ಸಾರಾಂಶ
ನರಗುಂದ: ಸ್ವಂತ ಮನೆಗಳನ್ನು ಕಟ್ಟಿಕೊಂಡು ನೆಮ್ಮದಿಯ ಬದುಕು ನಡೆಸುತ್ತಿರುವ ಪ್ರತಿ ವ್ಯಕ್ತಿಗೂ ಮನೆಗಳನ್ನು ಕಟ್ಟಿಕೊಡುವ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಸರ್ಕಾರವು ಯೋಜನೆಗಳ ಮೂಲಕ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳು ಪ್ರಥಮ ಪಿಯುಸಿ ೧೧, ದ್ವಿತೀಯ ಪಿಯುಸಿ ೦೮ ಒಟ್ಟು ೧೯ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿ ಮಾತನಾಡಿದರು.ಲ್ಯಾಪ್‌ಟಾಪ್‌ಗಾಗಿ ಕಾರ್ಮಿಕ ಇಲಾಖೆಗೆ ಒಟ್ಟು ೩೧೮ ಅರ್ಜಿಗಳು ಬಂದಿದ್ದವು. ಹತ್ತನೇಯ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ೧೯ ಮಕ್ಕಳನ್ನು ಆಯ್ಕೆ ಮಾಡಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕರ ಎಲ್ಲ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುವುದು. ಕಾರ್ಮಿಕರಿಗೆ ಆರೋಗ್ಯ ತುಂಬಾ ಮುಖ್ಯವಾಗಿದೆ. ಅವರಿಗಾಗಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ನಂತರದಲ್ಲಿ ಕಾರ್ಮಿಕರ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ನಿಜವಾಗಿಯೂ ಕಾರ್ಮಿಕ ವೃತ್ತಿಯನ್ನು ಮಾಡುವವರನ್ನು ಹುಡುಕಿ ಅವರ ಮನೆ ಬಾಗಿಲಿಗೆ ಸ್ವತಃ ಅಧಿಕಾರಿಗಳೇ ಹೋಗಿ ಕಾರ್ಮಿಕರ ಕಾರ್ಡ್‌ಗಳನ್ನು ವಿತರಿಸಬೇಕು. ನಿಜವಾದ ಕಾರ್ಮಿಕರು ಕಾರ್ಡ್ ಸಿಗದೇ ವಂಚಿತರಾಗಬಾರದು. ಕಾರ್ಡ್‌ನಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿದ್ದು, ಅದನ್ನು ನಿಜವಾದ ಕಾರ್ಮಿಕರು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತ್ತವಾಡ, ರಾಜೇಶ್ವರಿ ಹವಾಲ್ದಾರ್, ಸದಸ್ಯರಾದ ಅನ್ನಪೂರ್ಣ ಯಲಿಗಾರ, ಪ್ರಶಾಂತ ಜೋಶಿ, ದೇವಣ್ಣ ಕಲಾಲ, ಚಂದ್ರಗೌಡ ಪಾಟೀಲ, ಜಿಲ್ಲಾ ಯೋಜನಾ ನಿರ್ದೇಶಕ ಸಂದೇಶ ಪಾಟೀಲ, ಹನುಮಂತ ಚಿತ್ರಗಾರ, ಶಿವಪ್ಪ ಬೋಳಶೆಟ್ಟಿ, ಸಿದ್ಧಾರೋಡ ಪಾತ್ರೋಟ, ಕಾರ್ಮಿಕ ನಿರೀಕ್ಷಕಿ ಪೂಜಾ ಶಿಂಧೆ, ಫಕೀರಪ್ಪ ಹಡಗಲಿ, ಸಿದ್ಧೇಶ ಹೂಗಾರ, ಪಾರೂಕಲಿ ಲೋದಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.