ಕಳ ಸಾಧನೆ ಪೂರಕ ವಾತಾವರಣ ನಿರ್ಮಾಣ ಮಾಡುವಂತಹ ಕೆಲಸ ಶಿಕ್ಷಕರು, ಪಾಲಕರು ಮಾಡಬೇಕಿದೆ ಎಂದರು.

ಹಿರಿಯ ಪತ್ರಕರ್ತ ಡಾ. ಬಸವರಾಜ ಹೊಂಗಲ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದು ಮತ್ತು ಭವಿಷ್ಯ ಕಟ್ಟಿಕೊಳ್ಳುವ ಕಡೆಗೆ ಗಮನ ಕೊಡಬೇಕೆ ವಿನಃ ಪ್ರೀತಿ, ಪ್ರೇಮದ ಬಲೆಗೆ ಬೀಳದೇ ಬದುಕು ಕಟ್ಟಿಕೊಳ್ಳಬೇಕು. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪ್ರೀತಿ-ಪ್ರೇಮದ ಪ್ರಕರಣಗಳು ಹೆಚ್ಚುತ್ತಿದ್ದು, ಇವು ಕೊಲೆ, ಆತ್ಮಹತ್ಯೆ ಮತ್ತು ಕೌಟುಂಬಿಕ ಕಲಹಗಳಲ್ಲಿ ಅಂತ್ಯಕೊಳ್ಳುತ್ತಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಹೊಣೆ ಮಠ-ಮಾನ್ಯಗಳು ಮತ್ತು ಪೋಷಕರ ಮೇಲಿದೆ ಎಂದರು.

ಮೂರುಸಾವಿರ ವಿರಕ್ತಮಠದ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕಿ ಸೀಮಾ ಮಸೂತಿ, ಕಾಂಗ್ರೆಸ್‌ ಮುಖಂಡ ತವನಪ್ಪ ಅಷ್ಟಗಿ, ಕಲ್ಲಪ್ಪ ಪುಡಕಲಕಟ್ಟಿ, ಜಿ.ಆರ್. ಜವಳಗಿ, ಬಶೀರ ಅಹ್ಮದ ಮಾಳಗಿಮನಿ ಮಾತನಾಡಿದರು.

ಹಿರಿಯ ಪತ್ರಕರ್ತ ಶ್ರೀಶೈಲಯ್ಯ ಗೌರಿಮಠ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಪರಾಂಡೆ, ರಾಮಲಿಂಗಪ್ಪ ನವಲಗುಂದ, ಮಂಜುನಾಥ ಸಂಕಣ್ಣವರ, ಡಾ. ಎನ್.ಎಸ್. ಗಚ್ಚಿನಮಠ, ಮಕ್ತುಮಹುಸೇನ ಲಂಗೋಟಿ, ನಿಜಗುಣಿ ಹೂಲಿ ಇದ್ದರು.

ಪತ್ರಕರ್ತರಾದ ಪ್ರವೀಣ ಓಂಕಾರಿ, ಶಶಿಧರ ಬುದ್ನಿ, ಶಿವಪ್ರಭು ಈಸರಗೊಂಡ, ಚನ್ನಬಸಪ್ಪ ಲಗಮಣ್ಣವರ, ರಮೇಶ ಓರಣಕರ ಪಾಲ್ಗೊಂಡಿದ್ದರು. ಎಚ್.ಎಂ.ಸನದಿ ಸ್ವಾಗತಿಸಿದರು. ರಮೇಶ ಮಡ್ಡಿಕಾರ ನಿರೂಪಿಸಿದರು. ಪ್ರಕಾಶ ಹೂಗಾರ ವಂದಿಸಿದರು. ಶಾಲಾ ಮಕ್ಕಳಿಂದ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ನಿಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.